ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್ 2020: ಬಾಕ್ಸಿಂಗ್ ಅಂಕಣದಲ್ಲಿ ಮೇರಿ ‘ಅಮಿತೋತ್ಸಾಹ’

ಭಾರತದ ಕನಸಿನ ಪಯಣ
Last Updated 9 ಜುಲೈ 2021, 19:31 IST
ಅಕ್ಷರ ಗಾತ್ರ

ಬಾಕ್ಸಿಂಗ್ ಲೋಕದ ದಂತಕಥೆ ಮೇರಿ ಕೋಮ್ ಮೇಲೆ ಈಗ ಕ್ರೀಡಾಪ್ರೇಮಿಗಳ ಚಿತ್ತ ನೆಟ್ಟಿದೆ. ಇದೇ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನ ಉದ್ಘಾಟನೆಯಲ್ಲಿ ತ್ರಿವರ್ಣ ಧ್ವಜಧಾರಿಯಾಗಿ ಭಾರತ ಮಹಿಳಾ ತಂಡವನ್ನು ಅವರು ಮುನ್ನಡೆಸಲಿದ್ದಾರೆ. ಇದೇ ಬಾವುಟ ಬಾಕ್ಸಿಂಗ್ ಅಂಕಣದಲ್ಲಿ ವಿಜಯಪತಾಕೆಯಾಗಿ ಅವರ ಕೈಯಲ್ಲಿ ರಾರಾಜಿಸಬೇಕೆಂಬ ನಿರೀಕ್ಷೆಯೂ ಈಗ ಗರಿಗೆದರಿದೆ.

ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಮತ್ತು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಬಾಕ್ಸರ್ ಮೇರಿಯ ಮ್ಯಾಜಿಕ್ ಜಪಾನಿನ ನೆಲದಲ್ಲಿ ನಡೆದರೆ ಅದೊಂದು ಅಭೂತಪೂರ್ವ ದಾಖಲೆಯಾಗಿ ಇತಿಹಾಸದ ಪುಟ ಸೇರುವುದು ಖಚಿತ.

ಮೂರು ಮಕ್ಕಳ ತಾಯಿಯೂ ಆಗಿರುವ ಮೇರಿ, 51 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಈಚೆಗಷ್ಟೇ ದುಬೈನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮೇರಿ ಬೆಳ್ಳಿ ಪದಕ ಜಯಿಸಿದ್ದರು. ಮಣಿಪುರದ ಬಡಕುಟುಂಬವೊಂದರಲ್ಲಿ ಜನಿಸಿ, ಅಪ್ಪನ ವಿರೋಧವಿದ್ದರೂ ಬಾಕ್ಸಿಂಗ್ ಕ್ರೀಡೆಯಲ್ಲಿ ತೊಡಗಿಸಿಕೊಂಡು ಉನ್ನತ ಸಾಧನೆ ಮಾಡಿರುವ 38 ವರ್ಷದ ಮೇರಿಗೆ ಇದು ಬಹುತೇಕ ಕೊನೆಯ ಒಲಿಂಪಿಕ್ಸ್‌. ತಮ್ಮ ಯಶೋಗಾಥೆಯ ಪಯಣಕ್ಕೆ ಪದಕದ ಮೆರುಗು ತುಂಬಿ ಕೈಗವಸುಗಳನ್ನು ಕಳಚುವ ಛಲದಲ್ಲಿದ್ದಾರೆ.

ಅವರ ಸಾಧನೆಯ ಪ್ರೇರಣೆಯಿಂದಾಗಿ ಹಲವು ಹೆಣ್ಣುಮಕ್ಕಳು ಬಾಕ್ಸಿಂಗ್ ಕ್ರೀಡೆಯತ್ತ ಆಕರ್ಷಿತರಾಗಿದ್ದು ಸುಳ್ಳಲ್ಲ. ಹರಿಯಾಣದ ಪೂಜಾರಾಣಿ ಕೂಡ ಅವರಲ್ಲಿ ಒಬ್ಬರು. ಈಚೆಗೆ ಏಷ್ಯನ್ ಚಾಂಪಿಯನ್‌ಷಿಪ್‌ನ ಮಿಡಲ್‌ವೇಟ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ಪೂಜಾ ಟೋಕಿಯೊದಲ್ಲಿಯೂ ಮಿಂಚುವ ಛಲದಲ್ಲಿದ್ದಾರೆ.

ಈ ಸಲದ ತಂಡದಲ್ಲಿ ನಾಲ್ವರು ಮಹಿಳೆಯರು ಮತ್ತು ಐವರು ಪುರುಷ ಬಾಕ್ಸರ್‌ಗಳು ಸ್ಥಾನ ಪಡೆದಿದ್ದಾರೆ.

ವಿಜೇಂದರ್ ಸಿಂಗ್, ಪೂಜಾ ರಾಣಿ, ಅಮಿತ್ ಪಂಘಾಲ್, ವಿಕಾಸ್ ಕ್ರಿಷನ್
ವಿಜೇಂದರ್ ಸಿಂಗ್, ಪೂಜಾ ರಾಣಿ, ಅಮಿತ್ ಪಂಘಾಲ್, ವಿಕಾಸ್ ಕ್ರಿಷನ್

ಬಾಕ್ಸಿಂಗ್ ಕ್ರೀಡೆಯಲ್ಲಿ ಭಾರತವೂ ಪದಕ ಜಯಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ವಿಜೇಂದರ್ ಸಿಂಗ್. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅವರು ಕಂಚು ಜಯಿಸಿದರು. ಮಿಡ್ಲ್‌ವೇಟ್ ವಿಭಾಗದಲ್ಲಿ ಅವರು ಸಾಧನೆ ಮಾಡಿದ್ದರು. ಈ ಬಾರಿ ಅಮಿತ್ ಪಂಘಾಲ್ ಅವರ ಮೇಲೆ ಭರವಸೆ ಇದೆ. ಅವರು 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದರು. ಅಲ್ಲದೇ ಈಚೆಗೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿಯೂ ಪದಕ ಸಾಧನೆ ಮಾಡಿದ್ದರು. ಅದರಿಂದಾಗಿ ಅವರಿಂದ ಹೆಚ್ಚು ನಿರೀಕ್ಷೆ ಇದೆ.

ಈ ಹಿಂದಿನ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ವಿಕಾಸ್ ಕ್ರಿಷನ್ ಕೂಡ ಈ ಬಾರಿ ಕೊರಳಿಗೆ ಪದಕದ ಅಲಂಕಾರ ಮಾಡಿಕೊಳ್ಳುವ ಛಲದಲ್ಲಿದ್ದಾರೆ. ಶೂಟಿಂಗ್, ಕುಸ್ತಿಯ ನಂತರ ಬಾಕ್ಸಿಂಗ್‌ ಕಣದಿಂದಲೂ ಪದಕ ಜಯಿಸುವ ಭರವಸೆ ಭಾರತೀಯರ ಕಂಗಳಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT