ಶನಿವಾರ, ಆಗಸ್ಟ್ 15, 2020
26 °C

ಆಗ ಆಟಗಾರ, ಈಗ ಆಡಳಿತಗಾರ: ಶ್ರೇಷ್ಠ ಹಾಕಿ ಆಟಗಾರ ವಿ.ಆರ್‌.ರಘುನಾಥ್‌ ಸಂದರ್ಶನ

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಭಾರತದ ಹಾಕಿ ಲೋಕ ಕಂಡ ಶ್ರೇಷ್ಠ ಆಟಗಾರರಲ್ಲಿ ಕರ್ನಾಟಕದ ವಿ.ಆರ್‌.ರಘುನಾಥ್‌ ಕೂಡ ಒಬ್ಬರು.

ಕೊಡಗಿನ ರಘುನಾಥ್‌, ಒಲಿಂಪಿಕ್ಸ್‌ ಸೇರಿದಂತೆ ಹಲವು ಮಹತ್ವದ ಕೂಟಗಳಲ್ಲಿ ಭಾರತದ ಪರ ಕಣಕ್ಕಿಳಿದು ಕರುನಾಡಿನ ಕೀರ್ತಿ ಬೆಳಗಿದ್ದಾರೆ. 228 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 132 ಗೋಲು ಗಳಿಸಿ ಹಾಕಿ ಪ್ರಿಯರ ಹೃದಯ ಗೆದ್ದಿದ್ದಾರೆ. ಡ್ರ್ಯಾಗ್‌ಫ್ಲಿಕ್‌ ಪರಿಣತ ಎಂದೇ ಖ್ಯಾತರಾಗಿದ್ದ 30ರ ಹರೆಯದ ಈ ಆಟಗಾರ, ಈಗ ಆಡಳಿತಗಾರನಾಗಿ ಹೊಸ ‘ಇನಿಂಗ್ಸ್‌’ ಆರಂಭಿಸಿದ್ದಾರೆ. ಹಾಕಿ ಕರ್ನಾಟಕದ ಉಪಾಧ್ಯಕ್ಷರಾಗಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ಹೊಸ ‘ಇನಿಂಗ್ಸ್‌’ ಬಗ್ಗೆ ಹೇಳಿ

- ಇದು ಬಯಸದೇ ಬಂದ ಹುದ್ದೆ. ಆಡಳಿತದ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. ಹಾಕಿ ಕರ್ನಾಟಕದ ಅಧ್ಯಕ್ಷರಾದ ಸುಬ್ರಮಣ್ಯ ಗುಪ್ತಾ ಅವರು ಒಮ್ಮೆ ನನ್ನನ್ನು ಭೇಟಿಯಾಗಿ ಉಪಾಧ್ಯಕ್ಷರಾಗುವಂತೆ ಕೇಳಿಕೊಂಡಿದ್ದರು. ಆರಂಭದಲ್ಲಿ ಅವರ ಮನವಿಯನ್ನು ತಿರಸ್ಕರಿಸಿದ್ದೆ. ಹೀಗಿದ್ದರೂ ಬಿಡಲಿಲ್ಲ. ಕರ್ನಾಟಕದ ಹಾಕಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಿಮ್ಮ ಅಗತ್ಯವಿದೆ. ಆಟಗಾರರ ಸಂಕಷ್ಟವನ್ನು ಚೆನ್ನಾಗಿ ಅರಿತಿರುವ ನೀವು ಆಡಳಿತ ಕ್ಷೇತ್ರಕ್ಕೆ ಬರಲೇಬೇಕು ಎಂದು ಮನವೊಲಿಸಿದರು. ಹೀಗಾಗಿ ಒಪ್ಪಿಕೊಂಡೆ.

ಕರ್ನಾಟಕದಲ್ಲಿ ಹಾಕಿ ಅಭಿವೃದ್ಧಿಪಡಿಸಲು ನೀವು ಸಿದ್ಧಪಡಿಸಿರುವ ಯೋಜನೆಗಳೇನು?

- ಬೇರುಮಟ್ಟದಿಂದಲೇ ಕ್ರೀಡೆಯನ್ನು ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ ಈಗಾಗಲೇ ಕಾರ್ಯಗತಗೊಳಿಸಿದ್ದೇವೆ. ಸೋಮವಾರಪೇಟೆಯಲ್ಲಿ ಟರ್ಫ್‌ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಅದಕ್ಕೆ ಮರು ಚಾಲನೆ ನೀಡಿದ್ದೇವೆ. ಇದಕ್ಕಾಗಿ ₹6 ಕೋಟಿ ಅನುದಾನ ಬಿಡುಗಡೆಯಾಗಿದ್ದು ಮಳೆಗಾಲ ಮುಗಿದ ಕೂಡಲೇ ಕೆಲಸ ಪೂರ್ಣಗೊಳ್ಳಲಿದೆ.

ಹಾಸನದಲ್ಲಿ ಟರ್ಫ್‌ ನಿರ್ಮಿಸಲು ನಿರ್ಧರಿಸಿದ್ದೇವೆ. ಶಿವಮೊಗ್ಗ, ಬಳ್ಳಾರಿ, ಧಾರವಾಡ ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಹಾಕಿ ಹಾಸ್ಟೆಲ್‌ಗಳನ್ನು ಪ್ರಾರಂಭಿಸುವ ಗುರಿ ಇದೆ. ಈಗಾಗಲೇ ಸೂಕ್ತ ಸ್ಥಳಗಳನ್ನು ಗುರುತಿಸಿ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಅಧಿಕಾರ ವಹಿಸಿಕೊಂಡು ಎಂಟು ತಿಂಗಳೊಳಗೆ ಇಷ್ಟೆಲ್ಲಾ ಕೆಲಸ ಮಾಡಿದ್ದೇನೆ.

ಮುಂದಿನ ಆದ್ಯತೆ?

- ಮುಂದಿನ ವರ್ಷದ ಜನವರಿಯೊಳಗೆ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಅಂತರರಾಷ್ಟ್ರೀಯ ಟೂರ್ನಿಯೊಂದನ್ನು ಆಯೋಜಿಸಬೇಕು. ಹಾಕಿ ಇಂಡಿಯಾದ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ನಮ್ಮಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ. ಶೀಘ್ರವೇ ಒಪ್ಪಿಗೆ ಸಿಗುವ ಭರವಸೆ ಇದೆ.

ರಾಷ್ಟ್ರೀಯ ಸೀನಿಯರ್‌ ಮತ್ತು ಜೂನಿಯರ್‌ ತಂಡಗಳಲ್ಲಿ ಕರ್ನಾಟಕದವರ ಸಂಖ್ಯೆ ಕ್ಷೀಣಿಸಿದೆಯಲ್ಲ. ಪ್ರತಿಭೆಗಳನ್ನು ಹೆಕ್ಕಲು ಕೈಗೊಂಡಿರುವ ಕ್ರಮಗಳೇನು?

- ಸಂಸ್ಥೆಗಳು ಮತ್ತು ಆಡಳಿತಗಾರರ ನಡುವಣ ಅಭಿಪ್ರಾಯಭೇದ ಹಾಗೂ ಇತರ ಕಾರಣಗಳಿಂದ ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರತಿಭಾನ್ವೇಷಣೆಯ ಕಾರ್ಯ ಕುಂಠಿತ‌ಗೊಂಡಿತ್ತು. ಈಗ ಎಲ್ಲಾ ಸರಿಹೋಗಿದೆ. ಸೋಮವಾರಪೇಟೆಯ ಎಂ.ಎನ್‌.ಸೂರ್ಯ ರಾಷ್ಟ್ರೀಯ ಜೂನಿಯರ್‌ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಎಸ್‌.ವಿ.ಸುನಿಲ್‌ ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಜೂನಿಯರ್‌ ಮತ್ತು ಸೀನಿಯರ್‌ ವಿಭಾಗಗಳಲ್ಲಿ ಚೆನ್ನಾಗಿ ಆಡುವ 20 ಮಂದಿಯನ್ನು ಈಗಾಗಲೇ ಗುರುತಿಸಿ ವಿಶೇಷ ತರಬೇತಿ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ರಾಜ್ಯದ ಆಟಗಾರರ ಸಂಖ್ಯೆ ಖಂಡಿತವಾಗಿಯೂ ಹೆಚ್ಚಲಿದೆ. ರಾಜ್ಯದ ಎಲ್ಲಾ ಭಾಗಗಳಿಗೂ ಹಾಕಿಯ ಕಂಪು ಪಸರಿಸಬೇಕು ಎಂಬುದೂ ನಮ್ಮ ಗುರಿ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಅಂತರ ಶಾಲಾ ಹಾಗೂ ಅಂತರ ಕ್ರೀಡಾ ಹಾಸ್ಟೆಲ್‌ಗಳ ಟೂರ್ನಿಗಳನ್ನು ನಡೆಸಲು ನಿರ್ಧರಿಸಿದ್ದೇವೆ.

ಬೆಂಗಳೂರಿನಲ್ಲಿರುವ ಕ್ರೀಡಾ ಹಾಸ್ಟೆಲ್‌ನಲ್ಲಿ ಸರಿಯಾದ ಮೂಲ ಸೌಕರ್ಯವಿಲ್ಲ ಎಂಬ ದೂರುಗಳಿವೆಯಲ್ಲ?

- ಬೆಂಗಳೂರಿನಲ್ಲಿರುವ ಹಾಸ್ಟೆಲ್‌ಗೆ ಹೈಟೆಕ್‌ ಸ್ಪರ್ಶ ನೀಡಲು ಪಣತೊಟ್ಟಿದ್ದೇವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಈಗಾಗಲೇ ₹1 ಕೋಟಿ  ಬಿಡುಗಡೆಯಾಗಿದೆ. ಹಾಸ್ಟೆಲ್‌ ಎದುರು ಮೇಜರ್‌ ಧ್ಯಾನ್‌ಚಂದ್‌ ಪ್ರತಿಮೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವಸತಿ ನಿಲಯದ ಎಲ್ಲಾ ಕೊಠಡಿಗಳನ್ನು ಒಡೆದು ಹೊಸದಾಗಿ ನಿರ್ಮಿಸುವ ಚಿಂತನೆ ಇದೆ. ₹ 1 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಜಿಮ್‌ ನಿರ್ಮಿಸಲೂ ತೀರ್ಮಾನಿಸಿದ್ದೇವೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಅಂದುಕೊಂಡಿದ್ದನ್ನೆಲ್ಲಾ ಹಂತ ಹಂತವಾಗಿ, ತ್ವರಿತಗತಿಯಲ್ಲಿ ಮಾಡಿ ಮುಗಿಸುತ್ತೇವೆ.

ಪ್ರಸ್ತುತ ಭಾರತ ತಂಡದ ಬಗ್ಗೆ ನಿಮ್ಮ ಅನಿಸಿಕೆ?

- ಈಗಿರುವ ತಂಡ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ ಐದರೊಳಗೆ ಸ್ಥಾನ ಹೊಂದಿದೆ. ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. 2020ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಬಹುದೊಡ್ಡ ಸವಾಲು ತಂಡದ ಮುಂದಿದೆ. ಅದಕ್ಕಾಗಿ ಒಲಿಂಪಿಕ್‌ ಅರ್ಹತಾ ಟೂರ್ನಿಗಳಲ್ಲಿ ಆಡಬೇಕು. ಇದರಲ್ಲಿ ತಂಡ ಶ್ರೇಷ್ಠ ಸಾಮರ್ಥ್ಯ ತೋರುವ ವಿಶ್ವಾಸವಿದೆ.

ತಂಡವು ಟೋಕಿಯೊದಲ್ಲಿ ಪದಕ ಗೆಲ್ಲಬಹುದೇ?

- ಈಗಲೇ ಭವಿಷ್ಯ ನುಡಿಯುವುದು ಕಷ್ಟ. ಅದು ನಾವಂದುಕೊಂಡಷ್ಟು ಸುಲಭದ ಹಾದಿಯಂತೂ ಅಲ್ಲ. ಈ ಬಾರಿ ಸೆಮಿಫೈನಲ್‌ ತಲುಪಬಹುದು. ಆ ನಂಬಿಕೆಯಂತೂ ಖಂಡಿತವಾಗಿಯೂ ಇದೆ.

ಆಡಳಿತ ಮತ್ತು ಆಟ. ಈ ಎರಡೂ ಸವಾಲುಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿಲ್ಲವೆ?

- ಇಚ್ಛಾಶಕ್ತಿ ಇದ್ದರೆ ಎಲ್ಲವೂ ಸಾಧ್ಯ. ಇದನ್ನು ನಾನು ಸವಾಲು ಅಂತ ಎಂದೂ ಭಾವಿಸಿಲ್ಲ. ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ಏಳುತ್ತೇನೆ. 6 ಗಂಟೆಗೆ ಕ್ರೀಡಾಂಗಣಕ್ಕೆ ಬಂದುಬಿಡುತ್ತೇನೆ. ಒಂಬತ್ತು ಗಂಟೆಯವರೆಗೂ ಅಭ್ಯಾಸ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. 10ಗಂಟೆಗೆ ಕಚೇರಿಗೆ ಬಂದು 12 ಗಂಟೆವರೆಗೆ ಕೆಲಸದಲ್ಲಿ ಮಗ್ನನಾಗಿರುತ್ತೇನೆ. ಬಳಿಕ ಇನ್ನಿತರ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ.

ಆಟಗಾರರಿಗೆ ಫಿಟ್‌ನೆಸ್‌ ತುಂಬಾ ಅಗತ್ಯವಲ್ಲವೆ?

- ಹೌದು. ಈಗಲೂ ನಾನು ವಿವಿಧ ಟೂರ್ನಿಗಳಲ್ಲಿ ಆಡುತ್ತೇನೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಜಿಮ್‌ನಲ್ಲಿ ಸಾಕಷ್ಟು ಹೊತ್ತು ಬೆವರು ಸುರಿಸುತ್ತೇನೆ. ಯುವ ಹಾಕಿಪಟುಗಳಿಗೂ ಫಿಟ್‌ನೆಸ್‌ ಮಹತ್ವವನ್ನು ತಿಳಿ ಹೇಳುತ್ತೇನೆ.

ಅಧಿಕಾರಿಗಳಿಂದ ಸಹಕಾರ ಸಿಗುತ್ತಿದೆಯೇ?

- ಖಂಡಿತವಾಗಿಯೂ ಸಿಗುತ್ತಿದೆ. ರಾಜ್ಯ ಸರ್ಕಾರ ನನ್ನನ್ನು ‘ಟರ್ಫ್‌’ ಸಲಹೆಗಾರನನ್ನಾಗಿ ನೇಮಿಸಿದೆ. ವಿವಿಧ ಸ್ಥರದ ಅಧಿಕಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದೇನೆ. ಆಟ ಆಡುತ್ತಿದ್ದ ದಿನಗಳಿಂದಲೂ ಅಧಿಕಾರಿಗಳ ಜೊತೆ ಉತ್ತಮ ಒಡನಾಟ ಇದೆ. ಹಾಕಿ ಕರ್ನಾಟಕ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ. ನಾವು ಒಳ್ಳೆ ಕೆಲಸ ಮಾಡುತ್ತಿದ್ದೇವೆ ಎಂಬ ನಂಬಿಕೆ ಅಧಿಕಾರಿಗಳಿಗೆ ಇದೆ. ಹೀಗಾಗಿಯೇ ಅಲ್ಪ ತಡವಾದರೂ ನಮ್ಮೆಲ್ಲಾ ಬೇಡಿಕೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಮತ್ತು ಹಾಕಿ ಕರ್ನಾಟಕ ನಡುವಣ ಸಂಬಂಧ ಹೇಗಿದೆ?

- ಉಭಯ ಸಂಸ್ಥೆಗಳ ನಡುವೆ ಈಗ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಂಬಂಧ ತುಂಬಾ ಸುಧಾರಿಸಿದೆ. ರಾಜ್ಯದಲ್ಲಿ ಹಾಕಿ ಅಭಿವೃದ್ಧಿಪಡಿಸಲು ಎರಡೂ ಸಂಸ್ಥೆಯವರೂ ಒಗ್ಗೂಡಿ ಕೆಲಸ ಮಾಡುತ್ತೇವೆ.

ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಹೇಳಲು ಅವಸರಿಸಿದೆ ಎಂದು ಅನಿಸಿದೆಯೇ?

- 2017ರ ಮಾರ್ಚ್‌ನಲ್ಲಿ ನಿವೃತ್ತಿ ಪ್ರಕಟಿಸಿದೆ. ಇನ್ನು ಎರಡು ವರ್ಷ ಆಡಬಹುದಿತ್ತು. ಚೆನ್ನಾಗಿ ಆಡುತ್ತಿರುವಾಗಲೇ ವಿದಾಯ ಹೇಳುವುದು ಒಳಿತು. ಅದರಿಂದ ಗೌರವ ಉಳಿಯುತ್ತದೆ. ಯಾರಾದರೂ ಬಲವಂತವಾಗಿ ತಂಡದಿಂದ ಹೊರಗೆ ತಳ್ಳಿದರೆ ಮನಸ್ಸಿಗೆ ಆಘಾತವಾಗುತ್ತದೆ. 16 ವರ್ಷಗಳಿಂದ ಕಾಪಾಡಿಕೊಂಡಿರುವ ಘನತೆಯೂ ಮಣ್ಣುಪಾಲಾಗುತ್ತದೆ. ಹಲವು ಆಟಗಾರರಿಗೆ ಇಂತಹ ಕಹಿ ಅನುಭವ ಆಗಿದೆ. ವಿವಾದಗಳೊಂದಿಗೆ ವೃತ್ತಿಬದುಕಿಗೆ ಅಂತ್ಯ ಹಾಡುವುದು ಇಷ್ಟವಿರಲಿಲ್ಲ. ಹೀಗಾಗಿಯೇ 2016ರ ರಿಯೊ ಒಲಿಂಪಿಕ್ಸ್‌ ಸಮಯದಲ್ಲೇ ನಿವೃತ್ತಿಯ ಬಗ್ಗೆ ಆಲೋಚಿಸಿದ್ದೆ. ಇದರ ಹಿಂದೆ ಹೊಸ ಆಟಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶವೂ ಇತ್ತು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಖುಷಿಯಿಂದಲೇ ವಿದಾಯ ಪ್ರಕಟಿಸಿದ್ದೇನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು