ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್‌: ನಾರಿಯರ ಆಟ ಚೆಂದ

ಟೋಕಿಯೊದಲ್ಲಿ ಬೆಳಗಿದ ಭಾರತದ ಸ್ತ್ರೀಶಕ್ತಿ
Last Updated 7 ಆಗಸ್ಟ್ 2021, 16:33 IST
ಅಕ್ಷರ ಗಾತ್ರ

ಟೋಕಿಯೊ ಒಲಿಂಪಿಕ್‌ ಕೂಟದ ಸಂದೇಶ ತುಂಬಾ ಸ್ಪಷ್ಟವಾಗಿದೆ. ಭಾರತೀಯ ಕ್ರೀಡಾರಂಗದಲ್ಲಿ ಸ್ತ್ರೀಶಕ್ತಿ ಈಗ ಫಳ ಫಳ ಹೊಳೆಯುತ್ತಿದೆ. ಉಜ್ವಲ ಭವಿಷ್ಯದ ಕುರಿತು ಭರವಸೆಯನ್ನೂ ಮೂಡಿಸಿದೆ...

***

ಭಾರತೀಯ ಮಹಿಳೆಯರು ಮೂಲತಃ ಕಠಿಣ ಪರಿಶ್ರಮಿಗಳು. ಅವರಿಗೆ ಅವಕಾಶ ಮತ್ತು ಸ್ವಾತಂತ್ರ್ಯ ಸಿಕ್ಕರೆ ಏನು ಬೇಕಾದರೂ ಸಾಧಿಸುತ್ತಾರೆ. ವಿಶ್ವ ಭೂಪಟದಲ್ಲಿ ದೇಶದ ಹೆಸರು ರಾರಾಜಿಸುವಂತೆ ಮಾಡುತ್ತಾರೆ. ಟೋಕಿಯೊ ಒಲಿಂಪಿಕ್ ಕೂಟ ಅದಕ್ಕೊಂದು ಉತ್ತಮ ನಿದರ್ಶನ. ಮೀರಾಬಾಯಿ ಚಾನು, ಪಿ.ವಿ. ಸಿಂಧು, ಲವ್ಲಿನಾ ಬೋರ್ಗೊಹೈನ್ ಜಯಿಸಿರುವ ಪದಕಗಳ ಹಿಂದಿನ ಶ್ರಮ ಸಣ್ಣದಲ್ಲ.

ಈ ಕೂಟದಲ್ಲಿ ಸ್ಪರ್ಧಿಸಿರುವ ಒಬ್ಬೊಬ್ಬ ಹೆಣ್ಣುಮಗಳಿಗೂ ವಿಭಿನ್ನ ಕತೆಗಳಿವೆ. ಅವರು ಪಟ್ಟ ಪರಿಶ್ರಮ, ಅನುಭವಿಸಿದ ಕಷ್ಟಗಳು ಹಲವಾರು. ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರ ಕತೆಯನ್ನೇ ನೋಡಿ. ಬಡತನ, ಸಾಮಾಜಿಕ ಅಡೆತಡೆಗಳನ್ನು ಆ ಹುಡುಗಿ ಮೀರಿ ಬಂದ ರೀತಿ ಅಮೋಘವಾದದ್ದು. ಡಿಸ್ಕಸ್‌ ಥ್ರೋನಲ್ಲಿ ಕಮಲ್‌ಪ್ರೀತ್ ಕೌರ್ ಸಾಧನೆ ಮೆಚ್ಚುವಂತಹದ್ದು. ಇನ್ನುಳಿದ ಕ್ರೀಡೆಗಳಲ್ಲಿಯೂ ಹೆಣ್ಣುಮಕ್ಕಳ ಸಾಧನೆ ಗಮನಾರ್ಹ. ಇದು ಭಾರತದಲ್ಲಿ ಮಹಿಳಾ ಕ್ರೀಡೆಯು ಬೆಳೆಯುತ್ತಿರುವುದರ ದ್ಯೋತಕ. ಇನ್ನಷ್ಟು, ಮಗದಷ್ಟು ಬೆಳೆಯುವ ಅವಕಾಶವೂ ಇದೆ ಎಂಬುದು ಇಲ್ಲಿ ಮುಖ್ಯ.

ಆದರೆ ಹೆಣ್ಣುಮಕ್ಕಳು ಏನಾದರೂ ಸಾಧಿಸಬೇಕೆಂದರೆ ಮೊತ್ತಮೊದಲು ಹೆತ್ತವರ ಬೆಂಬಲ ಮುಖ್ಯ. ಕುಟುಂಬ ಜೊತೆಯಾಗಿ ನಿಂತರೆ ಮುಂದಿನ ಹಾದಿ ಸುಲಭ. ನಾನು ಮಂಗಳೂರಿನ ಸಂಪ್ರದಾಯಸ್ಥ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ್ದು. ಹೆಣ್ಣುಮಕ್ಕಳಿಗೆ ನಿಯಮಗಳು ಹೆಚ್ಚು. 18–19ನೇ ವಯಸ್ಸಿಗೆ ಮದುವೆ ಮಾಡುವ ರೂಢಿಯೂ ನಮ್ಮಲ್ಲಿತ್ತು. ಶಾರ್ಟ್ಸ್‌ (ಅಥ್ಲೆಟಿಕ್ ಪೋಷಾಕು) ಧರಿಸಿ ಓಡುವುದು, ಕ್ರೀಡೆಗಳಲ್ಲಿ ಆಡುವುದೆಲ್ಲ ದೂರದ ಮಾತಾಗಿತ್ತು. ಆದರೆ ಶಾಲೆಯಲ್ಲಿ ನನ್ನ ಓಟದ ಪ್ರತಿಭೆಯನ್ನು ಗುರುತಿಸಿದ್ದ ಗೇಮ್ ಟೀಚರ್ ಆಗಿದ್ದ ಡಾಲಿ ಮೇಡಮ್ ಮತ್ತು ಮಂಗಳೂರು ಅಥ್ಲೆಟಿಕ್ಸ್‌ ಸಂಸ್ಥೆಯ ಜ್ಯೋತಿರ್ಮಯಿ ಮನೆಗೆ ಬಂದು ಅಪ್ಪನ ಮನವೊಲಿಸಿದರು. ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಅದಾದ ನಂತರ ಅಪ್ಪನೇ ನನ್ನ ಬೆಂಬಲಕ್ಕೆ ನಿಂತರು. ಎಲ್ಲ ಸಾಧನೆಗಳಿಗೂ ಅವರೇ ಬೆನ್ನಿಗೆ ನಿಂತರು.

ಮೀರಾಬಾಯಿ ಚಾನು ಮತ್ತು ಮೇರಿ ಕೋಮ್ –ಪಿಟಿಐ ಚಿತ್ರ
ಮೀರಾಬಾಯಿ ಚಾನು ಮತ್ತು ಮೇರಿ ಕೋಮ್ –ಪಿಟಿಐ ಚಿತ್ರ

ಆ ರೀತಿ ಎಲ್ಲರ ಮನೆಗಳಲ್ಲಿಯೂ ಹೆಣ್ಣುಮಕ್ಕಳಿಗೆ ಅವಕಾಶ ನೀಡುವಂತಾಗಬೇಕು. ಏಕೆಂದರೆ, ಈಗ ಸರ್ಕಾರದಿಂದ ತಾಂತ್ರಿಕ ಮತ್ತು ಸೌಲಭ್ಯಗಳು ಸಿಗುತ್ತಿವೆ. ನಾವು ಒಲಿಂಪಿಕ್ಸ್‌ಗೆ ಹೋದಾಗ ಮಹಿಳೆಯರ ರಿಲೆ ತಂಡದಲ್ಲಿ ಕೇವಲ ನಾಲ್ಕು ಜನ ಮಾತ್ರ ಇದ್ದೆವು. ಈಗಿನಂತೆ ಐದನೇ ರನ್ನರ್ ನೀಡುತ್ತಿರಲಿಲ್ಲ. ಇಡೀ ತಂಡದಲ್ಲಿ ಇದ್ದದ್ದು 5–6 ಮಹಿಳೆಯರು. ಈಗ 53 ಹುಡುಗಿಯರು ಇದ್ದಾರೆ. ಈ ಬೆಳವಣಿಗೆ ಖುಷಿ ಕೊಡುತ್ತದೆ. ಕರ್ನಾಟಕದಿಂದ ಒಲಿಂಪಿಕ್ಸ್‌ಗೆ ಹೋದ ಮೊದಲ ಮಹಿಳೆಯೆಂಬ ಹೆಮ್ಮೆ ನನ್ನದು. ಆಗ ನನಗೆ ಸಿಕ್ಕ ಅವಕಾಶದಲ್ಲಿ 1984ರ ಒಲಿಂಪಿಕ್ಸ್‌ಗೆ ಆಯ್ಕೆಯಾದೆ. ಪಿ.ಟಿ. ಉಷಾ, ನಾನು, ವಲ್ಸಮ್ಮ ಮತ್ತು ಶೈನಿ ಅಬ್ರಹಾಂ ಮಹಿಳೆಯರ 4X400 ಮೀಟರ್ಸ್ ರಿಲೆ ಫೈನಲ್ ತಲುಪಿದ್ದೆವು. ಅಂದು ನಾವು ಹಚ್ಚಿದ ದೀಪ ಇವತ್ತು ಕ್ರೀಡಾಜ್ಯೋತಿಯಾಗಿ ಬೆಳಗುತ್ತಿದೆ.

ಆಗ ನಾವೆಲ್ಲ ಕ್ರೀಡೆಯ ಮೇಲಿನ ಆಸಕ್ತಿ, ಪ್ರೀತಿಗಾಗಿ ಸ್ಪರ್ಧಿಸುತ್ತಿದ್ದೆವು. ದುಡ್ಡು, ಹೆಸರು, ಹುದ್ದೆಗಳ ಆಕರ್ಷಣೆ ಇರಲಿಲ್ಲ. ಅಲ್ಲದೆ ವೃತ್ತಿಪರ ತರಬೇತಿ, ನೆರವು ಸಿಬ್ಬಂದಿ, ಟಿ.ವಿ., ಇಂಟರ್‌ನೆಟ್‌ ಇತ್ಯಾದಿಗಳೂ ಇರಲಿಲ್ಲ. ಒಲಿಂಪಿಕ್ ಕೂಟವೆಂಬುದು ಇದೆ ಎಂಬ ಅರಿವೂ ನನಗಿರಲಿಲ್ಲ. ಟಿ.ವಿಯಂತೂ ದೂರದ ಮಾತು. ಲಾಸ್‌ ಏಂಜಲೀಸ್ ಒಲಿಂಪಿಕ್ಸ್‌ಗೆ ನಾನು ಆಯ್ಕೆಯಾದಾಗ ರಾಜಕೀಯ ಧುರೀಣರಾಗಿದ್ದ ಜನಾರ್ದನ ಪೂಜಾರಿ ಅವರು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರೊಂದಿಗೆ ಮಾತನಾಡಿ ಮಂಗಳೂರಿಗೆ ಟೆಲಿವಿಷನ್ ತರಿಸಿದ್ದರು. ನಾವು ಓಡುವುದನ್ನು ನೋಡಲು ವ್ಯವಸ್ಥೆ ಮಾಡಿದ್ದರು. ಅಂತಹ ಕಾಲಘಟ್ಟ ನಮ್ಮದು.

ವಿನೇಶಾ ಪೋಗಟ್ (ಬಲಬದಿ)
ವಿನೇಶಾ ಪೋಗಟ್ (ಬಲಬದಿ)

ಇನ್ನು ಅಮೆರಿಕಕ್ಕೆ ಹೋಗಿ ಏರ್‌ಪೋರ್ಟ್‌ನಲ್ಲಿ ಇಳಿದಾಗ ಹೊಸ ಜಗತ್ತಿಗೆ ಹೋದ ಅನುಭವವಾಗಿತ್ತು. ಅಲ್ಲಿಯ ಸಂಸ್ಕೃತಿ, ಕಾರ್ಯವೈಖರಿಗಳೆಲ್ಲವೂ ವಿಭಿನ್ನ. ಅವತ್ತು ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಒಂದು ಘಟನೆ ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಅಲ್ಲಿ ಸೆಕ್ಯುರಿಟಿ ವಿಭಾಗದಲ್ಲಿ ಪರಿಶೀಲನೆ ಪ್ರಕ್ರಿಯೆಗಳು ನಡೆದಿದ್ದ ಸಂದರ್ಭ ಅದು. ‘ಭದ್ರತಾ ಅಧಿಕಾರಿಯೊಬ್ಬ ನನ್ನತ್ರ ಬಂದು ಡೇಟಿಂಗ್ ಹೋಗೋಣ ಬರ್ತಿಯಾ’ ಎಂದು ಕೇಳಿದ್ದ. ಆ ಪದವನ್ನು ಮೊದಲ ಬಾರಿ ಕೇಳಿದ್ದೆ. ಅರ್ಥವಾಗದೇ ನಿಂತಿದ್ದೆ. ನನ್ನೊಂದಿಗೆ ಇದ್ದ ಮ್ಯಾನೇಜರ್ ‘ಇಲ್ಲಿಂದ ಹೋಗೊಣ ನಡಿ’ ಎಂದು ಕರೆದುಕೊಂಡು ಬಂದಿದ್ದರು. ಒಲಿಂಪಿಕ್ ಗ್ರಾಮ ನೋಡಿದಾಗ ಎಷ್ಟೊಂದು ಜನ, ಅದೆಷ್ಟೊಂದು ದೇಶಗಳು, ಏನೆಲ್ಲಾ ಸ್ಪರ್ಧೆಗಳು ಇವೆಯಲ್ಲ ಎಂದು ಅಚ್ಚರಿಪಟ್ಟಿದ್ದೆ.

ಆದರೆ ಇವತ್ತು ಪರಿಸ್ಥಿತಿ ಹಾಗಿಲ್ಲ. ಈಗ ನಿಜಕ್ಕೂ ಪರಿಸ್ಥಿತಿ ಸುಧಾರಿಸಿದೆ. ಸರ್ಕಾರ, ಪ್ರಾಯೋಜಕರು ಹಣ ವಿನಿಯೋಗಿಸಲು ಸಿದ್ಧ ಇದ್ದಾರೆ. ವಿದೇಶ ಪ್ರವಾಸ, ನೆರವು ಸಿಬ್ಬಂದಿ ಮತ್ತು ತಾಂತ್ರಿಕ ನೆರವು ಲಭಿಸುತ್ತಿವೆ. ಅದರಿಂದಾಗಿಯೇ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಾಧನೆಗಳು ಮೂಡಿಬಂದಿವೆ. ಆದರೆ ಇಷ್ಟು ದೊಡ್ಡ ದೇಶಕ್ಕೆ ಇಷ್ಟೇ ಸಾಕಾಗಲ್ಲ.ಮಹಿಳೆಯರು ಇನ್ನೂ ಹೆಚ್ಚು ಬೆಳೆಯುವ ಅವಶ್ಯಕತೆ ಮತ್ತು ಅವಕಾಶ ಎರಡೂ ಇವೆ.

ಮೀರಾಬಾಯಿ ಚಾನು
ಮೀರಾಬಾಯಿ ಚಾನು

ಏಕೆಂದರೆ, ಆಗ ನಾವು ಓಟದಲ್ಲಿ ಸೋಲಿಸಿದ್ದ ನೈಜೀರಿಯಾ ಇವತ್ತು ಒಲಿಂಪಿಕ್ ಪದಕ ಸಾಧನೆ ಮಾಡುವ ಮಟ್ಟಕ್ಕೆ ಬೆಳೆದಿದೆ. ಆದರೆ ನಾವಿನ್ನೂ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಹೆಚ್ಚು ಸುಧಾರಣೆಯಾಗಿಲ್ಲ. ಅಂದಿನ ಟೈಮಿಂಗ್ ಮತ್ತು ಇವತ್ತಿನವರ ಟೈಮಿಂಗ್ ಹೋಲಿಕೆ ಮಾಡಿ ಹೆಚ್ಚು ಮುಂದುವರಿದಿಲ್ಲ. ಅಥ್ಲೆಟಿಕ್ಸ್‌ ಎಂದರೆ ಕಠಿಣ ಶ್ರಮ ಬೇಡುವ ವಿಭಾಗ. ಆದರೆ, ಈಗ ದಿಢೀರ್ ಜನಪ್ರಿಯತೆ ಮತ್ತು ಹಣ ಸಿಗುವತ್ತ ಆಕರ್ಷಣೆ ಇದೆ. ಅನುಕೂಲಸ್ಥರು ಟೆನಿಸ್, ಬ್ಯಾಡ್ಮಿಂಟನ್, ಕ್ರಿಕೆಟ್‌ನತ್ತ ಮಕ್ಕಳನ್ನು ಕಳಿಸುತ್ತಾರೆ. ಆದರೆ ಅಥ್ಲೆಟಿಕ್ಸ್‌ಗೆ ಬರುವವರು ಬಹುತೇಕ ಗ್ರಾಮೀಣ ಭಾಗದ ಮತ್ತು ಸಾಮಾಜಿಕ, ಆರ್ಥಿಕವಾಗಿ ಕೆಳಸ್ತರದಲ್ಲಿರುವ ಕುಟುಂಬಗಳ ಮಕ್ಕಳು. ಅಂತಹ ಹೆಣ್ಣುಮಕ್ಕಳಿಗೆ ಸೂಕ್ತ ಬೆಂಬಲ, ಪೋಷಣೆ ಸಿಗುವಂತೆ ವ್ಯವಸ್ಥೆಗಳಾಗಬೇಕು. ಒಲಿಂಪಿಕ್ಸ್‌ ಮಟ್ಟಕ್ಕೆ ಬೆಳೆಯುವುದು ಮತ್ತು ಅಲ್ಲಿ ಗೆಲ್ಲುವುದು ಹುಡುಗಾಟವೇ ಅಲ್ಲ. ಅದಕ್ಕಾಗಿ ನಿರಂತರ ಅಭ್ಯಾಸ, ಪ್ರತಿಭಾಶೋಧ ಮತ್ತು ಪೋಷಣೆಗಳು ಬೇಕು. ಅದು ಮನೆಯೊಳಗಿನಿಂದಲೇ ಆರಂಭವಾಗಬೇಕು.

ಮಾನಸಿಕ ಒತ್ತಡ ಕುರಿತ ಚರ್ಚೆಗಳು ಈಗ ಹೆಚ್ಚು ನಡೆಯುತ್ತಿವೆ. ಇದನ್ನು ನಾನು ಒಪ್ಪುವುದಿಲ್ಲ. ಕ್ರೀಡಾಪಟುವೆಂದ ಮೇಲೆ ಸರ್ವತೋಮುಖವಾಗಿ ಬಲಾಢ್ಯವಾಗಿರಲೇಬೇಕು. ಕ್ರೀಡೆಗಳಿರುವುದೇ ಮನೋಲ್ಲಾಸ ಹೆಚ್ಚಿಸಲು ಮತ್ತು ನಮ್ಮನ್ನು ಸಬಲರನ್ನಾಗಿ ಮಾಡಲು. ಆದರೆ, ಮಾನಸಿಕ ಒತ್ತಡದ ಕಾರಣ ನೀಡುವ ಟ್ರೆಂಡ್ ಈಗ ಆರಂಭವಾಗಿದೆ. ನನಗಿದು ಅರ್ಥವಾಗದ ವಿಷಯ. ಮಕ್ಕಳನ್ನು ಒಬ್ಬ ಮಾನವೀಯ ವ್ಯಕ್ತಿಯಾಗಿ ಬೆಳೆಸಬೇಕೆಂದರೆ ಕ್ರೀಡೆಯ ಬುನಾದಿ ಇರಲೇಬೇಕು. ಬರೀ ಓದು, ಬರಹಕ್ಕೆ ಒತ್ತಡ ಹೇರುವುದು ಸರಿಯಲ್ಲ. ನನ್ನ ಮಗನಿಗೆ ಬೋರ್ಡ್‌ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿಯೂ ದಿನಕ್ಕೊಂದು ಗಂಟೆ ಹೊರಗೆ ಹೋಗಿ ಆಡಿ ಬರಲೇಬೇಕು ಎಂಬ ಕಟ್ಟಲೆ ಹಾಕಿದ್ದೆ. ವಿದ್ಯೆ, ಉದ್ಯೋಗ, ಹಣದ ಜೊತೆಗೆ ಆರೋಗ್ಯವೂ ಮುಖ್ಯ. ಕ್ರೀಡೆಗಳನ್ನು ಬರೀ ಪದಕ ಜಯ ಮತ್ತು ಆರ್ಥಿಕ ಲಾಭದ ದೃಷ್ಟಿಯಿಂದ ನೋಡಬಾರದು. ಅದು ಪ್ರತಿಯೊಬ್ಬರ ಮನೋದೈಹಿಕ ಬೆಳವಣಿಗೆಗೆ ಮುಖ್ಯ. ಆಟವೆಂದರೆ ಕ್ರಿಕೆಟ್ ಎಂಬ ಕಲ್ಪನೆಯೂ ತಪ್ಪು. ಅದೊಂದು ಕ್ರೀಡೆಯೇ ಅಲ್ಲ. ಅದು ಮನರಂಜನೆ. ಆದರೆ ವೈಭವೀಕರಣದಿಂದಾಗಿ ಅದರ ಆಕರ್ಷಣೆ ಹೆಚ್ಚಿದೆ.

ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಪಿ.ವಿ.ಸಿಂಧು ಅವರ ಸಂಭ್ರಮ
ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಪಿ.ವಿ.ಸಿಂಧು ಅವರ ಸಂಭ್ರಮ

ಕೋವಿಡ್ ಕಾಲದಲ್ಲಿಆರೋಗ್ಯ ಎಷ್ಟು ಮುಖ್ಯ ಎನ್ನುವುದು ನಮಗೆಲ್ಲ ಗೊತ್ತಾಗಿದೆ. ಜೊತೆಗೆ ಒಲಿಂಪಿಕ್ ಸಾಧನೆಗಳ ಪ್ರಭಾವಳಿಯೂ ಆವರಿಸಿದೆ. ಇದು ಭಾರತದಲ್ಲಿ ಕ್ರೀಡಾ ಭವಿಷ್ಯವನ್ನು ಉಜ್ವಲಗೊಳಿಸಲು ವೇದಿಕೆಯಾಗಬೇಕು.ಕ್ರೀಡಾ ಆಡಳಿತಗಳು ತಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಲು ಇದೇ ಸಕಾಲ. ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ಕ್ರೀಡಾಂಗಣಕ್ಕೆ ಬರಬೇಕು. ಈಶಾನ್ಯ ಭಾರತದ ಹುಡುಗಿಯರ ಸಾಧನೆಗಳು ನಮಗೆ ಮಾದರಿಯಾಗಬೇಕು. ಮೀರಾ, ಲವ್ಲಿನಾ, ಮೇರಿ ಅವರಂತಹವರು ಬೇರೆ ಬೇರೆ ರಾಜ್ಯಗಳಿಂದಲೂ ಬರಬೇಕು. ನನ್ನ ಕರ್ನಾಟಕದ ಪ್ರತಿಭೆಗಳೂ ಬೆಳಗಬೇಕು.

(ವಂದನಾ ರಾವ್ ಅವರು 1984 ಮತ್ತು 1988ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಥ್ಲೀಟ್)

ನಿರೂಪಣೆ: ಗಿರೀಶ ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT