ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ: ಮುಂಬಾ ಜಯಭೇರಿ

Last Updated 18 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಪುಣೆ: ಕೊನೆಯ 6 ನಿಮಿಷಗಳ ವರೆಗೂ ಹಿನ್ನಡೆಯಲ್ಲಿದ್ದರೂ ಛಲ ಬಿಡದೆ ಕಾದಾಡಿದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ನ ಬುಧವಾರದ ಪಂದ್ಯದಲ್ಲಿ ಯು.ಪಿ.ಯೋಧಾ ವಿರುದ್ಧ ಅಮೋಘ ಜಯ ಸಾಧಿಸಿತು. ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಮುಂಬಾ 39–36ರಲ್ಲಿ ಜಯಭೇರಿ ಮೊಳಗಿಸಿತು.

ಮೊದಲಾರ್ಧದ ಆರಂಭದಲ್ಲಿ ಯು.ಪಿ.ಯೋಧಾ ಸ್ಪಷ್ಟ ಮೇಲುಗೈ ಸಾಧಿಸಿದರೂ ನಂತರ ಯು ಮುಂಬಾ ತಿರುಗೇಟು ನೀಡಿತು. ಯು.ಪಿ.ಯೋಧಾ ತಂಡ ರೇಡಿಂಗ್‌ನಲ್ಲಿ 10 ಪಾಯಿಂಟ್ ಗಳಿಸಿದರೆ ಯು ಮುಂಬಾ 8 ಪಾಯಿಂಟ್ ಕಲೆ ಹಾಕಿತು. ಆದರೆ ಟ್ಯಾಕ್ಲಿಂಗ್‌ನಲ್ಲಿ ಎರಡೂ ತಂಡಗಳು ತಲಾ 4 ಪಾಯಿಂಟ್ ಗಳಿಸಿದವು. ಎರಡೂ ತಂಡಗಳು ಒಂ‌ದೊಂದು ಬಾರಿ ಆಲ್ ಔಟ್ ಆದವು.

ರಿಷಾಂಕ್ ದೇವಾಡಿಗ ಮತ್ತು ಶ್ರೀಕಾಂತ್ ಜಾಧವ್ ಅವರ ಯಶಸ್ವಿ ರೇಡ್‌ಗಳ ಮೂಲಕ ಆರಂಭದಲ್ಲಿ ಯು.ಪಿ.ಯೋಧಾ ಮುನ್ನಡೆ ಗಳಿಸಿತು. 6 ನಿಮಿಷಗಳ ಆಟ ಮುಕ್ತಾಯಗೊಂಡಾಗ ಯೋಧಾ 6–1ರಿಂದ ಮುನ್ನಡೆ ಸಾಧಿಸಿತ್ತು. ನಂತರ ಅರ್ಜುನ್ ದೇಶ್ವಾಲ್ ಗಳಿಸಿದ ಒಂದು ಬೋನಸ್ ಪಾಯಿಂಟ್ ಮೂಲಕ ಮುಂಬಾ ಎರಡನೇ ಪಾಯಿಂಟ್ ಗಳಿಸಿತು. ಆದರೆ ಸುರೇಂದ್ರ ಗಿಲ್ ಅಮೋಘ ರೇಡಿಂಗ್‌ ಮಾಡಿ ಫಜಲ್ ಅತ್ರಾಚಲಿ ಮತ್ತು ಹರೇಂದ್ರ ಕುಮಾರ್ ಅವರನ್ನು ಔಟ್ ಮಾಡಿ ಎದುರಾಳಿ ಅಂಗಣವನ್ನು ಖಾಲಿ ಮಾಡಿದರು. ಈ ಮೂಲಕ ಯೋಧಾ ತಂಡದ ಮುನ್ನಡೆಯನ್ನು 11–2ಕ್ಕೆ ಏರಿಸಿದರು.

ನಂತರ ಸತತ ಪಾಯಿಂಟ್‌ಗಳನ್ನು ಹೆಕ್ಕಿದ ಮುಂಬಾ, ವಿರಾಮದ ವೇಳೆ ಹಿನ್ನಡೆಯನ್ನು 15–16ಕ್ಕೆ ಕುಗ್ಗಸಿಕೊಂಡು ನಿಟ್ಟುಸಿರು ಬಿಟ್ಟಿತು. ಮೊದಲಾರ್ಧದ ಕೊನೆಯ ರೇಡ್‌ನಲ್ಲಿ 2 ಪಾಯಿಂಟ್ ಗಳಿಸಿದ ಎಂ.ಎಸ್‌.ಅತೂಲ್ ಅವರು ಲೀಗ್‌ನಲ್ಲಿ 100 ರೇಡಿಂಗ್ ಪಾಯಿಂಟ್ ಕಲೆ ಹಾಕಿದರು.

ಸಮಬಲದ ಪೈಪೋಟಿ: ದ್ವಿತೀಯಾರ್ಧದಲ್ಲಿ ಮುಂಬಾ ತಂಡದವರು ಕೆಚ್ಚೆದೆಯಿಂದ ಆಡಿದರು. ಯೋಧಾ ಕೂಡ ತಿರುಗೇಟು ನೀಡುತ್ತ ಸಾಗಿತು. ಹೀಗಾಗಿ ಪ್ರೇಕ್ಷಕರು ಕ್ಷಣ ಕ್ಷಣಕ್ಕೂ ರೋಮಾಂಚನ ಅನುಭವಿಸಿದರು. 36ನೇ ನಿಮಿಷದಲ್ಲಿ ಮೊದಲ ಬಾರಿ ಪಂದ್ಯ ಸಮಬಲವಾಯಿತು (20–20). ಕೊನೆಯ 10 ನಿಮಿಷ ಇರುವಾಗ ಯೋಧಾ 25–20ರ ಮುನ್ನಡೆ ಸಾಧಿಸಿತು. ತಿರುಗೇಟು ನೀಡಿದ ಮುಂಬಾ ಹಿನ್ನಡೆಯನ್ನು 23–25ಕ್ಕೆ ಕುಗ್ಗಿಸಿತು.

ಕೊನೆಯ ನಾಲ್ಕು ನಿಮಿಷ ಇದ್ದಾಗ ಪಂದ್ಯ ಮಹತ್ವದ ತಿರುವು ಕಂಡಿತು. ರಿಷಾಂಕ್ ದೇವಾಡಿಗ ಅವರನ್ನು ಟ್ಯಾಕ್ಲಿಂಗ್ ಬಲೆಯಲ್ಲಿ ಕೆಡವಿದ ಸುರಿಂದರ್ ಸಿಂಗ್ ಎದುರಾಳಿ ತಂಡವನ್ನು ಆಲ್ ಔಟ್ ಮಾಡಿ ಮುಂಬಾಗೆ ಭಾರಿ ಮುನ್ನಡೆ (31–28) ಗಳಿಸಿಕೊಟ್ಟರು. ನಾಲ್ಕು ನಿಮಿಷಗಳಿದ್ದಾಗ ಅಭಿಷೇಕ್ ಸಿಂಗ್ ‘ಸೂಪರ್ ಟೆನ್’ ಪೂರೈಸುವ ಮೂಲಕ ಮುಂಬಾ ಮುನ್ನಡೆಯನ್ನು 37–31ಕ್ಕೆ ಹೆಚ್ಚಿಸಿದರು. ನಂತರ ರಿಷಾಂಕ್ ದೇವಾಡಿಗ ಸೂಪರ್ ರೇಡ್ ಮಾಡಿ ಯೋಧಾದ ಹಿನ್ನಡೆಯನ್ನು ಕಡಿಮೆ ಮಾಡಿದರು. ಇದು ಲೀಗ್‌ನಲ್ಲಿ ಅವರ 25ನೇ ಸೂಪರ್ ರೇಡ್ ಆಗಿತ್ತು. ಕೊನೆಯ ಎರಡು ನಿಮಿಷಗಳ ಆಟ ಮತ್ತಷ್ಟು ರಂಗು ಪಡೆದುಕೊಂಡಿತು. ಮುಂಬಾ ಪರ ಅಭಿಷೇಕ್ ಸಿಂಗ್ 11, ಅರ್ಜುನ್ ದೇಶ್ವಾಲ್ 7 ಸುರಿಂದರ್ ಸಿಂಗ್ 6 ರೇಡಿಂಗ್ ಪಾಯಿಂಟ್ ಗಳಿಸಿದರು. ಟ್ಯಾಕ್ಲಿಂಗ್‌ನಲ್ಲಿ ನಾಯಕ ಫಜಲ್ ಅತ್ರಾಚಲಿ 3 ಪಾಯಿಂಟ್ ಕಲೆ ಹಾಕಿದರು. ಯೋಧಾ ಪರ ರಿಷಾಂಕ್ ದೇವಾಡಿಗ 9 ಶ್ರೀಕಾಂತ್ ಜಾಧವ್8, ಆಶು ಸಿಂಗ್‌ ಮತ್ತು ಸುರೇಂದರ್ ಗಿಲ್‌ ತಲಾ 4 ಪಾಯಿಂಟ್ ಗಳಿಸಿದರು. ಸುಮಿತ್‌ 3 ಟ್ಯಾಕ್ಲಿಂಗ್ ಪಾಯಿಂಟ್ ಕಲೆ ಹಾಕಿದರು.

ಟೈ ಪಂದ್ಯದಲ್ಲಿ ಪುಣೇರಿ: ಆತಿಥೇಯ ಪುಣೇರಿ ಪಲ್ಟನ್ ಮತ್ತು ತಮಿಳ್ ತಲೈವಾಸ್ ತಂಡಗಳ ನಡು ವಣ ಪಂದ್ಯವು 36–36ರಿಂದ ಟೈ ಆಯಿತು. ತಮಿಳ್ ತಂಡದ ವಿ. ಅಜಿತ್ ಕುಮಾರ್ ರೇಡಿಂಗ್‌ನಲ್ಲಿ 18 ಪಾಯಿಂಟ್ ಗಳಿಸಿದರು. ಇದರಿಂದಾಗಿ ತಂಡವು ಮತ್ತೊಂದು ಸೋಲಿನಿಂದ ತಪ್ಪಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT