ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಟಿಎಫ್‌ ವಿಶ್ವ ತಂಡ ಚಾಂಪಿಯನ್‌ಷಿಪ್‌: ಭಾರತ ಮಹಿಳೆಯರಿಗೆ ನಿರಾಸೆ

ಟಿಟಿ: ವಿಶ್ವ ತಂಡ ಚಾಂಪಿಯನ್‌ಷಿಪ್‌; ಪುರುಷರಿಗೆ ಗೆಲುವು
Last Updated 1 ಅಕ್ಟೋಬರ್ 2022, 12:06 IST
ಅಕ್ಷರ ಗಾತ್ರ

ಚೆಂಗ್ಡು, ಚೀನಾ: ಭಾರತ ಮಹಿಳಾ ಟೇಬಲ್ ಟೆನಿಸ್‌ ತಂಡದವರು ಇಲ್ಲಿ ಆರಂಭವಾದ ಐಟಿಟಿಎಫ್‌ ವಿಶ್ವ ತಂಡ ಚಾಂಪಿಯನ್‌ಷಿಪ್‌ನಲ್ಲಿ ಜರ್ಮನಿ ಎದುರು 2–3 ರಲ್ಲಿ ಸೋತರು. ಪುರುಷರು 3–0 ರಲ್ಲಿ ಉಜ್ಬೆಕಿಸ್ತಾನ ಎದುರು ಗೆದ್ದು ಶುಭಾರಂಭ ಮಾಡಿದರು.

ಶ್ರೀಜಾ ಅಕುಲಾ ಮತ್ತು ದಿಯಾ ಚಿತಳೆ ಅವರು ಉತ್ತಮ ಪ್ರದರ್ಶನ ನೀಡಿದರೂ, ಅನುಭವಿ ಆಟಗಾರ್ತಿ ಮಣಿಕಾ ಬಾತ್ರಾ ತಾವಾಡಿದ ಎರಡೂ ಪಂದ್ಯಗಳಲ್ಲಿ ಸೋತದ್ದು ಭಾರತ ಮಹಿಳಾ ತಂಡಕ್ಕೆ ಮುಳುವಾಗಿ ಪರಿಣಮಿಸಿತು.

ಮೊದಲ ಸಿಂಗಲ್ಸ್‌ನಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿರುವ ಮಣಿಕಾ 3–11, 1–11, 2–11 ರಲ್ಲಿ ವಿಶ್ವದ 8ನೇ ರ‍್ಯಾಂಕ್‌ನ ಆಟಗಾರ್ತಿ ಯಿಂಗ್‌ ಹಾನ್‌ ಎದುರು ಪರಾಭವಗೊಂಡರು.

ಎರಡನೇ ಸಿಂಗಲ್ಸ್‌ನಲ್ಲಿ ಶ್ರೀಜಾ, ತಮಗಿಂತ ಮೇಲಿನ ರ‍್ಯಾಂಕ್‌ ಹೊಂದಿರುವ ನಿನಾ ಮಿಟೆಲ್ಹಂ ವಿರುದ್ಧ 11-9, 12-10, 11-7 ರಲ್ಲಿ ಗೆದ್ದು 1–1 ರಲ್ಲಿ ಸಮಬಲ ತಂದಿತ್ತರು.

ದಿಯಾ ಅವರು 11-9, 8-11, 11-6, 13-11 ರಲ್ಲಿ ಸಬಿನ್‌ ವಿಂಟರ್‌ ವಿರುದ್ಧ ಗೆದ್ದು ಭಾರತಕ್ಕೆ 2–1 ಮೇಲುಗೈ ತಂದಿತ್ತರು.

ಬಾತ್ರಾ ತಮ್ಮ ಎರಡನೇ ಸಿಂಗಲ್ಸ್‌ನಲ್ಲಿ 11-7, 6-11, 7-11, 8-11ರಲ್ಲಿ ಮಿಟೆಲ್ಹಂ ಕೈಯಲ್ಲಿ ಪರಾಭವಗೊಂಡರು. ಇದರಿಂದ ಜರ್ಮನಿ 2–2 ರಲ್ಲಿ ಸಮಬಲ ಸಾಧಿಸಿತು.

ಐದನೇ ಹಾಗೂ ನಿರ್ಣಾಯಕ ಸಿಂಗಲ್ಸ್‌ನಲ್ಲಿ ಶ್ರೀಜಾ ಅವರು ಯಿಂಗ್‌ ಹಾನ್‌ ಎದುರು 3-11, 5-11, 4-11 ರಲ್ಲಿ ಸೋತರು.

ಪುರುಷರ ವಿಭಾಗದಲ್ಲಿ ಭಾರತ ತಂಡಕ್ಕೆ ಉಜ್ಬೆಕಿಸ್ತಾನ ಸಾಟಿಯಾಗಲಿಲ್ಲ. ಹರ್ಮೀತ್‌ ದೇಸಾಯಿ 11-9, 11-9, 11-1 ರಲ್ಲಿ ಎಲ್‌ಮುರೊದ್ ಖೊಲಿಕೊವ್‌ ಎದುರು ಗೆದ್ದು ಭಾರತಕ್ಕೆ 1–0 ಮುನ್ನಡೆ ತಂದಿತ್ತರು. ಎರಡನೇ ಸಿಂಗಲ್ಸ್‌ನಲ್ಲಿ ಜಿ.ಸತ್ಯನ್‌ 11-3, 11-6, 11-9 ರಲ್ಲಿ ಅಬ್ದುಲ್‌ಅಜೀಜ್‌ ಅನೊರ್ಬೊವ್‌ ಅವರನ್ನು ಮಣಿಸಿದರು. ಮಾನವ್‌ ಠಾಕರ್ 11-8, 11-5, 11-5 ರಲ್ಲಿ ಶೊಕ್ರುಖ್‌ ಇಸ್ಕಂದರ್‌ ವಿರುದ್ಧ ಜಯಿಸಿದರು.

ಪುರುಷರ ತಂಡ ಮುಂದಿನ ಪಂದ್ಯದಲ್ಲಿ ಜರ್ಮನಿ ವಿರುದ್ಧವೂ, ಮಹಿಳೆಯರ ತಂಡ ಜೆಕ್‌ ರಿಪಬ್ಲಿಕ್‌ ಎದುರೂ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT