ಭಾನುವಾರ, ಫೆಬ್ರವರಿ 28, 2021
31 °C

ಡಬ್ಲ್ಯುಡಬ್ಲ್ಯುಇ ಎಂಬ ಮಾಯಾಲೋಕದ ಸುತ್ತ...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

ನೋಡ ನೋಡುತ್ತಿದ್ದಂತೆ ಟೆಲಿವಿಷನ್‌ ಪರದೆಯೊಳಗೆ ಕತ್ತಲು ಆವರಿಸುತ್ತದೆ. ಕ್ಷಣಾರ್ಧದಲ್ಲೇ ಚರ್ಚ್‌‌ ಗಂಟೆಯ ಶಬ್ದ ಮೊಳಗುತ್ತದೆ. ಕೌಬಾಯ್‌ ಕ್ಯಾಪ್‌ ಧರಿಸಿರುವ ಆಜಾನುಬಾಹು ವ್ಯಕ್ತಿ ಸಿಟ್ಟಿನಿಂದ ತನ್ನೆರಡು ಕೈಗಳನ್ನು ಮೇಲಕ್ಕೆತ್ತುತ್ತಿದ್ದಂತೆ ಸಿಡಿಲು ಬಂದೆರಗುತ್ತದೆ. ಅದಾಗಲೇ ರಿಂಗ್ ಪ್ರವೇಶಿಸಿರುವ ಎದುರಾಳಿಯು ಭಯದಿಂದ ನಲುಗಿ ಹೋಗುತ್ತಾನೆ. ಟಿ.ವಿ. ವೀಕ್ಷಕ ವಿವರಣೆಗಾರ, ಆ ಭುಜಬಲ ಪರಾಕ್ರಮಿಯ ಹೆಸರು ಪ್ರಕಟಿಸುತ್ತಿದ್ದಂತೆ ಬಾಕ್ಸಿಂಗ್‌ ಅರೆನಾದಲ್ಲಿ ಕಿಕ್ಕಿರಿದು ಸೇರಿರುವ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತದೆ. ಟಿ.ವಿ. ಮುಂದೆ ಕುಳಿತಿರುವವರ ಕಣ್ಣುಗಳೂ ಅರಳುತ್ತವೆ. ಮೈ ಮನಗಳಲ್ಲಿ ಮಿಂಚು ಹರಿದ ಅನುಭವವಾಗುತ್ತದೆ. 

ಅಂದ ಹಾಗೆ ಆ ವ್ಯಕ್ತಿಯ ಹೆಸರು ‘ದಿ ಅಂಡರ್‌ಟೇಕರ್‌’... ಡಬ್ಲ್ಯುಡಬ್ಲ್ಯುಎಫ್‌/ ಡಬ್ಲ್ಯುಡಬ್ಲ್ಯುಇ ನೋಡುವವರಿಗೆ ಈ ಹೆಸರು ಚಿರಪರಿಚಿತ.

ಆರಡಿ ಎತ್ತರ ಹಾಗೂ ಬರೋಬ್ಬರಿ 140 ಕೆ.ಜಿ. ‘ತೂಕ’ದ ವ್ಯಕ್ತಿ ‘ಅಂಡರ್‌ಟೇಕರ್‌’. ಅವರು ಜನಿಸಿದ್ದು ಅಮೆರಿಕದ ಹ್ಯೂಸ್ಟನ್‌ನಲ್ಲಿ. ಮೂಲ ಹೆಸರು ಮಾರ್ಕ್‌ ವಿಲಿಯಂ ಕ್ಯಾಲವೇ. ತಮ್ಮ ಭಯಾನಕ ಹಾವಭಾವ ಹಾಗೂ ಗಿಮಿಕ್‌ಗಳ ಮೂಲಕವೇ ಮೂರು ದಶಕಗಳ ಕಾಲ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ದ 55 ವರ್ಷ ವಯಸ್ಸಿನ ವಿಲಿಯಂ‌, ಹೋದ ವಾರ ಡಬ್ಲ್ಯುಡಬ್ಲ್ಯುಇ ಪಯಣಕ್ಕೆ ಕೊನೆ ಹಾಡಿದರು. 

ಅಂಡರ್‌ಟೇಕರ್‌ ಮಾತ್ರವಲ್ಲ, ಜಾನ್‌ ಸೆನಾ, ಬಿಗ್‌ ಷೋ, ಶಾನ್‌ ಮೈಕಲ್ಸ್‌‌, ಟ್ರಿಪಲ್‌ ಎಚ್‌, ದಿ ರಾಕ್‌, ಕೇನ್‌, ಕರ್ಟ್‌ ಆ್ಯಂಗಲ್‌, ಎಡ್ಜ್‌, ರೇ ಮಿಸ್ಟಿರಿಯೋ, ಸಿ.ಎಂ.ಪಂಕ್‌, ಡೇವ್‌ ಬಟಿಷ್ಟಾ, ಬೂಕರ್‌ ಟಿ...ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 


ದಿ ಗ್ರೇಟ್ ಖಲಿ (ಎಡ)

ಇವರ ‘ಫೈಟ್‌’ಗಳನ್ನು ನೋಡುತ್ತಲೇ ಬಾಲ್ಯ ಕಳೆದವರು ಅನೇಕರಿದ್ದಾರೆ. ತಾವೇ ಜಾನ್‌ ಸೆನಾ, ಬಿಗ್‌ ಷೋ, ಟ್ರಿಪಲ್‌ ಎಚ್‌ ಎಂದು ಭಾವಿಸಿ ಪರಸ್ಪರ ಕಾದಾಡಿದವರಿಗೇನೂ ಕಮ್ಮಿ ಇಲ್ಲ. ಶಾಲಾ ಸಮವಸ್ತ್ರ ಹರಿದ ಪರಿವೆಯೂ ಇರದೇ, ಮೈಯೆಲ್ಲಾ ಮಣ್ಣಾಗಿಸಿಕೊಂಡು, ಮನೆಗೆ ಹೋದ ಮೇಲೆ ಅಪ್ಪ, ಅಮ್ಮನಿಂದ ಒದೆ ತಿಂದವರು ಅದೆಷ್ಟೋ ಮಂದಿ. ಡಬ್ಲ್ಯುಡಬ್ಲ್ಯುಇನ ಸೆಳೆತವೇ ಅಂತಹದ್ದು. ಅದೊಂಥರಾ ಮಾಯೆ. ಒಮ್ಮೆ ಟಿ.ವಿ. ಎದುರು ಕೂತರೇ ಸಮಯ ಸರಿದು ಹೋದದ್ದೇ ಗೊತ್ತಾಗುವುದಿಲ್ಲ. ಅಪ್ಪ, ಅಮ್ಮ ಅಥವಾ ಮನೆಯ ಹಿರಿಯರು ಟಿ.ವಿ. ಆಫ್‌ ಮಾಡುವವರೆಗೂ ಹೊರ ಜಗತ್ತಿನ ಪರಿವೆಯೇ ಇರುವುದಿಲ್ಲ. 

ಏನಿದು ಡಬ್ಲ್ಯುಡಬ್ಲ್ಯುಇ

ವರ್ಲ್ಡ್‌ ವ್ರೆಸ್ಲಿಂಗ್‌ ಎಂಟರ್‌ಟೈನ್‌ಮೆಂಟ್‌... ಅಮೆರಿಕದ ಬಹುದೊಡ್ಡ ಕಂಪನಿ ಇದು. ಮನರಂಜನೆಯೇ ಇದರ ಜೀವಾಳ. ವಿನ್ಸ್‌ ಮೆಕ್‌ಮಹೊನ್‌ ಒಡೆತನದ ಈ ಕಂಪನಿಯಲ್ಲಿ ಸುಮಾರು 850 ಮಂದಿ ಕೆಲಸ ಮಾಡುತ್ತಿದ್ದಾರೆ. 

ಆರಂಭದಲ್ಲಿ ಇದನ್ನು ಡಬ್ಲ್ಯುಡಬ್ಲ್ಯುಎಫ್‌ (ವರ್ಲ್ಡ್‌ ವ್ರೆಸ್ಲಿಂಗ್‌ ಫೆಡರೇಷನ್‌) ಎಂದು ಕರೆಯಲಾಗುತ್ತಿತ್ತು. 2002ರಲ್ಲಿ ಡಬ್ಲ್ಯುಡಬ್ಲ್ಯುಇ ಎಂದು ಮರು ನಾಮಕರಣ ಮಾಡಲಾಯಿತು.

ಈ ಕಂಪನಿಯು ವರ್ಷದಲ್ಲಿ 500 ಸ್ಪರ್ಧೆಗಳನ್ನು ಆಯೋಜಿಸುತ್ತದೆ. 150ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಡಬ್ಲ್ಯುಡಬ್ಲ್ಯುಇ ಪ್ರಸಾರವಾಗುತ್ತದೆ. ಹೀಗಾಗಿ  ಇದರ ಆದಾಯ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. 2019ರಲ್ಲೇ ಒಟ್ಟು ₹7,263 ಕೋಟಿ ಆದಾಯ ಹರಿದುಬಂದಿದೆ.


ಜಾನ್‌ ಸೆನಾ –ಟ್ವಿಟರ್‌ ಚಿತ್ರ

ಸತ್ಯ, ಮಿಥ್ಯೆಯ ನಡುವೆ...

ಡಬ್ಲ್ಯುಡಬ್ಲ್ಯುಇನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ಟಿ.ವಿ.ಯಲ್ಲಿ ನೋಡಿ ನಿಬ್ಬೆರಗಾಗುವುದು ಸಹಜ. ಅಂದ ಹಾಗೆ ಅವೆಲ್ಲವೂ ಪೂರ್ವನಿರ್ಧರಿತವಾಗಿರುತ್ತವೆ. ಪರದೆಯ ಹಿಂದೆ ಹಲವು ಮಂದಿ ‘ಸೂತ್ರದಾರರು’ ಇರುತ್ತಾರೆ. ಅವರ ಅಣತಿಯಂತೆಯೇ ಸ್ಪರ್ಧಿಗಳು ಕಾದಾಡುತ್ತಾರೆ. ಹೀಗೆಯೇ ತಳ್ಳಬೇಕು, ಹೀಗೆಯೇ ಒದೆಯಬೇಕು, ಇಂತಹ ಸಮಯದಲ್ಲೇ ‘ಲಾಕ್‌’ ಮಾಡಬೇಕು, ಎದುರಾಳಿಯನ್ನು ಯಾವಾಗ ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಬೇಕು ಎಂಬುದನ್ನೆಲ್ಲಾ ‘ಸೂತ್ರದಾರರೇ’ ನಿರ್ಧರಿಸುತ್ತಾರೆ. ಪ್ರೇಕ್ಷಕರನ್ನು ರಂಜಿಸುವ ಸಲುವಾಗಿ ಸ್ಪರ್ಧಿಗಳು ಕೆಲವೊಮ್ಮೆ ಗಂಭೀರವಾಗಿ ಗಾಯಗೊಂಡಂತೆ, ಪ್ರಜ್ಞೆ ತಪ್ಪಿದಂತೆ ನಟಿಸುತ್ತಾರೆ. ರೆಫರಿಗಳೂ ಈ ನಾಟಕದ ಪಾತ್ರದಾರಿಗಳೇ ಆಗಿರುತ್ತಾರೆ. ಒಮ್ಮೊಮ್ಮೆ ಸ್ಪರ್ಧಿಗಳು ರಕ್ತ ಉಗುಳುವ ಮತ್ತು ಅವರ ಮುಖ ರಕ್ತಸಿಕ್ತವಾಗಿರುವ ದೃಶ್ಯಗಳನ್ನೂ ನೋಡಿರುತ್ತೇವೆ. ಅದು ಸಹಜವಾದುದಲ್ಲ. ಅದಕ್ಕಾಗಿಯೇ ಸ್ಪರ್ಧಿಗಳಿಗೆ ಮಾತ್ರೆಗಳನ್ನು (ಬ್ಲಡ್‌ ಕ್ಯಾಪ್ಸುಲ್ಸ್‌) ನೀಡಲಾಗಿರುತ್ತದೆ.

ಸ್ಪರ್ಧಿಗಳು, ‘ಸೂತ್ರದಾರರ’ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮೈಮರೆತರೆ ಪ್ರಾಣಕ್ಕೆ ಸಂಚಕಾರ ತಪ್ಪಿದ್ದಲ್ಲ. ಅಂತಹ ಕೆಲ ಅಚಾತುರ್ಯಗಳು ಈಗಾಗಲೇ ಸಂಭವಿಸಿವೆ. ಟ್ರಿಪಲ್‌ ಎಚ್‌, ಜೋಯ್‌ ಮರ್ಕ್ಯುರಿ ಮತ್ತು ಡರೆನ್‌ ಡ್ರೊಜ್‌ದೋವ್‌‌ ಅವರು ಗಂಭೀರವಾಗಿ ಗಾಯಗೊಂಡಿದ್ದು ಇದಕ್ಕೆ ಉತ್ತಮ ನಿದರ್ಶನ.  

ವಿಜೇತರು ಮೊದಲೇ ನಿರ್ಧಾರಿತರಾಗಿರುತ್ತಾರೆಯೇ...

ಡಬ್ಲ್ಯುಡಬ್ಲ್ಯುಇ ವೀಕ್ಷಕರಿಗೆ ಇಂತಹ ಪ್ರಶ್ನೆ ಕಾಡುವುದು ಸಹಜ. ಹೌದು, ಪಂದ್ಯಕ್ಕೂ ಮುನ್ನವೇ ವಿಜೇತರನ್ನು ನಿರ್ಧರಿಸಲಾಗಿರುತ್ತದೆ. ವಿನ್ಸ್‌ ಮೆಕ್‌ಮಹೊನ್‌‌ ಅವರೇ ಈ ಸತ್ಯವನ್ನು ಒಪ್ಪಿಕೊಂಡಿದ್ದರು. 


ಮಹಿಳಾ ಸ್ಪರ್ಧಿಗಳು

ಇವರೆಲ್ಲಾ ಏನು ತಿಂತಾರೆ!

ಡಬ್ಲ್ಯುಡಬ್ಲ್ಯುಇ ಸ್ಪರ್ಧಿಗಳು ಕಾರ್ಬೊಹೈಡ್ರೇಟ್‌ ಪ್ರಮಾಣ ಹೆಚ್ಚಿರುವ ಆಹಾರಗಳನ್ನೇ ನೆಚ್ಚಿಕೊಂಡಿದ್ದಾರೆ. ಬ್ರೆಡ್‌, ಪಾಸ್ತಾ, ತಾಜಾ ಹಣ್ಣು ಹಾಗೂ ತರಕಾರಿಗಳು ಅವರ ಮೆನುವಿನಲ್ಲಿರುತ್ತವೆ. 

ಜಾನ್‌ ಸೆನಾ ಅವರು ಬೆಳಿಗ್ಗಿನ ಉಪಾಹಾರಕ್ಕೆ ಎರಡು ಮೊಟ್ಟೆ, ಆರು ಮೊಟ್ಟೆಯ ಬಿಳಿ ಭಾಗ, ಪ್ರೋಟಿನ್‌ ಬಾರ್‌ಗಳನ್ನು ಸೇವಿಸುತ್ತಾರೆ. ಮಧ್ಯಾಹ್ನದ ಊಟಕ್ಕೆ ಎರಡು ಕೋಳಿಯ ಎದೆಭಾಗ, ಬ್ರೌನ್‌ ರೈಸ್‌ ಹಾಗೂ ತರಕಾರಿಯ ಸಲಾಡ್‌ ತಿನ್ನುತ್ತಾರೆ. ಜೊತೆಗೆ ಬಾಳೆಹಣ್ಣು, ಪ್ರೋಟಿನ್‌ ಶೇಕ್‌ ಹಾಗೂ ಗ್ರಿಲ್ಲಡ್‌ ಚಿಕನ್‌ ಅನ್ನೂ ಸೇವಿಸುತ್ತಾರೆ. ಇತರರೂ ಇದೇ ಬಗೆಯ ಆಹಾರ ಕ್ರಮವನ್ನು ಅನುಸರಿಸುತ್ತಾರೆ.

ಡಬ್ಲ್ಯುಡಬ್ಲ್ಯುಇನಲ್ಲಿ ಪಾಲ್ಗೊಳ್ಳುವ ಹೆಚ್ಚಿನ ಸ್ಪರ್ಧಿಗಳಿಗೆ ಮಂಡಿನೋವು ಬಾಧಿಸುತ್ತದೆ. ಇದರಿಂದ ಪಾರಾಗುವ ಸಲುವಾಗಿ ಅವರೆಲ್ಲಾ ಸ್ಕ್ವಾಟ್ಸ್‌, ಲೆಗ್‌ ಪ್ರೆಸ್‌ ವ್ಯಾಯಾಮಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಭಾರ ಎತ್ತುವುದರಲ್ಲೂ ಇವರೆಲ್ಲಾ ನಿಸ್ಸೀಮರು. 

ಇವರು ಕಾಯಂ ನೌಕರರೇ?

ಡಬ್ಲ್ಯುಡಬ್ಲ್ಯುಇ ಕಂಪನಿಯು ಸ್ಪರ್ಧಿಗಳೊಂದಿಗೆ ಇಂತಿಷ್ಟು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿರುತ್ತದೆ. ಸ್ಪರ್ಧಿಗಳ ಜನಪ್ರಿಯತೆಯ ಆಧಾರದಲ್ಲಿ ಅವರ ಒಪ್ಪಂದ ನವೀಕರಿಸುವ ನಿರ್ಧಾರ ಕೈಗೊಳ್ಳುತ್ತದೆ. ಯಾರನ್ನೂ ಕಾಯಂ ಉದ್ಯೋಗಿಗಳನ್ನಾಗಿ ನೇಮಿಸಿಕೊಳ್ಳುವುದಿಲ್ಲ. ಹೀಗಾಗಿಯೇ ಸ್ಪರ್ಧಿಗಳಿಗೆ ಆರೋಗ್ಯ ವಿಮೆ, ನಿವೃತ್ತಿ ವೇತನದಂತಹ ಸೌಲಭ್ಯಗಳು ಸಿಗುವುದಿಲ್ಲ. 

ಭಾರತದವರೂ ಪಾಲ್ಗೊಳ್ಳುತ್ತಾರೆಯೇ

ದಲೀಪ್‌ ಸಿಂಗ್‌ ರಾಣಾ ಅಂದರೆ ಬಹುತೇಕರಿಗೆ ಗೊತ್ತಾಗುವುದಿಲ್ಲ. ‘ದಿ ಗ್ರೇಟ್‌ ಖಲಿ’ ಎಂಬ ಹೆಸರಿನಿಂದಲೇ ಚಿರಪರಿಚಿತರಾಗಿರುವ ರಾಣಾ, 2006ರಿಂದ 2014ರವರೆಗೆ ಡಬ್ಲ್ಯುಡಬ್ಲ್ಯುಇನಲ್ಲಿ ಪಾಲ್ಗೊಂಡಿದ್ದರು.

ಬಳಿಕ ಕವಿತಾ ದಲಾಲ್‌ (ಕವಿತಾ ದೇವಿ), ಸತೇಂದರ್‌ ದಾಗರ್‌ (ಜೀತ್‌ ರಾಮ), ಅಮನ್‌ಪ್ರೀತ್‌ ಸಿಂಗ್‌ ರಾಂಧವ (ಮಹಾಬಲಿ ಷೇರಾ) ಅವರೂ ಇದರಲ್ಲಿ ಭಾಗವಹಿಸಿದ್ದರು. ಕವಿತಾ ಅವರು ಡಬ್ಲ್ಯುಡಬ್ಲ್ಯುಇನಲ್ಲಿ ಕಣಕ್ಕಿಳಿದ ಭಾರತದ ಮೊದಲ ಮಹಿಳೆ ಎಂಬ ಹಿರಿಮೆ ಹೊಂದಿದ್ದಾರೆ.

ಮಹಿಳೆಯರಿಗೂ ಆದ್ಯತೆ

80ರ ದಶಕದಿಂದಲೂ ಡಬ್ಲ್ಯುಡಬ್ಲ್ಯುಇನಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಅವರಿಗಾಗಿಯೇ ವಿಶೇಷ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸಲಾಗುತ್ತಿದೆ. ಚಾರ್ಲಟ್‌ ಫ್ಲೇರ್‌, ಶಶಾ ಬಾಂಕ್ಸ್‌, ತ್ರಿಷಾ ಸ್ಟ್ರಾಸ್‌, ನಿಕಿ ಬೆಲ್ಲಾ, ಬೆಕಿ ಲಿಂಚ್‌, ಎ.ಜೆ. ಲೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಐರ್ಲೆಂಡ್‌ನ 33 ವರ್ಷ ವಯಸ್ಸಿನ ಬೆಕಿ ಲಿಂಚ್, ಡಬ್ಲ್ಯುಡಬ್ಲ್ಯುಇನಲ್ಲಿ ಅತಿ ಹೆಚ್ಚು ‌ಮೊತ್ತ ಪಡೆಯುವ ಸ್ಪರ್ಧಿ ಎನಿಸಿದ್ದಾರೆ. 

ನಾನು ದೊಡ್ಡ ಅಭಿಮಾನಿ

ಡಬ್ಲ್ಯುಡಬ್ಲ್ಯುಇ ಅಂದರೆ ನನಗೆ ತುಂಬಾ ಇಷ್ಟ. ಅಂಡರ್‌ಟೇಕರ್‌ ನನ್ನ ನೆಚ್ಚಿನ ಸ್ಪರ್ಧಿ. ಅವರು ಯಾವಾಗಲೂ ಕನಸಲ್ಲಿ ಬಂದು ಕಾಡುತ್ತಿದ್ದರು. ಬಾಲ್ಯದ ದಿನಗಳಲ್ಲಿ ಅವರನ್ನು ಟಿ.ವಿ.ಪರದೆಯಲ್ಲಿ ಕಂಡು ಭಯಭೀತನಾಗುತ್ತಿದ್ದೆ. ಕ್ರಮೇಣ ಅವರ ಕೌಶಲಗಳು ಹಾಗೂ ಕ್ರೀಡಾ ಮನೋಭಾವಕ್ಕೆ ಮಾರುಹೋದೆ. ಅವರ ನಿವೃತ್ತಿ ಜೀವನ ಸಂತಸಮಯವಾಗಿರಲಿ’ ಎಂದು ಬಾಲಿವುಡ್‌ ನಟ ವರುಣ್‌ ಧವನ್‌, ಹೋದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. 

ಅತಿ ಹೆಚ್ಚು ಮೊತ್ತ ಪಡೆಯುವ ಅಗ್ರ ಹತ್ತು ಮಂದಿ (ವರ್ಷಕ್ಕೆ)

ಸ್ಪರ್ಧಿ- ಮೊತ್ತ (₹ ಕೋಟಿಗಳಲ್ಲಿ)

ಬ್ರೂಕ್‌ ಲೆಸ್ನರ್- 75.62

ರೋಮನ್‌ ರೀಗನ್ಸ್‌- 37.81

ರ‍್ಯಾಂಡಿ ಒರ್ಟೊನ್‌- 31

ಸೇಥ್‌ ರೋಲಿನ್ಸ್‌- 30.25

ಟ್ರಿಪಲ್‌ ಎಚ್- 24.95

ಬೆಕಿ ಲಿಂಚ್‌- 23.44

ಬಿಲ್‌ ಗೋಲ್ಡ್‌ಬರ್ಗ್‌- 22.68

ಶೇನ್‌ ಮೆಕ್‌ಮಹೊನ್‌- 15.88

ಸ್ಟೆಫಾನಿ ಮೆಕ್‌ಮಹೊನ್‌- 15.12

ಬ್ರೌನ್‌ ಸ್ಟ್ರಾಮನ್‌- 14.36

*ಆಧಾರ: ಫೋರ್ಬ್ಸ್‌ (ಏಪ್ರಿಲ್‌ 3, 2020) 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು