ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಮುಡಿಗೇರಿಸಿಕೊಂಡ ವಿನೇಶಾ

ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌: ಫೈನಲ್‌ಗೆ ಅನ್ಶು, ಸಾಕ್ಷಿ ಮಲಿಕ್‌
Last Updated 16 ಏಪ್ರಿಲ್ 2021, 13:16 IST
ಅಕ್ಷರ ಗಾತ್ರ

ಆಲ್ಮಾಟಿ, ಕಜಕಸ್ತಾನ: ಅಮೋಘ ಸಾಮರ್ಥ್ಯ ತೋರಿದ ಭಾರತದ ವಿನೇಶಾ ಪೋಗಟ್‌ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 53 ಕೆಜಿ ವಿಭಾಗದ ಫೈನಲ್‌ನಲ್ಲಿ ಅವರು ತೈಪೇಯ ಮೆಂಗ್ ಸೂನ್ ಶೇಹ್ ಅವರನ್ನು ಸೋಲಿಸಿದರು. ಏಷ್ಯನ್ ಕೂಟದಲ್ಲಿ ವಿನೇಶಾ ಅವರಿಗೆ ಒಲಿದ ಮೊದಲ ಚಿನ್ನ ಇದು. ಅನ್ಶು ಮಲಿಕ್ ಹಾಗೂ ಸಾಕ್ಷಿ ಮಲಿಕ್‌ ಕೂಡ ಚಾಂಪಿಯನ್‌ಷಿಪ್‌ನ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ವಿನೇಶಾ ಚಿನ್ನದ ಪದಕದ ಸುತ್ತಿನಲ್ಲಿ 6–0 ಮುನ್ನಡೆ ಸಾಧಿಸಿದ್ದರು. ಅದೇ ಲಯದಲ್ಲಿ ಮುಂದುವರಿದು ಬೌಟ್‌ನ ಮೊದಲ ಅವಧಿಯಲ್ಲೇ ಜಯ ತಮ್ಮದಾಗಿಸಿಕೊಂಡರು.

ಏಷ್ಯನ್‌ ಕೂಟಗಳಲ್ಲಿ ವಿನೇಶಾ ಇದುವರೆಗೆ ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದರು.

ಶುಕ್ರವಾರ ಸೆಮಿಫೈನಲ್‌ ಬೌಟ್‌ನಲ್ಲಿ ಅವರು ಎದುರಿಸಬೇಕಿದ್ದ ಕೊರಿಯಾದ ಹ್ಯೂನ್‌ಯಂಗ್‌ ಗಾಯದ ಕಾರಣ ಹಿಂದೆ ಸರಿದರು. ಇದಕ್ಕೂ ಮೊದಲು ಎರಡು ಸುತ್ತುಗಳಲ್ಲಿ ವಿನೇಶಾ, ಮಂಗೋಲಿಯಾದ ಒಟ್‌ಗೊನ್ಜಾರ್ಗಲ್‌ ಗನ್‌ಬಾತರ್‌ ಹಾಗೂ ತೈಪೇಯ ಮೆಂಗ್ ಸೂನ್‌ ಶೇಹ್ ಎದುರು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಗೆದ್ದಿದ್ದರು.

ಹೋದ ವರ್ಷ ದೆಹಲಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ವಿನೇಶಾ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

19 ವರ್ಷದ ಅನ್ಶು (57 ಕೆಜಿ) ಕೂಡ ತಮ್ಮ ಲಯವನ್ನು ಮುಂದುವರಿಸಿದರು. ಮೊದಲ ಎರಡು ಬೌಟ್‌ಗಳಲ್ಲಿ ಅವರು ಕ್ರಮವಾಗಿ ಉಜ್ಬೆಕಿಸ್ತಾನದ ಸೆವಾರ ಈಶ್ಮುರತೊವಾ ಮತ್ತು ಕಿರ್ಗಿಸ್ತಾನದ ನಾಜಿರಾ ಮಾರ್ಸ್‌ಬೆಕ್‌ ಕಿಜಿ ಅವರನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.

ಸೆಮಿಫೈನಲ್‌ನಲ್ಲಿ ಮಂಗೋಲಿಯಾದ ಬ್ಯಾಟ್ಸೆಟ್ಸೆಗ್‌ ಅಟ್ಲಾಂಟಸೆಟ್ಸ್‌ಗ್‌ ಎದುರು ಅನ್ಶು 9–1ರಿಂದ ಮುನ್ನಡೆಯಲ್ಲಿದ್ದರು. ಈ ಸಂದರ್ಭದಲ್ಲಿ ರೆಫರಿಗಳು ಮೂರು ಬಾರಿ ಮಂಗೋಲಿಯಾ ಪಟುವಿಗೆ ‘ಎಚ್ಚರಿಕೆ‘ಗಳನ್ನು ನೀಡಿದ್ದರು. ಹೀಗಾಗಿ ಅನ್ಶು ಅವರಿಗೆ ‘ಎಚ್ಚರಿಕೆ ಆಧಾರದಲ್ಲಿ ಜಯ‘ ಘೋಷಿಸಲಾಯಿತು. ಫೈನಲ್‌ನಲ್ಲಿ ಇದೇ ಎದುರಾಳಿಗೆ ಅನ್ಶು ಮುಖಾಮುಖಿಯಾಗಲಿದ್ದಾರೆ.

65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಸಾಕ್ಷಿ ಮಲಿಕ್ ಕೂಡ ಚಿನ್ನದ ಪದಕದ ಸುತ್ತಿಗೆ ಕಾಲಿಟ್ಟರು. ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಅವರಿಗೆ, ಮೊದಲ ಎರಡು ಬೌಟ್‌ಗಳಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಯ ಒಲಿಯಿತು. ಸೆಮಿಫೈನಲ್‌ನಲ್ಲಿ ಅವರ ಎದುರು ಕಣಕ್ಕಿಳಿದಿದ್ದ ಕೊರಿಯಾದ ಹಾನ್‌ಬಿಟ್‌ ಲೀ 0–3ರ ಹಿನ್ನಡೆಯಲ್ಲಿದ್ದಾಗ ಮೊಣಕಾಲು ನೋವಿನ ಕಾರಣ ಹಿಂದೆ ಸರಿದರು. ಫೈನಲ್‌ನಲ್ಲಿ ಸಾಕ್ಷಿ, ಮಂಗೋಲಿಯಾದ ಬೊಲೊರ್ಟ್‌ವುಂಗಲಾಗ್‌ ಜೊರಿಟ್ ಎದುರು ಸ್ಪರ್ಧಿಸುವರು.

ದಿವ್ಯಾ ಕಾಕ್ರನ್‌ (72 ಕೆಜಿ ವಿಭಾಗ) ಕೂಡ ಮೂರನೇ ಸುತ್ತಿಗೆ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT