ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಭಾರತದ ಪುರುಷರ ಹಾಕಿ ತಂಡವು ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದೆ.
ಮಂಗಳವಾರ ನಡೆಯುವ ಸೆಮಿಫೈನಲ್ ಹಣಾಹಣಿಯಲ್ಲಿ ಮನ್‌ಪ್ರೀತ್ ಸಿಂಗ್ ಬಳಗವು ಬಲಿಷ್ಠ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
ಹಿಂದಿನ ಪಂದ್ಯದಲ್ಲಿ ಬ್ರಿಟನ್ ತಂಡವನ್ನು ಬಗ್ಗುಬಡಿದು ಬರೋಬ್ಬರಿ 49 ವರ್ಷಗಳ ನಂತರ ಸೆಮಿಫೈನಲ್‌ಗೆ ದಾಪುಗಾಲಿಟ್ಟಿರುವ ಭಾರತ ತಂಡ ಬೆಲ್ಜಿಯಂ ವಿರುದ್ಧವೂ ಆತ್ಮವಿಶ್ವಾಸದಿಂದ ಹೋರಾಡುವ ತವಕದಲ್ಲಿದೆ.
ಅನುಭವಿ ಹಾಗೂ ಯುವ ಆಟಗಾರರಿಂದ ಸಮ್ಮಿಳಿತಗೊಂಡಿರುವ ಮನ್‌ಪ್ರೀತ್ ಪಡೆ ಎಲ್ಲಾ ವಿಭಾಗಗಳಲ್ಲೂ ಶ್ರೇಷ್ಠ ಆಟ ಆಡಿದೆ. ಇದೇ ಸಾಮರ್ಥ್ಯವನ್ನು ಮುಂದುವರಿಸಿಕೊಂಡು ಹೋಗುವ ಸವಾಲು ಕೂಡ ತಂಡದ ಎದುರಿಗಿದೆ.
ದಿಲ್‌ಪ್ರೀತ್, ಗುರ್ಜಂತ್, ಹಾರ್ದಿಕ್, ಹರ್ಮನ್‌ಪ್ರೀತ್, ರೂಪಿಂದರ್ ಪಾಲ್ ಅವರು ಬೆಲ್ಜಿಯಂ ತಂಡದ ರಕ್ಷಣಾ ಕೋಟೆಗೆ ಸವಾಲಾಗಬಲ್ಲರು. ಅನುಭವಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಕೂಡ ಹಿಂದಿನ ಪಂದ್ಯಗಳಲ್ಲಿ ಎದುರಾಳಿಗಳ ಅನೇಕ ಪ್ರಯತ್ನಗಳನ್ನು ವಿಫಲಗೊಳಿಸಿದ್ದರು. ಹೀಗಾಗಿ ಅವರ ಮೇಲೂ ನಿರೀಕ್ಷೆ ಹೆಚ್ಚಿದೆ.
ಹೋದ ವರ್ಷ ನಡೆದಿದ್ದ ಎಫ್‌ಐಎಚ್ ಪ್ರೊ ಲೀಗ್‌ನ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ತಂಡಕ್ಕೆ ಶರಣಾಗಿದ್ದ ಭಾರತ, ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿತ್ತು. ಆ ಗೆಲುವಿನ ಬಲ ಈಗ ತಂಡದ ಬೆನ್ನಿಗಿದೆ. 2019ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಭಾರತವು ಎದುರಾಳಿಗಳ ವಿರುದ್ಧದ ಮೂರೂ ಪಂದ್ಯಗಳನ್ನೂ ಜಯಿಸಿತ್ತು. ಇದು ಕೂಡ ಆಟಗಾರರ ವಿಶ್ವಾಸ ಹೆಚ್ಚಲು ಕಾರಣವಾಗಿದೆ.
‘ಬೆಲ್ಜಿಯಂ ಹಾಗೂ ಆಸ್ಟ್ರೇಲಿಯಾ ವಿಶ್ವದ ಬಲಿಷ್ಠ ತಂಡಗಳು. ಆ ತಂಡಗಳ ವಿರುದ್ಧದ ಹಣಾಹಣಿ ಸವಾಲಿನದ್ದಾಗಿರಲಿದೆ. ಹಿಂದಿನ ಕೆಲ ಟೂರ್ನಿಗಳಲ್ಲಿ ನಾವು ಬೆಲ್ಜಿಯಂ ವಿರುದ್ಧ ಚೆನ್ನಾಗಿಯೇ ಆಡಿದ್ದೇವೆ. ಇದರಿಂದ ನಮ್ಮ ವಿಶ್ವಾಸ ಇಮ್ಮಡಿಸಿದ್ದು, ರಕ್ಷಣಾ ವಿಭಾಗವನ್ನು ಬಲಪಡಿಸಿಕೊಂಡು ಆಡುವತ್ತ ಚಿತ್ತ ನೆಟ್ಟಿದ್ದೇವೆ’ ಎಂದು ಭಾರತ ತಂಡದ ನಾಯಕ ಮನ್‌ಪ್ರೀತ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.