ಭಾನುವಾರ, ಆಗಸ್ಟ್ 1, 2021
26 °C

ವರ್ಣದ್ವೇಷದ ಬೆಂಕಿಯಲ್ಲಿ ಅರಳಿದವರು

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಜುಲೈ 8ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ಮತ್ತು ಆತಿಥೇಯ ತಂಡದ ಆಟಗಾರರು ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‘ ಲೋಗೊ ಧರಿಸಿ ಆಡಲಿದ್ದಾರೆ. ಈ ಮೂಲಕ ವರ್ಣದ್ವೇಷವನ್ನು ಪ್ರತಿಭಟಿಸಲಾಗುತ್ತದೆ. ಇದೇ ಹೊತ್ತಿನಲ್ಲಿ ತಮ್ಮ ಜೀವನದಲ್ಲಿ ಜನಾಂಗೀಯ ನಿಂದನೆಗಳನ್ನು ಎದುರಿಸುತ್ತ ತಮ್ಮ ಕ್ರೀಡಾ ಪ್ರತಿಭೆಯಿಂದಲೇ ತಾರೆಗಳಾಗಿ ಬೆಳೆದ ಪ್ರಮುಖರ ಕಿರುಪರಿಚಯ ಗಿರೀಶ ದೊಡ್ಡಮನಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ

ಟೈಗರ್ ವುಡ್ಸ್‌

ವೃತ್ತಿಪರ ಗಾಲ್ಫ್ ಪಟು

ಒಟ್ಟು ಗಳಿಕೆ: ₹ 10500 ಕೋಟಿ

ದೇಶ: ಅಮೆರಿಕ

ಗಾಲ್ಫ್‌ ಕ್ರೀಡಾ ಕ್ಷೇತ್ರದಲ್ಲಿ ಟೈಗರ್ ವುಡ್ಸ್‌ ಹೆಸರು ಕೇಳದವರಾರು? ವೃತ್ತಿಪರ ಗಾಲ್ಫ್‌ನಿಂದಲೇ ಶ್ರೀಮಂತಿಕೆಯ ತುತ್ತತುದಿಗೆ ಏರಿದ ಆಟಗಾರ. ಎಲ್ಡ್ರಿಕ್ ಟಾಂಟ್  ವುಡ್ಸ್‌ ಅವರ ನಿಜನಾಮಧೇಯ. ಅವರಿಗೆ ಟೈಗರ್ ನಿಕ್‌ನೇಮ್.  ಅಮೆರಿಕದ ಮ್ಯಾನ್‌ಹಟನ್‌ನಲ್ಲಿ  ಅವರ ಅಜ್ಜ  ಮೈಲ್ಸ್‌ ವುಡ್ಸ್‌ ಕೂಲಿ ಕೆಲಸ ಮಾಡಿ ಬಡಕುಟುಂಬಕ್ಕೆ ಆಸರೆಯಾಗಿದ್ದರು.  ಅವರ ಎರಡನೇ ಹೆಂಡತಿಯ ಮಗ ಅರ್ಲ್ ವುಡ್ಸ್‌ (ಟೈಗರ್ ತಂದೆ), ವಿಯೆಟ್ನಾಂ ಸೇನೆಯಲ್ಲಿ ದೊಡ್ಡ ಹುದ್ದೆಯನ್ನು ನಿರ್ವಹಿಸಿ ನಿವೃತ್ತರಾದವರು.  ಟೈಗರ್ ತಾಯಿ ಥಾಯ್ಲೆಂಡ್ ಮೂಲದವರು.  ಅವರಿಗೆ ತಂದೆಯೇ ಮೊದಲು ಗಾಲ್ಫ್ ಕಲಿಸಿದ ಗುರುವೂ ಹೌದು. ಐದು ಮಾಸ್ಟರ್‌ ಟೂರ್ನಿ, ನಾಲ್ಕು ಪಿಜಿಎ ಚಾಂಪಿಯನ್‌ಷಿಪ್, ಮೂರು ಯು.ಎಸ್. ಓಪನ್ ಮತ್ತು ಮೂರು ಓಪನ್ ಚಾಂಪಿಯನ್‌ಷಿಪ್‌ ಗೆದ್ದ ಸಾಧನೆ ಇವರದ್ದು. ವಿಶ್ವ ಗಾಲ್ಫ್‌ ಹಾಲ್‌ ಆಫ್ ಫೇಮ್‌ ಗೌರವ ಇವರಿಗೆ ಸಂದಿದೆ. ದಶಕದ ಹಿಂದೆ ಪತ್ನಿಯೊಂದಿಗಿನ ವಿರಸ, ವಿಚ್ಛೇದನ, ವಿವಾದಗಳಿಂದ ಜರ್ಜರಿತರಾಗಿದ್ದರು.

ಫ್ಲಾಯ್ಡ್ ಮೇವೆದರ್ ಜೂನಿಯರ್

ವೃತ್ತಿಪರ ಬಾಕ್ಸರ್

ಒಟ್ಟು ಗಳಿಕೆ: ₹ 8250 ಕೋಟಿ

ದೇಶ: ಅಮೆರಿಕ

ಪೊಲೀಸ್ ದೌರ್ಜನ್ಯದಲ್ಲಿ ಆಫ್ರೊ–ಅಮೆರಿಕನ್ ಜಾರ್ಜ್‌ ಫ್ಲಾಯ್ಡ್‌ ಸಾವಿಗೀಡಾದರು. ಆಗ ಮೊಟ್ಟಮೊದಲಿಗೆ ಜಾರ್ಜ್‌ ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದು ವೃತ್ತಿಪರ ಬಾಕ್ಸಿಂಗ್‌ ಕಣದ ’ರಾಜ‘ ಫ್ಲಾಯ್ಡ್ ಮೇವೆದರ್ ಜೂನಿಯರ್. ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ್ದಾರೆ. ಆದರೆ ಅವರ ಬಾಲ್ಯದ ಜೀವನ ಮುಳ್ಳಿನ ಹಾಸಿಗೆಯ ಮೇಲೆ ಕಳೆದಿದ್ದು ವಿಪರ್ಯಾಸ. ಅವರ ತಂದೆ ಕೂಡ ವೃತ್ತಿಪರ ಬಾಕ್ಸರ್ ಆಗಿದ್ದರು. ಆದರೆ ಮಾದಕ ವಸ್ತುಗಳ ವ್ಯಾಪಾರದಲ್ಲಿ ಜೈಲು ಸೇರಿದರು. ತಾಯಿ ಮಾದಕ ವ್ಯಸನಿಯಾಗಿದ್ದರು. ಆದರೂ ತಂದೆಯ ಒಡನಾಟದಲ್ಲಿದ್ದ ಸಂದರ್ಭದಲ್ಲಿ ಫ್ಲಾಯ್ಡ್‌ಗೆ ಬಾಕ್ಸಿಂಗ್ ರುಚಿ ಹತ್ತಿತ್ತು.  ಚಿಕ್ಕಂಪದಿರ ಸಹಾಯ ಸಿಕ್ಕಿತು. ಬಡತನದ ಬಿಸಿಯಲ್ಲಿ ಶಾಲೆಯ ಓದು ಮೊಟಕಾಯಿತು. ಆದರೆ ಕಾಲನ ಹೊಡೆತ ತಿಂದು ಮನ ಮತ್ತು ದೇಹವನ್ನು ವಜ್ರಾದಪಿ ಕಠಿಣಗೊಳಿಸಿಕೊಂಡರು. ಬಾಕ್ಸರ್‌ ಆಗಿ ಬೆಳೆದರು. 1996 ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಫೆದರ್‌ವೇಟ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದರು. ವೃತ್ತಿಪರ ಬಾಕ್ಸಿಂಗ್‌ನಲ್ಲಿ ಶೇ 100ರಷ್ಟು ವಿಜಯದ ಸಾಧನೆ ಅವರದ್ದು. ಅವರಾಡಿದ 50 ಪಂದ್ಯಗಳಲ್ಲಿ ಎದುರಾಳಿಗಳೇ ತಲೆಬಾಗಿದ್ದರು. ಇದು ಅವರಿಗೆ ಹಣ, ಖ್ಯಾತಿಯ ಹೊಳೆಯನ್ನು ತಂದುಕೊಟ್ಟಿತು. ಲಾಸ್‌ ವೆಗಾಸ್‌ನಲ್ಲಿ 22 ಸಾವಿರ ಚದರಡಿಯ ವೈಭವೋಪೇತ ಮನೆ ಅವರದ್ದು. ಆದರೆ ಅವರೂ ಕೆಲವು ವಿವಾದಗಳಿಂದ ಸುದ್ದಿಯಾಗಿದ್ದರು.

ಲೂಯಿಸ್ ಹ್ಯಾಮಿಲ್ಟನ್

ಮೋಟಾರ್ ರೇಸಿಂಗ್ 

ಒಟ್ಟು ಗಳಿಕೆ: ₹ 3750 ಕೋಟಿ

ದೇಶ: ಇಂಗ್ಲೆಂಡ್

ಲೂಯಿಸ್‌ಗೆ ಆಫ್ರಿಕಾ ಮೂಲದ ತಂದೆ ಮತ್ತು ಬ್ರಿಟಿಷ್ ಮೂಲದ ತಾಯಿ. ಶಾಲೆಯಲ್ಲಿ ಇವರನ್ನು ವರ್ಣಭೇದ ನಿಂದನೆಗಳು ಕಾಡಿದ್ದವು. ಸಹಪಾಠಿಗಳ ಕೀಟಲೆಯನ್ನು ಮೆಟ್ಟಿನಿಲ್ಲಲು ಲೂಯಿಸ್, ಕರಾಟೆ ಕಲಿತರು. ಕ್ರೀಡೆಯಲ್ಲಿ ಆಸಕ್ತಿ ಚಿಗುರಿತು. ವೇಗದ ವಾಹನಗಳ ಓಟಕ್ಕೆ ಬೆರಗಾದರು.  ಯಶಸ್ಸಿನ ಮೆಟ್ಟಿಲುಗಳನ್ನು ಏರಿದರು. ವಿಶ್ವಶ್ರೇಷ್ಠ ಫಾರ್ಮುಲಾ ಒನ್ ರೇಸ್ ಡ್ರೈವರ್ ಆಗಿ ಬೆಳಗುತ್ತಿದ್ದಾರೆ. ಮರ್ಸಿಡಿಸ್ ತಂಡದಲ್ಲಿರುವ ಅವರ ಶರವೇಗಕ್ಕೆ ಮರುಳಾಗದವರೇ ಇಲ್ಲ. 35ನೇ ವಯಸ್ಸು ತಲುಪುವ ಮುನ್ನ ಆರು ಬಾರಿ ಚಾಂಪಿಯನ್ ಆದವರು. 84 ವಿನ್ಸ್ ಮತ್ತು 151 ಪೋಡಿಯಂ ಫೀನಿಷ್ ಅವರ ಹೆಸರಲ್ಲಿವೆ. ಕಪ್ಪು ಜನಾಂಗದ ಮೊದಲ ರೇಸ್ ಡ್ರೈವರ್ ಎಂಬ ಶ್ರೇಯವೂ ಅವರದ್ದು.

ಲೀ ಬಾರ್ನ್ ಜೇಮ್ಸ್

ಬ್ಯಾಸ್ಕೆಟ್‌ಬಾಲ್

ಒಟ್ಟು ಗಳಿಕೆ: ₹ 4500 ಕೋಟಿ

ದೇಶ: ಅಮೆರಿಕ

ಇವತ್ತು ಸಾವಿರಾರು ಕೋಟಿ ರೂಪಾಯಿ ದುಡ್ಡಿನ ಒಡೆಯನಾಗಿರುವ ಲೀಬಾರ್ನ್ ಜೇಮ್ಸ್‌ ಬಾಲ್ಯ ಮಾತ್ರ ಕಡುಬಡತನ ಮತ್ತು ಕಷ್ಟಗಳ ಕಣಜವಾಗಿತ್ತು. ಗ್ಲೋರಿಯಾ ಮೇರಿ ಜೇಮ್ಸ್‌ ತಮ್ಮ 16ನೇ ವಯಸ್ಸಿನಲ್ಲಿ ಲೀ ಬಾರ್ನ್‌ಗೆ ಜನ್ಮ ನೀಡಿದ್ದರು. ಅಪ್ಪ ಅಂಥೋನಿಗೆ ಅಪರಾಧ ಹಿನ್ನೆಲೆ ಇದ್ದ ಕಾರಣ ಕುಟುಂಬದಿಂದ ದೂರವೇ ಇದ್ದರು. ಓಹಿಯೊ ನಗರದಲ್ಲಿ ಗ್ಲೋರಿಯಾಗೆ ನೆಲೆ ಸಿಗುವುದೇ ಕಷ್ಟವಾಗಿತ್ತು. ಓಣಿಯಿಂದ ಓಣಿಗೆ ಮನೆ ಬದಲಿಸುವುದೇ ಕೆಲಸವಾಗಿತ್ತು. ಮಗನ ಭವಿಷ್ಯದ ಚಿಂತೆ ಕಾಡಿತ್ತು. ಅದೊಂದು ದಿನ ಸ್ಥಳೀಯ ಫುಟ್‌ಬಾಲ್ ಕೋಚ್ ಫ್ರ್ಯಾಂಕ್ ವಾಕರ್‌ ಕುಟುಂಬದೊಂದಿಗೆ ಲೀಬಾರ್ನ್‌ರನ್ನು ಕಳುಹಿಸಿಬಿಟ್ಟರು.  ಒಂಬತ್ತು ವರ್ಷದ ಲೀ ಯನ್ನು ವಾಕರ್ ಬ್ಯಾಸ್ಕೆಟ್‌ಬಾಲ್ ಕೋಚಿಂಗ್‌ಗೆ ಸೇರಿಸಿದರು. ಹುಡುಗ ಬೆಳೆದ ರೀತಿ ಅಮೋಘವಾದದ್ದು. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಲೀಬಾರ್ನ್ 2008, 2012ರ ಒಲಿಂಪಿಕ್ಸ್‌ ಚಿನ್ನವನ್ನು ಕೊರಳಿಗೇರಿಸಿಕೊಂಡರು. 2004ರಲ್ಲಿ ಕಂಚಿನ ಪದಕ ಗೆದ್ದ ತಂಡದಲ್ಲಿದ್ದರು.  ಇತ್ತೀಚೆಗೆ ಪ್ರಕಟವಾದ ಫೋರ್ಬ್ಸ್‌ ಶ್ರೀಮಂತ ಕ್ರೀಡಾಪಟುಗಳ ಟಾಪ್‌ 10 ಪಟ್ಟಿಯಲ್ಲಿದ್ದಾರೆ. ಎನ್‌ಬಿಎದ ಪ್ರಮುಖ ತಾರೆಗಳ ಪಟ್ಟಿಯಲ್ಲಿ ಲೀಬಾರ್ನ್ ಕೂಡ ಇದ್ದಾರೆ.

ಸೆರೆನಾ ವಿಲಿಯಮ್ಸ್

ಮಹಿಳಾ ಟೆನಿಸ್

ಒಟ್ಟು ಗಳಿಕೆ:₹ 695 ಕೋಟಿ

ಟೆನಿಸ್ ಅಂಗಣದ ಸಿಂಹಿಣಿ  ಸೆರೆನಾ ವಿಲಿಯಮ್ಸ್‌. 23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ. ಶ್ರೀಮಂತ ಮಹಿಳಾ ಕ್ರೀಡಾಪಟುಗಳಲ್ಲಿ ಅಗ್ರಸ್ಥಾನ. ಬ್ರಿಟಿಷ್ ಆಧಿಪತ್ಯದ ಟೆನಿಸ್ ಆಟದಲ್ಲಿ ಅನಭಿಷಿಕ್ತ ರಾಣಿಯಾಗಿ ಮೆರೆದಿದ್ದು ಸೆರೆನಾ ಸಾಧನೆ ಸಣ್ಣದಲ್ಲ. ಈ ಬಾರಿ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯಲ್ಲಿಯೂ ಅವರು ಕಣಕ್ಕಿಳಿಯಲಿದ್ದಾರೆ. ಬಾಲ್ಯದಲ್ಲಿ ಫ್ಲಾರಿಡಾದಲ್ಲಿ ಸೆರೆನಾ ಮತ್ತು ಅವರ ಸಹೋದರಿ ವೀನಸ್ ಅವರು ತರಬೇತಿಗೆ ಹೋಗುತ್ತಿದ್ದ ಅಕಾಡೆಮಿಯಲ್ಲಿ ಜನಾಂಗೀಯ ದ್ವೇಷ ಕಿಡಿನುಡಿಗಳಿಗೆ ತುತ್ತಾಗಿದ್ದರು. ಅದರಿಂದಾಗಿ ಅವರ ಸೆರೆನಾ ತಂದೆ ವಿಲಿಯಮ್ಸ್ ತಮ್ಮ ಮಕ್ಕಳನ್ನು ಟೆನಿಸ್‌ಗೆ ಕಳಿಸುವುದನ್ನು ಬಿಟ್ಟಿದ್ದರು.  ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರು ಮತ್ತು ಪತ್ನಿ ಸೇರಿ ತರಬೇತಿ ನೀಡಿದರು.  ಅದರಿಂದಾಗಿಯೇ ಅಕ್ಕ–ತಂಗಿ ಇಬ್ಬರ ಶೈಲಿಯು ಉಳಿದೆಲ್ಲ ಆಟಗಾರ್ತಿಯರಿಗಿಂತ ವಿಭಿನ್ನವಾಗಿತ್ತು. ಹಣ, ಖ್ಯಾತಿಯಲ್ಲಿ ಇಬ್ಬರೂ ಜೊತೆಯಾಗಿಯೇ ಬೆಳೆದರು. 

ಕ್ರಿಸ್ ಗೇಲ್

ಕ್ರಿಕೆಟ್

ಒಟ್ಟು ಗಳಿಕೆ: ₹ 187 ಕೋಟಿ

ದೇಶ: ವೆಸ್ಟ್‌ಇಂಡೀಸ್

ಜಮೈಕಾದ ಬೀದಿಗಳಲ್ಲಿ ಕಳೆದು ಹೋಗಬೇಕಿದ್ದ ಕ್ರಿಸ್‌ ಗೇಲ್ ತಮ್ಮ ಕ್ರಿಕೆಟ್‌ ಪ್ರತಿಭೆಯಿಂದಲೇ ’ಯುನಿವರ್ಸ್‌ ಬಾಸ್‘ ಆಗಿ ಬೆಳೆದಿದ್ದಾರೆ. ಅವರ ತಂದೆ ಪೊಲೀಸ್ ಆಗಿದ್ದರು. ತಾಯಿ ಬೀದಿ ಬದಿಯಲ್ಲಿ ತಿನಿಸುಗಳನ್ನು ಮಾರುತ್ತಿದ್ದರು. ಅಮ್ಮನೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದ ಕ್ರಿಸ್ಟೋಫರ್ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಲೂಕಾಸ್ ಕ್ರಿಕೆಟ್ ಅಕಾಡೆಮಿ ಸೇರಿದ ನಂತರ ಅವರ ಬದುಕು ಬದಲಾಯಿತು.  ವಿವಿಯನ್ ರಿಚರ್ಡ್ಸ್‌, ಬ್ರಯನ್ ಲಾರಾ, ಗಾರ್ಡನ್ ಗ್ರಿನಿಜ್ ಅವರ ನಂತರ ವಿಂಡೀಸ್ ಕಂಡ ಅದ್ಭುತ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಅವರದ್ದು.  ವಿಂಡೀಸ್ ತಂಡದ ನಾಯಕನೂ ಆದರು. ಆದರೆ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಲೇ ವಿಶ್ವದ ಎಲ್ಲ ದೇಶಗಳಲ್ಲಿಯೂ ಅಭಿಮಾನಿಗಳನ್ನು ಗಳಿಸಿದರು. ದೊಡ್ಡ ದೊಡ್ಡ ಕ್ರಿಕೆಟಿಗರೇ ಅವರ ಅಭಿಮಾನಿಗಳಾಗಿದ್ದು ಸುಳ್ಳಲ್ಲ. ಐಪಿಎಲ್ ಸೇರಿದಂತೆ ವಿವಿಧ ಲೀಗ್‌ಗಳಲ್ಲಿ ಮಿಂಚಿದರು. ತಮ್ಮ ತುಂಟಾಟ, ಕೀಟಲೆ ಸ್ವಭಾವದಿಂದ ವಿವಾದಗಳನ್ನು ಮೈಮೇಲೆಳೆದುಕೊಂಡರು.  ಸ್ವಂತ ಐಷಾರಾಮಿ ಬಾರ್, ದುಬಾರಿ ಕಾರ್‌, ಬಂಗ್ಲೆಗಳ ಒಡೆಯನಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು