ಶನಿವಾರ, ಸೆಪ್ಟೆಂಬರ್ 25, 2021
23 °C
ಟೋಕಿಯೊ ಅಂಗಳದಲ್ಲಿ ರಾಷ್ಟ್ರಗೀತೆ ಮೊಳಗಿಸಿದ ಭಾರತದ ಪ್ರತಿಭೆ: ಒಲಿಂಪಿಕ್ ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕದ ಶ್ರೇಯ

Tokyo Olympics: ಚಿನ್ನದ ಹುಡುಗ ನೀರಜ್ ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್ ಕೂಟದ ಅಂಗಳದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿತು.  ಅದಕ್ಕೆ ಕಾರಣವಾಗಿದ್ದು ‘ಚಿನ್ನದ ಹುಡುಗ’ ನೀರಜ್ ಚೋಪ್ರಾ. ಒಲಿಂಪಿಕ್ಸ್‌ನ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಸ್ವರ್ಣಪದಕ ಗೆದ್ದ ಮೊದಲ ಅಥ್ಲೀಟ್ ಎಂಬ ಶ್ರೇಯಕ್ಕೆ ಅವರು ಪಾತ್ರರಾದರು.

ಟೋಕಿಯೊದಲ್ಲಿ ಶನಿವಾರ ಸಂಜೆ ನಡೆದ ಪುರುಷರ ಜಾವೆಲಿನ್ ಥ್ರೋನಲ್ಲಿ 87.58 ಮೀಟರ್ಸ್ ದೂರ ಎಸೆತದ ಸಾಧನೆ ಮಾಡಿದ ಅವರು, ತಮ್ಮ ಮೈಮೇಲೆ ತ್ರಿವರ್ಣ ಧ್ವಜ ಹೊದ್ದುಕೊಂಡು ನಲಿದರು. ಸ್ಥಿತಪ್ರಜ್ಞನಂತೆ ನಸುನಗುತ್ತ ಮನಗೆದ್ದರು. 23 ವರ್ಷದ ಹುಡುಗ, ವಿಜಯವೇದಿಕೆಯಲ್ಲಿ ಮಿರಿಮಿರಿ ಹೊಳೆವ ಚಿನ್ನದ ಪದಕವನ್ನು ತನ್ನ ಕೈಯಾರೆ ಕೊರಳಿಗೇರಿಸಿಕೊಂಡರು. ಆಗ ಅವರ ಕಂಗಳಲ್ಲಿ ಸಂತಸದ ಹನಿಗಳು ಜಿನುಗಿದ್ದವು.

ಕೋವಿಡ್ ತಡೆ ನಿರ್ಬಂಧದಿಂದಾಗಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿರಲಿಲ್ಲ. ಆದರೆ, ಟಿವಿ ಪರದೆಗಳ ಮುಂದೆ, ಸಾಮಾಜಿಕ ಜಾಲತಾಣಗಳ ಮೂಲಕ ಕಣ್ತುಂಬಿಕೊಂಡ ಕ್ರೀಡಾಭಿಮಾನಿಗಳ ಸಂತಸ ಹೊನಲಾಗಿ ಹರಿಯಿತು. ಅಥ್ಲೆಟಿಕ್ಸ್‌ನ ಈ ವಿಭಾಗದಲ್ಲಿ ಮೊದಲಿನಿಂದಲೂ ಇದ್ದ ಯುರೋಪ್, ರಷ್ಯಾ, ಅಮೆರಿಕ ದೇಶಗಳ ಪ್ರಾಬಲ್ಯವನ್ನು ನೀರಜ್ ಮುರಿದರು.

ಪ್ರತಿ ಸುತ್ತಿನಲ್ಲಿ ನೀರಜ್‌ ಸಾಧನೆ

ಸುತ್ತು;ದೂರ (ಮೀ)

ಒಂದು;87.03

ಎರಡು;87.58

ಮೂರು;76.79

ನಾಲ್ಕು;x

ಐದು;x

ಆರು;84.24

ಹೆಚ್ಚು ದೂರ ಎಸೆದ ಐವರು

ಕ್ರೀಡಾಪಟು;ದೇಶ;ಅಂತರ

ನೀರಜ್ ಚೋಪ್ರಾ;ಭಾರತ;87.58

ಜಾಕುಬ್‌ ವಡ್ಲೆಜ್‌;ಜೆಕ್‌ ಗಣರಾಜ್ಯ;86.67

ವಿಟೆಜ್ಲಾವ್ ವೆಸೆಲಿ;ಜೆಕ್‌ ಗಣರಾಜ್ಯ;85.44

ಜುಲಿಯನ್ ವೆಬರ್;ಜರ್ಮನಿ;85.30

ಅರ್ಷದ್ ನದೀಮ್;ಪಾಕಿಸ್ತಾನ;84.62

ನೀರಜ್ ಚೋಪ್ರಾ ಪದಕಗಳ ಸಾಧನೆ

ಕ್ರೀಡಾಕೂಟ;ಸ್ಥಳ;ಇಸವಿ;ಪದಕ

ಕಾಮನ್ವೆಲ್ತ್‌;ಗೋಲ್ಡ್‌ಕೋಸ್ಟ್‌;2018;ಚಿನ್ನ

ಏಷ್ಯನ್‌ ಗೇಮ್ಸ್‌;ಜಕಾರ್ತ;2018;ಚಿನ್ನ

ಏಷ್ಯನ್ ಚಾಂಪಿಯನ್‌ಷಿಪ್‌;ಭುವನೇಶ್ವರ;2017;ಚಿನ್ನ

ದಕ್ಷಿಣ ಏಷ್ಯಾ ಗೇಮ್ಸ್‌;ಗುವಾಹಟಿ;2016;ಚಿನ್ನ

ವಿಶ್ವ ಜೂ.ಚಾಂಪಿಯನ್‌ಷಿಪ್‌;ಬಿಡ್‌ಘೋಷ್;2016;ಚಿನ್ನ

ಏಷ್ಯನ್ ಜೂ.ಚಾಂಪಿಯನ್‌ಷಿಪ್‌;ಹೊ ಚಿ ಮಿನ್ ಸಿಟಿ;2016;ಬೆಳ್ಳಿ

ಮಿಲ್ಖಾ ಸಿಂಗ್‌ ಅವರಿಗೆ ಪದಕ ಅರ್ಪಣೆ

ಚಿನ್ನದ ಪದಕವನ್ನು ದಿಗ್ಗಜ ಅಥ್ಲೀಟ್‌, ಈಚೆಗೆ ಕೋವಿಡ್‌ನಿಂದ ನಿಧನರಾದ ಮಿಲ್ಖಾ ಸಿಂಗ್‌ ಅವರಿಗೆ ನೀರಜ್ ಚೋಪ್ರಾ ಅರ್ಪಸಿದ್ದಾರೆ.

‘ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಮೊಳಗುವುದನ್ನು ಕೇಳಲು ಮಿಲ್ಖಾ ಸಿಂಗ್ ಅವರು ಬಯಸಿದ್ದರು. ಅವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಆಸೆ ಈಡೇರಿದೆ’ ಎಂದು ನೀರಜ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು