ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಟಿಎ ಮನವಿ ತಿರಸ್ಕರಿಸಿದ ಐಟಿಎಫ್‌

ಡೇವಿಸ್‌ ಕಪ್ ಪಂದ್ಯ ಆಡಲು ಪಾಕಿಸ್ತಾನಕ್ಕೆ ಹೋಗಬೇಕಾಗಿದೆ ಭಾರತ
Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಇಸ್ಲಾಮಾಬಾದ್‌ನಲ್ಲಿ ಡೇವಿಸ್‌ ಕಪ್‌ ವಿಶ್ವಗುಂಪಿನ ಪಂದ್ಯವಾಡಲು ಭಾರತ ತಂಡಕ್ಕೆ ಭದ್ರತೆಯ ಸಮಸ್ಯೆ ಎದುರಾಗಬಹುದು ಎಂಬ ಅಖಿಲ ಭಾರತ ಟೆನಿಸ್‌ ಸಂಸ್ಥೆಯ ಮನವಿಯನ್ನು ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಟ್ರಿಬ್ಯೂನಲ್ ತಿರಸ್ಕರಿಸಿದೆ. ಹೀಗಾಗಿ 60 ವರ್ಷಗಳಲ್ಲಿ ಮೊದಲ ಬಾರಿ ಭಾರತ ಟೆನಿಸ್‌ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡಲೇಬೇಕಾಗಿದೆ.

ಭಾರತ ತಂಡ ಒಂದು ವೇಳೆ ಪಾಕಿಸ್ತಾನಕ್ಕೆ ಆಡಲು ಹೋಗದಿದ್ದರೆ, ಪಂದ್ಯದಲ್ಲಿ ಆತಿಥೇಯ (ಪಾಕಿಸ್ತಾನ) ತಂಡವನ್ನು ವಿಜಯಿ ಎಂದು ತೀರ್ಮಾನಿಸಲಾಗುತ್ತದೆ. ಈ ತೀರ್ಮಾನವಾದಲ್ಲಿ ಭಾರತ ವಿಶ್ವಗುಂಪು ಎರಡಕ್ಕೆ ಸರಿಯಲಿದೆ. ಗೆಲ್ಲುವ ತಂಡ ವಿಶ್ವ ಗುಂಪು ಒಂದರಲ್ಲಿ ಮುಂದುವರಿಯಲಿದೆ.

ಭಾರತ ಡೇವಿಸ್‌ ಕಪ್ ತಂಡ 1964 ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿತ್ತು. ಆಗ ಭಾರತ 4–0 ಅಂತರದಿಂದ ಜಯಗಳಿಸಿತ್ತು.

ತಮ್ಮ ಮನವಿಯನ್ನು ಐಟಿಎಫ್‌ ತಿರಸ್ಕರಿಸಿರುವುದನ್ನು ಎಐಟಿಎ ಮಹಾ ಪ್ರಧಾನ ಕಾರ್ಯದರ್ಶಿ ಅನಿಲ್‌ ಧುಪರ್ ಪಿಟಿಐಗೆ ಖಚಿತಪಡಿಸಿದ್ದಾರೆ.

‘ಐಟಿಎಫ್‌ ಟ್ರಿಬ್ಯೂನಲ್‌ನ ಸಂದೇಶ ತಲುಪಿದೆ. ನಾವು ಸೋಮವಾರ ಕ್ರೀಡಾ ಸಚಿವಾಲಯವನ್ನು ಸಂಪರ್ಕಿಸಲಿದ್ದು, ತಂಡವನ್ನು ಕಳುಹಿಸಬೇಕೇ ಎಂಬ ಬಗ್ಗೆ ಮಾರ್ಗದರ್ಶನ ಪಡೆಯುತ್ತೇವೆ’ ಎಂದು ಧುಪರ್ ಪಿಟಿಐಗೆ ತಿಳಿಸಿದರು. ಎಐಟಿಎ, ಫೆಬ್ರುವರಿ 3 ಮತ್ತು 4ರಂದು ನಡೆಯುವ ಈ ಪಂದ್ಯಕ್ಕೆ ಇತ್ತೀಚೆಗಷ್ಟೇ ಐವರು ಆಟಗಾರರ ತಂಡವನ್ನು ಪ್ರಕಟಿಸಿದ್ದು, ಐಟಿಎಫ್‌ ತಮ್ಮ ಮನವಿ ತಿರಸ್ಕರಿಸಿದರೆ ತಂಡವನ್ನು ಕಳುಹಿಸುವುದಾಗಿ ತಿಳಿಸಿತ್ತು.

ತಟಸ್ಥ ಸ್ಥಳದಲ್ಲಿ ಪಂದ್ಯವನ್ನು  ನಡೆಸುವಂತೆ ಎಐಟಿಎ ವಿನಂತಿಯನ್ನು 15 ಸದಸ್ಯರ ಡೇವಿಸ್ ಕಪ್ ಸಮಿತಿ ತಳ್ಳಿಹಾಖಿತ್ತು. ಹೀಗಾಗಿ ಎಐಟಿಎ, ದಾರಿಕಾಣದೇ ಐಟಿಎಫ್‌ ಟ್ರಿಬ್ಯೂನಲ್‌ಅನ್ನು ಸಂಪರ್ಕಿಸಿತ್ತು.

‘ಪಾಕಿಸ್ತಾನ ಕೆಲವು ಮಹತ್ವದ ಡೇವಿಸ್ ಕಪ್ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಭಾರತ ವಿರುದ್ಧವೂ ಯೋಗ್ಯ ರೀತಿಯಲ್ಲಿ ಆ ದೇಶವು ಪಂದ್ಯ ಆಯೋಜಿಸಲಾಗದು ಎಂಬುದಕ್ಕೆ ಯಾವುದೇ ಸ್ಪಷ್ಟ ಆಧಾರವಿಲ್ಲ’ ಎಂದು ಸಮಿತಿ ಹೇಳಿದೆ. ಶಾಂತಿ– ಸುವ್ಯವಸ್ಥೆ ಕಾಪಾಡುವುದು ಆತಿಥೇಯ ದೇಶದ ಜವಾಬ್ದಾರಿ. ಪ್ರಯಾಣ ಮತ್ತು ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಭಾರತ ತಂಡಕ್ಕೆ ಭರವಸೆ ನೀಡಬೇಕು’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಪ್ರಕಟಿಸಲಾದ ತಂಡದಿಂದ ಸುಮಿತ್ ನಗಾಲ್ ಮತ್ತು ಶಶಿಕುಮಾರ್ ಮುಕುಂದ್ ಹಿಂದೆ ಸರಿದಿದ್ದಾರೆ. ರಾಮಕುಮಾರ್ ರಾಮನಾಥನ್, ಎನ್‌.ಶ್ರೀರಾಮ್ ಬಾಲಾಜಿ, ಯೂಕಿ ಭಾಂಬ್ರಿ, ನಿಕಿ ಪೂಣಚ್ಚ ಮತ್ತು ಸಾಕೇತ್‌ ಮೈನೇನಿ ತಂಡದಲ್ಲಿದ್ದಾರೆ. ಲಖನೌದಲ್ಲಿ ಮೊರೊಕೊ ವಿರುದ್ಧ ಡೇವಿಸ್‌ ಕಪ್‌ಗೆ ಪದಾರ್ಪಣೆ ಮಾಡಿದ್ದ ದಿಗ್ವಿಜಯ ಪ್ರತಾಪ್ ಸಿಂಗ್ ಅವರು ಮೀಸಲು ಆಟಗಾರನಾಗಿದ್ದಾರೆ.

2019ರಲ್ಲಿ ಭಾರತ, ಪಾಕಿಸ್ತಾನದಲ್ಲಿ ಆಡಬೇಕಾಗಿತ್ತು. ಆದರೆ ಐಟಿಎಫ್‌ ಆ ಸಲ ಭಾರತದ ಮನವಿ ಪುರಸ್ಕರಿಸಿ ಪಂದ್ಯವನ್ನು ಕಜಕಸ್ತಾನಕ್ಕೆ ಸ್ಥಳಾಂತರಿಸಿತ್ತು. ಭಾರತ 4–0ಯಿಂದ ಗೆದ್ದಿತ್ತು. ಆದರೆ ಸ್ಥಳಾಂತರ ವಿರೋಧಿಸಿ ಪಾಕ್ ತಂಡದ ಪ್ರಮುಖ ಆಟಗಾರರು ಪಂದ್ಯದಿಂದ ಹಿಂದೆಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT