ಶನಿವಾರ, ಫೆಬ್ರವರಿ 27, 2021
30 °C

PV Web Exclusive: ಶೂಟಿಂಗ್ ರೇಂಜ್‌ನಲ್ಲಿ ದಾಖಲೆಗಳ ‘ಸೌರಭ’

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿಯ ಡಾ.ಕರ್ಣಿ ಸಿಂಗ್ ಶೂಟಿಂಗ್‌ ರೇಂಜ್‌ನಲ್ಲಿ ಜನವರಿ 15ರಂದು ನಡೆದ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್‌ನಲ್ಲಿ ಯುವ ಶೂಟರ್ ಸೌರಭ್ ಚೌಧರಿ ಸುಲಭವಾಗಿ ಅರ್ಹತೆ ಗಳಿಸಿದರು. ಇಷ್ಟು ಮಾತ್ರವಲ್ಲ, ಈ ಟ್ರಯಲ್ಸ್‌ನಲ್ಲಿ ಅವರು ವಿಶ್ವ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. ಟಿ–1 ವಿಭಾಗದ 60 ಶಾಟ್‌ಗಳ ಅರ್ಹತಾ ಸುತ್ತಿನಲ್ಲಿ 590 ಸ್ಕೋರ್ ಕಲೆ ಹಾಕಿದ ಅವರು ಫೈನಲ್‌ನಲ್ಲಿ 246.9 ಸ್ಕೋರ್‌ ಗಳಿಸಿದರು. 10 ಮೀಟರ್ಸ್ ಏರ್ ಪಿಸ್ತೂಲ್ ಶೂಟಿಂಗ್‌ ಸ್ಪರ್ಧೆಯ ಫೈನಲ್‌ನಲ್ಲಿ ಇಷ್ಟು ದೊಡ್ಡ ಪ್ರಮಾಣದ ಸ್ಕೋರ್ ಯಾರೂ ಗಳಿಸಲಿಲ್ಲ. ಉತ್ತರ ಕೊರಿಯಾದ ಕಿಮ್ ಸಾಂಗ್ ಗುಕ್ ಗಳಿಸಿದ್ದ 246.5 ಸ್ಕೋರ್ ಈ ವರೆಗೆ ದಾಖಲೆ ಪಟ್ಟಿಯಲ್ಲಿ ಇತ್ತು.

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸೌರಭ್‌ ಇನ್ನೂ 20 ವರ್ಷ ತುಂಬದ, ಹಾಲುಗಲ್ಲದ ಹುಡುಗ. ಉತ್ತರಪ್ರದೇಶದ ಮೀರಟ್‌ನ ಈ ಶೂಟರ್‌ಗೆ ದಾಖಲೆಗಳು ಹೊಸದೇನೂ ಅಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಅತಿ ಕಿರಿಯ ಶೂಟರ್ ಎಂಬ ಹೆಗ್ಗಳಿಕೆ 2018ರಲ್ಲೇ ಅವರದಾಗಿತ್ತು. ಆ ವರ್ಷ ಅವರು 10 ಮೀಟರ್ಸ್ ಏರ್ ಪಿಸ್ತೂಲ್ ವಿಭಾಗದಲ್ಲಿ ಪದಕ ಗಳಿಸಿದ್ದರು. ಅದಕ್ಕೂ ಮೊದಲು, ಜೂನಿಯರ್ ವಿಭಾಗದಲ್ಲಿ ವಿಶ್ವದಾಖಲೆ ಬರೆದಿದ್ದರು. ಜರ್ಮನಿಯಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನಲ್ಲಿ ಅವರು ಆ ದಾಖಲೆ ಮಾಡಿದ್ದರು.

2018ರಲ್ಲಿ ಕೊರಿಯಾದ ಚಾಂಗನ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 245.5 ಸ್ಕೋರ್‌ ಗಳಿಸಿ ಚಿನ್ನ ಗೆದ್ದಿದ್ದ ಅವರು ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದರು. ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌, ಐಎಸ್‌ಎಸ್‌ಎಫ್‌ ವಿಶ್ವಕಪ್, ಯೂತ್ ಒಲಿಂಪಿಕ್ಸ್‌, ಏಷ್ಯನ್ ಗೇಮ್ಸ್‌ ಮತ್ತು ಏಷ್ಯನ್ ಏರ್ ಗನ್ ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಭಾರತೀಯ ಎಂಬ ಹಿರಿಮೆಯೂ ಅವರದ್ದು.

ನದಿಜಲದಿಂದ ಭೂಯಿಷ್ಠವಾದ ಉತ್ತರ‍‍ಪ್ರದೇಶದ ಪಶ್ಚಿಮ ಭಾಗದ ಕೃಷಿಕ ಕುಟುಂಬದಲ್ಲಿ ಜನಿಸಿದ ಸೌರಭ್ 13ನೇ ವಯಸ್ಸಿನಲ್ಲೇ ಶೂಟಿಂಗ್‌ ಕ್ರೀಡೆಯತ್ತ ಹೊರಳಿದ್ದರು. ಪ್ರತಿ ದಿನ 30 ಕಿಲೋಮೀಟರ್ ದೂರ ಬಸ್‌ನಲ್ಲಿ ಪ್ರಯಾಣಿಸಿ ಅಭ್ಯಾಸ ಮಾಡುತ್ತಿದ್ದರು.

2018 ಅವರ ಬದುಕಿಗೆ ಭಾರಿ ತಿರುವು ನೀಡಿದ ವರ್ಷ. ಯೂತ್ ಒಲಿಂಪಿಕ್ಸ್‌, ಏಷ್ಯನ್ ಗೇಮ್ಸ್, ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌, ಜೂನಿಯರ್ ವಿಶ್ವಕಪ್ ಮುಂತಾದ ಪ್ರಮುಖ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮತ್ತು ಪದಕಗಳನ್ನು ಗೆದ್ದ ವರ್ಷವಾಗಿತ್ತು ಅದು. ಮರುವರ್ಷವೂ ಅವರ ಸಾಧನೆ ಮುಂದುವರಿಯಿತು. ವೈಯಕ್ತಿಕ ವಿಭಾಗ ಮಾತ್ರವಲ್ಲ, ತಂಡ ವಿಭಾಗ ಮತ್ತು ಮಿಶ್ರ ವಿಭಾಗದಲ್ಲೂ ಅವರು ‍ಪದಕಗಳನ್ನು ಗಳಿಸಿದರು. ಮಿಶ್ರ ವಿಭಾಗದಲ್ಲಿ ಮನು ಭಾಕರ್ ಜೊತೆಗೂಡಿ ಬೀಜಿಂಗ್‌ನಲ್ಲಿ ವಿಶ್ವಕಪ್ ಟೂರ್ನಿಯ ಚಾಂಪಿಯನ್ ಆದರು.

ದೇಶಕ್ಕಾಗಿ ಪದಕಗಳ ಬೇಟೆ
ಭಾರತಕ್ಕಾಗಿ ಯೂತ್ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನ, ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಕಂಚು, ವಿಶ್ವಕಪ್‌ಗಳಲ್ಲಿ ಆರು ಚಿನ್ನ, ತಲಾ ಒಂದು ಬೆಳ್ಳಿ ಮತ್ತು ಕಂಚು, ಏಷ್ಯನ್‌ ಗೇಮ್ಸ್‌ನಲ್ಲಿ ಒಂದು ಚಿನ್ನ, ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ, ಜೂನಿಯರ್ ವಿಶ್ವಕಪ್‌ಗಳಲ್ಲಿ ಮೂರು ಚಿನ್ನ ಅವರ ಪಾಲಾಗಿವೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಮೊದಲು ಗಮನ ಸೆಳೆದದ್ದು 2017ರಲ್ಲಿ. ಜರ್ಮನಿಯಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ 198 ಸ್ಕೋರ್ ಗಳಿಸಿದ್ದ ಅವರು ನಾಲ್ಕನೇ ಸ್ಥಾನ ಪಡೆದಿದ್ದರು. ಮುಂದಿನ ವರ್ಷ ಯೂತ್ ಒಲಿಂಪಿಕ್ಸ್‌ನಲ್ಲಿ 244.2 ಸ್ಕೋರ್‌ ಸಂಪಾದಿಸಿ ಚಿನ್ನ ಗೆದ್ದರು. ಅದೇ ವರ್ಷ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ ಮಿಶ್ರ ವಿಭಾಗದಲ್ಲಿ 407.3 ಸ್ಕೋರ್‌ ಗಳಿಸಲು ನೆರವಾದರು. ಏಷ್ಯನ್ ಗೇಮ್ಸ್‌ನಲ್ಲಿ ಅವರು ಗಳಿಸಿದ ಸ್ಕೋರು 240.7.

2019ರಲ್ಲಿ ಮೂರು ವಿಶ್ವಕಪ್‌ಗಳಲ್ಲಿ ಸೌರಭ್ ಪಾಲ್ಗೊಂಡಿದ್ದರು. ನವದೆಹಲಿಯಲ್ಲಿ 245 ಸ್ಕೋರ್‌ ಗಳಿಸಿದರೆ ಮ್ಯೂನಿಕ್‌ನಲ್ಲಿ 246.3 ಸ್ಕೋರ್ ಮಾಡಿದರು. ರಿಯೊ ಡಿ ಜನೈರೊದಲ್ಲಿ ಗಳಿಸಿದ ಸ್ಕೋರು 221.9. ಮಿಶ್ರ ವಿಭಾಗದ ಅರ್ಹತಾ ಸುತ್ತಿನಲ್ಲಿ 767 ಮತ್ತು ಫೈನಲ್‌ನಲ್ಲಿ 478.9 ಅವರು ಗಳಿಸಿರುವ ಗರಿಷ್ಠ ಸ್ಕೋರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು