ಭಾನುವಾರ, ಜೂಲೈ 12, 2020
22 °C
ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯ ನರೀಂದರ್‌ ಬಾತ್ರಾ ವಿಶ್ವಾಸ

ಕೋವಿಡ್–19 ಭೀತಿ | 2021ರಲ್ಲಿ ಒಲಿಂಪಿಕ್ಸ್ ಆಯೋಜನೆ‌ ಖಚಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂದೂಡಿಕೆಯಾಗಿರುವ 2020ರ ಟೋಕಿಯೊ ಒಲಿಂಪಿಕ್‌ ಕ್ರೀಡಾಕೂಟವು ಮುಂದಿನ ವರ್ಷ ಖಂಡಿತವಾಗಿ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಸದಸ್ಯ ನರೀಂದರ್‌ ಬಾತ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಾಣುವಿಗೆ ಲಸಿಕೆ ಕಂಡುಹಿಡಿಯದಿದ್ದರೆ ಒಲಿಂಪಿಕ್ಸ್‌ ಆಯೋಜನೆ ಕಷ್ಟವಾಗಲಿದೆ ಎಂಬ ಕಳವಳ ವ್ಯಕ್ತವಾಗುತ್ತಿರುವ ಹಂತದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಆನ್‌ಲೈನ್‌ ಮೂಲಕ ಶನಿವಾರ ನಡೆದ ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ನ ವಿಶೇಷ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೊರೊನಾ ಮಹಾಮಾರಿಗೆ ಚುಚ್ಚುಮದ್ದು ಕಂಡುಹಿಡಿಯದೇ, ಟೋಕಿಯೊ ಒಲಿಂಪಿಕ್ಸ್ ನಡೆಯುವ ಬಗ್ಗೆ ಕೆಲವು ವಿಜ್ಞಾನಿಗಳು ಹಾಗೂ ವೈದ್ಯರು ಇತ್ತೀಚೆಗೆ ಅನುಮಾನ ವ್ಯಕ್ತಪಡಿಸಿದ್ದರು. ಜಪಾನ್‌ ಮಾತ್ರವಲ್ಲ; ವಿಶ್ವದಾದ್ಯಂತ ಕೊರೊನಾ ನಿಯಂತ್ರಣಕ್ಕೆ ಬಂದರೆ ಮಾತ್ರ 2021ರ ಜುಲೈನಲ್ಲಿ ಕೂಟ ಆಯೋಜನೆ ಸಾಧ್ಯವಾಗಬಹುದು ಎಂದು ಜಪಾನ್‌ನ ವೈದ್ಯಕೀಯ ಅಸೋಸಿಯೇಷನ್‌ನ ಅಧ್ಯಕ್ಷ‌ ಹೇಳಿದ್ದರು.

ಒಲಿಂಪಿಕ್ಸ್‌ ನಡೆಸಲು ಕೋವಿಡ್‌–19ಗೆ ಲಸಿಕೆ ಅಗತ್ಯ ಎಂಬ ಸಲಹೆಯನ್ನು ಟೋಕಿಯೊ ಒಲಿಂಪಿಕ್ಸ್‌ ಸಂಯೋಜನಾ ಆಯೋಗದ ಮುಖ್ಯಸ್ಥ ಜಾನ್ ಕೋ‌ಟ್ಸ್ ತಳ್ಳಿಹಾಕಿದ್ದರು.

‘ಒಲಿಂಪಿಕ್ಸ್‌ ಮುಂದಿನ ವರ್ಷ ನಡೆಯುವುದಿಲ್ಲ ಎಂಬ ಮಾತುಗಳಿಗೆ ಕಿವಿಗೊಡಬೇಡಿ. ನಾನು ಈ ಕುರಿತು ವಿಶ್ವಾಸಾರ್ಹ ಮೂಲಗಳೊಂದಿಗೆ ಸದಾ ಸಂಪರ್ಕದಲ್ಲಿದ್ದೇನೆ. ನಿಗದಿಯಂತೆ ಕೂಟ ನಡೆಯಲಿದೆ. ಸೆಪ್ಟೆಂಬರ್‌ ಅಥವಾ ಅಕ್ಟೋಬರ್ ವೇಳೆಗೆ ಕೊರೊನಾ ವೈರಾಣುವಿಗೆ ಚಿಕಿತ್ಸೆ ಲಭ್ಯವಾಗಬಹುದು. ಒಲಿಂಪಿಕ್ಸ್‌ ನಡೆಯಲಿದೆ ಎಂದುಕೊಂಡೇ ಸಿದ್ಧತೆಗಳನ್ನು ನಡೆಸಬೇಕಿದೆ’ ಎಂದು ಭಾರತ ಒಲಿಂಪಿಕ್‌ ಸಮಿತಿ (ಐಒಎ) ಅಧ್ಯಕ್ಷರೂ ಆಗಿರುವ ಬಾತ್ರಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು