ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ರಟ್ಟೆಯ ಕಸುವು- ಚಿನ್ನದ ಚೆಲುವು

Last Updated 7 ಆಗಸ್ಟ್ 2021, 20:47 IST
ಅಕ್ಷರ ಗಾತ್ರ

ಟೋಕಿಯೊ: ಭಾರತಕ್ಕೆ ಒಲಿಂಪಿಕ್ಸ್‌ನ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಮೊದಲ ಪ್ರಯತ್ನದಲ್ಲೇ 87 ಮೀಟರ್‌ಗಳಿಗೂ ದೂರ ಜಾವೆಲಿನ್ ಎಸೆದ ನೀರಜ್ ಚೋಪ್ರಾ ಅವರನ್ನು ದಾಟಿ ಮುಂದೆ ಸಾಗಲು ವಿಶ್ವದ ಘಟಾನುಘಟಿಗಳಿಗೆ ಸಾಧ್ಯವಾಗಲಿಲ್ಲ.

ಎರಡನೇ ಪ್ರಯತ್ನದಲ್ಲಿ ಇನ್ನಷ್ಟು ಸಾಧನೆ ಮಾಡಿದ ನೀರಜ್ ಚೋಪ್ರಾ ಅವರ ದೂರ ಮೂರನೇ ಯತ್ನದಲ್ಲಿ ಕೊಂಚ ಕಡಿಮೆಯಾಯಿತು. ನಂತರದ ಎರಡು ಪ್ರಯತ್ನಗಳಲ್ಲಿ ವೈಫಲ್ಯ ಕಂಡರು. ಕೊನೆಯ ಪ್ರಯತ್ನದಲ್ಲಿ ಕನಿಷ್ಠ ದೂರ ಎಸೆದರೂ ಅಷ್ಟರಲ್ಲಿ ಉಳಿದವರೆಲ್ಲರೂ ಹಿನ್ನಡೆ ಅನುಭವಿಸಿದ್ದರು.

ಪದಕ ಗೆಲ್ಲುವ ನೆಚ್ಚಿನ ಕ್ರೀಡಾಪಟು ಎಂದೆನಿಸಿಕೊಂಡಿದ್ದ ಜರ್ಮನಿಯ ಜೊಹಾನ್ಸ್ ವೆಟರ್ ಅವರನ್ನು ಹಿಂದಿಕ್ಕಿದ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಮತ್ತು ವಿಟೆಜ್ಲವ್‌ ವೆಸೆಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು. ವೆಟರ್ ಒಂಬತ್ತನೇ ಸ್ಥಾನಕ್ಕೆ ಕುಸಿದರೆ ಜರ್ಮನಿಯ ಮತ್ತೊಬ್ಬ ಅಥ್ಲೀಟ್ ಜುಲಿಯನ್ ವೆಬರ್ ನಾಲ್ಕನೇ ಸ್ಥಾನ ಗಳಿಸಿದರು.

ಹರಿಯಾಣದ ಪಾನಿಪತ್‌ನ ಖಾಂದ್ರ ಗ್ರಾಮದ ರೈತನ ಪುತ್ರನಾದ 23 ವರ್ಷದ ನೀರಜ್ ದೇಶಕ್ಕೆ ಟೋಕಿಯೊದಲ್ಲಿ ಏಳನೇ ಪದಕ ಗಳಿಸಿಕೊಟ್ಟರು. ಈ ಮೂಲಕ ಭಾರತದ ಗರಿಷ್ಠ ಸಾಧನೆಗೂ ಕಾರಣರಾದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭಾರತ ಆರು ಪದಕ ಗಳಿಸಿತ್ತು.

ಅರ್ಹತಾ ಸುತ್ತಿನಲ್ಲಿ 86.59 ಮೀಟರ್‌ಗಳ ಗರಿಷ್ಠ ಸಾಧನೆ ಮಾಡಿದ ನೀರಜ್‌ ಪದಕ ಗೆಲ್ಲುವ ನೆಚ್ಚಿನ ಎಸೆತಗಾರನಾಗಿಯೇ ಕಣಕ್ಕೆ ಇಳಿದಿದ್ದರು. ಈ ಋತುವಿನಲ್ಲಿ ಗರಿಷ್ಠ ಸಾಧನೆ ಮಾಡಿರುವ, ಏಳು ಬಾರಿ 90 ಮೀಟರ್‌ಗಳಿಗೂ ಹೆಚ್ಚು ದೂರ ಎಸೆದಿದ್ದ ವೆಟರ್ ಮೊದಲ ಮೂರು ಪ್ರಯತ್ನಗಳ ನಂತರ ಹೊರನಡೆದರು. ಅವರ ಗರಿಷ್ಠ ಸಾಮರ್ಥ್ಯ 82.52 ಆಗಿತ್ತು.

ಪ್ರತಿ ಸುತ್ತಿನಲ್ಲಿ ನೀರಜ್‌ ಸಾಧನೆ

ಸುತ್ತು;ದೂರ (ಮೀ)

ಒಂದು;87.03

ಎರಡು;87.58

ಮೂರು;76.79

ನಾಲ್ಕು;x

ಐದು;x

ಆರು;84.24

ಹೆಚ್ಚು ದೂರ ಎಸೆದ ಐವರು

ಕ್ರೀಡಾಪಟು;ದೇಶ;ಅಂತರ

ನೀರಜ್ ಚೋಪ್ರಾ;ಭಾರತ;87.58

ಜಾಕುಬ್‌ ವಡ್ಲೆಜ್‌;ಜೆಕ್‌ ಗಣರಾಜ್ಯ;86.67

ವಿಟೆಜ್ಲಾವ್ ವೆಸೆಲಿ;ಜೆಕ್‌ ಗಣರಾಜ್ಯ;85.44

ಜುಲಿಯನ್ ವೆಬರ್;ಜರ್ಮನಿ;85.30

ಅರ್ಷದ್ ನದೀಮ್;ಪಾಕಿಸ್ತಾನ;84.62

ನೀರಜ್ ಚೋಪ್ರಾ ಪದಕಗಳ ಸಾಧನೆ

ಕ್ರೀಡಾಕೂಟ;ಸ್ಥಳ;ಇಸವಿ;ಪದಕ

ಕಾಮನ್ವೆಲ್ತ್‌;ಗೋಲ್ಡ್‌ಕೋಸ್ಟ್‌;2018;ಚಿನ್ನ

ಏಷ್ಯನ್‌ ಗೇಮ್ಸ್‌;ಜಕಾರ್ತ;2018;ಚಿನ್ನ

ಏಷ್ಯನ್ ಚಾಂಪಿಯನ್‌ಷಿಪ್‌;ಭುವನೇಶ್ವರ;2017;ಚಿನ್ನ

ದಕ್ಷಿಣ ಏಷ್ಯಾ ಗೇಮ್ಸ್‌;ಗುವಾಹಟಿ;2016;ಚಿನ್ನ

ವಿಶ್ವ ಜೂ.ಚಾಂಪಿಯನ್‌ಷಿಪ್‌;ಬಿಡ್‌ಘೋಷ್;2016;ಚಿನ್ನ

ಏಷ್ಯನ್ ಜೂ.ಚಾಂಪಿಯನ್‌ಷಿಪ್‌;ಹೊ ಚಿ ಮಿನ್ ಸಿಟಿ;2016;ಬೆಳ್ಳಿ

***

ಹರಿಯಾಣ ಸರ್ಕಾರದಿಂದ ₹6 ಕೋಟಿ ಬಹುಮಾನ

ಹರಿಯಾಣ ಸರ್ಕಾರವು ನೀರಜ್ ಚೋಪ್ರಾ ಅವರಿಗೆ ₹ ಆರು ಕೋಟಿ ನೀಡಲಿದೆ ಎಂದು ಮುಖ್ಯಮಂತ್ರಿ ಎಂ.ಎಲ್‌.ಖಟ್ಟರ್ ತಿಳಿಸಿದ್ದಾರೆ. ರಾಜ್ಯದ ಪಂಚಕುಲದಲ್ಲಿ ತಲೆ ಎತ್ತಲಿರುವ ಅಥ್ಲೆಟಿಕ್ಸ್‌ ಕೇಂದ್ರಕ್ಕೆ ಚೋಪ್ರಾ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗುವುದು ಎಂದೂ ಅವರು ವಿವರಿಸಿದ್ದಾರೆ.

ರಾಜ್ಯದ ನೀರಜ್ ಚೋಪ್ರಾ, ರವಿ ದಹಿಯಾ ಮತ್ತು ಬಜರಂಗ್ ಪೂನಿಯಾ ಅವರನ್ನು ಗೌರವಿಸುವ ಸಮಾರಂಭ ಆಗಸ್ಟ್ 13ರಂದು ಪಂಚಕುಲದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಪಂಜಾಬ್ ಸರ್ಕಾರವು ನೀರಜ್‌ ಅವರಿಗೆ ₹ 2 ಕೋಟಿ ಹಣ ನೀಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

***

ಬಿಸಿಸಿಐನಿಂದ ಕೋಟಿ ಕೊಡುಗೆ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ‍ಪದಕಗಳನ್ನು ಗೆದ್ದಿರುವ ದೇಶದ ಕ್ರೀಡಾ ಪಟುಗಳಿಗೆ ಹಣಕಾಸಿನ ಕೊಡುಗೆ ನೀಡಲಿದೆ. ₹ ಒಂದು ಕೋಟಿಯನ್ನು ನೀರಜ್ ಚೋಪ್ರಾಗೆ ಮೀಸಲಿಡಲಿದೆ. ಬೆಳ್ಳಿ ಪದಕಗಳನ್ನು ಗೆದ್ದಿರುವ ಮೀರಾಬಾಯಿ ಚಾನು ಮತ್ತು ರವಿ ದಹಿಯಾ ಅವರಿಗೆ ತಲಾ ₹ 50 ಲಕ್ಷ ನೀಡುವುದಾಗಿ ಮಂಡಳಿಯ ಕಾರ್ಯದರ್ಶಿ ಜಯ ಶಾ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಕಂಚಿನ ಪದಕ ಗಳಿಸಿರುವ ಕುಸ್ತಿಪಟು ಬಜರಂಗ್ ಪೂನಿಯಾ, ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಮತ್ತು ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು ಅವರಿಗೆ ತಲಾ ₹ 25 ಲಕ್ಷ, ಕಂಚಿನ ಪದಕ ಗೆದ್ದಿರುವ ಪುರುಷರ ಹಾಕಿ ತಂಡಕ್ಕೆ ₹ 1.25 ಕೋಟಿ ನೀಡಲು ನಿರ್ಧರಿಸಿರುವುದಾಗಿ ಅವರು ವಿವರಿಸಿದ್ದಾರೆ.

***

ಮಿಲ್ಖಾ ಸಿಂಗ್‌ ಅವರಿಗೆ ಪದಕ ಅರ್ಪಣೆ

ಚಿನ್ನದ ಪದಕವನ್ನು ದಿಗ್ಗಜ ಅಥ್ಲೀಟ್‌, ಈಚೆಗೆ ಕೋವಿಡ್‌ನಿಂದ ನಿಧನರಾದ ಮಿಲ್ಖಾ ಸಿಂಗ್‌ ಅವರಿಗೆ ನೀರಜ್ ಚೋಪ್ರಾ ಅರ್ಪಸಿದ್ದಾರೆ.

‘ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಮೊಳಗುವುದನ್ನು ಕೇಳಲು ಮಿಲ್ಖಾ ಸಿಂಗ್ ಅವರು ಬಯಸಿದ್ದರು. ಅವರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಆಸೆ ಈಡೇರಿದೆ’ ಎಂದು ನೀರಜ್ ಹೇಳಿದ್ದಾರೆ.

ಎಲಾನ್‌ ಗ್ರೂಪ್‌ನಿಂದ ₹ 25 ಲಕ್ಷ

ಗುರುಗ್ರಾಮದ ರಿಯಾಲಿಟಿ ಸಂಸ್ಥೆ ಎಲಾನ್ ಗ್ರೂಪ್‌ ನೀರಜ್ ಚೋಪ್ರಾ ಅವರಿಗೆ ₹ 25 ಲಕ್ಷ ನೀಡಲಿದೆ. ಕಂಪನಿಯ ಅಧ್ಯಕ್ಷ ರಾಕೇಶ್ ಕಪೂರ್ ಅವರು ಶನಿವಾರ ಈ ವಿಷಯ ತಿಳಿಸಿದ್ದಾರೆ. ‘ದೇಶಕ್ಕೆ ಇಂದು ಸಂಭ್ರಮದ ದಿನ. ನೀರಜ್ ಅವರು ಗೌರವ ತಂದಿದ್ದಾರೆ. ಕ್ರೀಡಾಕುಟುಂಬದಿಂದ ಬಂದಿರುವ ನಾನು ಕಂ‍ಪನಿಯ ಪರವಾಗಿ ಸಂತೋಷದಿಂದ ಅವರಿಗೆ ಗೌರವ ಸಲ್ಲಿಸುತ್ತೇನೆ’ ಎಂದು ರಾಕೇಶ್ ಹೇಳಿದ್ದಾರೆ.

ಇಂಡಿಗೊ ವಿಮಾನ ಕಂಪನಿ ಒಂದು ವರ್ಷ ಉಚಿತ ಪ್ರಯಾಣದ ಕೊಡುಗೆ ಘೋಷಿಸಿದೆ.

***

ತೂಕ ಇಳಿಸಲು ಟ್ರ್ಯಾಕ್‌ ಹಿಡಿದ ಹುಡುಗ

ನೀರಜ್ ಚೋಪ್ರಾ ಅಥ್ಲೆಟಿಕ್ಸ್ ಟ್ರ್ಯಾಕ್‌ಗೆ ಇಳಿಯಲು ಕಾರಣ ಬಾಲ್ಯದಲ್ಲಿ ಅವರ ದೇಹತೂಕ. ಗುಂಡುಗುಂಡಾಗಿದ್ದ ಅವರು ತೂಕ ಕಡಿಮೆ ಮಾಡುವುದಕ್ಕಾಗಿ ಅಥ್ಲೆಟಿಕ್ಸ್ ಆಯ್ಕೆ ಮಾಡಿಕೊಂಡಿದ್ದರು. ಆ ಹಾದಿಯಲ್ಲಿ ಈಗ ಚಿನ್ನದ ಹೂ ಅರಳಿದೆ.

ಒಂದು ಶತಮಾನದಿಂದ ಭಾರತ ಕಾಯುತ್ತಿದ್ದ ಚಿನ್ನದ ಗಳಿಗೆಯನ್ನು ಕಾಣಿಕೆ ನೀಡಿದ ಚೋಪ್ರಾ ಅವರ ಅವಿಭಕ್ತ ಕುಟುಂಬದಲ್ಲಿ ಒಟ್ಟು 17 ಮಂದಿ ಇದ್ದಾರೆ. ಅಂಥ ‘ದೊಡ್ಡ’ ಮನೆಯಲ್ಲಿ ಬೆಳೆದ ಹುಡುಗ ಸಣ್ಣವನಿದ್ದಾಗ ಮರ ಏರುತ್ತ, ಜಮೀನುಗಳಲ್ಲಿ ಮೇಯುತ್ತಿದ್ದ ಕೋಣಗಳ ಬಾಲ ಹಿಡಿದು ಕೀಟಲೆ ಮಾಡುತ್ತಿದ್ದ. ಆ ಹುಡುಗನಿಗೆ ಶಿಸ್ತು ಕಲಿಸುವುದಕ್ಕಾಗಿ ತಂದೆ ಸತೀಶ್ ಕುಮಾರ್ ಕ್ರೀಡೆಯಲ್ಲಿ ಅಭ್ಯಾಸ ಮಾಡಲು ಒತ್ತಾಯಿಸಿದರು. ಮೊದಲು ಒಪ್ಪಲಿಲ್ಲವಾದರೂ ಕೊನೆಗೆ ಓಟದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು. ಹೀಗಾಗಿ ಪಾನಿಪತ್‌ನ ಶಿವಾಜಿ ಕ್ರೀಡಾಂಗಣಕ್ಕೆ ಅವರ ಪಯಣ ಬೆಳೆಯಿತು. ನಂತರ ಪಂಚಕುಲಾದ ತವು ದೇವಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಯಿತು.

ಅಲ್ಲಿ ಜಾವೆಲಿನ್ ಎಸೆಯಲು ಕಲಿತ ನೀರಜ್ 2016ರ ಜೂನಿಯರ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದರು.86.48 ಮೀ ದೂರ ಎಸೆದ ಅವರು 20 ವರ್ಷದೊಳಗಿನವರ ವಿಶ್ವದಾಖಲೆಯನ್ನೂ ಮುರಿದಿದ್ದರು.

***

‘ಹೊಸ’ ಎಸ್‌ಯುವಿ ಕಾರು ಕೊಡುಗೆ

ಮಹಿಂದ್ರಾ ಕಂಪನಿ ಹೊಸದಾಗಿ ರಸ್ತೆಗೆ ಇಳಿಸಲಿರುವ ಎಸ್‌ಯುವಿ ಎಕ್ಸ್‌ಯುವಿ 700 ಕಾರನ್ನು ನೀರಜ್ ಚೋಪ್ರಾಗೆ ಕೊಡುಗೆಯಾಗಿ ನೀಡುವುದಾಗಿ ಮಹಿಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹಿಂದ್ರಾ ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ಆನಂದ್ ಅವರ ಹಿಂಬಾಲಕರಾಗಿರುವ ವ್ಯಕ್ತಿಯೊಬ್ಬರು ನೀರಜ್‌ಗೆ ಏನು ಕೊಡುಗೆ ನೀಡುತ್ತೀರಿ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಅವರು ‘ಹೊಸ ಕಾರನ್ನು ನೀರಜ್‌ ಅವರಿಗೆ ಅಭಿಮಾನದಿಂದ ಉಡುಗೊರೆಯಾಗಿ ನೀಡುವೆವು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT