ಸೋಮವಾರ, ಜೂನ್ 21, 2021
30 °C
ಪ್ರಶಸ್ತಿ ಸುತ್ತಿನಲ್ಲಿ ಎಡವಿದ ಥೀಮ್‌

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಮೆಲ್ಬರ್ನ್‌ ‘ಕಿಂಗ್‌’ ಜೊಕೊವಿಚ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ಮೆಲ್ಬರ್ನ್‌ ಪಾರ್ಕ್‌ನಲ್ಲಿ ತಾನೇ ‘ಕಿಂಗ್‌’ ಎಂಬುದನ್ನು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತೊಮ್ಮೆ ಸಾಬೀತುಪಡಿಸಿದರು.

ಭಾನುವಾರ ಮುಕ್ತಾಯವಾದ ಆಸ್ಟ್ರೇಲಿಯಾ ಓಪನ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡ ಅವರು, ಈ ಟೂರ್ನಿಯಲ್ಲಿ ಒಟ್ಟು ಎಂಟು ಪ್ರಶಸ್ತಿಗಳನ್ನು ಗೆದ್ದ ಏಕೈಕ ಆಟಗಾರ ಎಂಬ ದಾಖಲೆಗೆ ಭಾಜನರಾದರು.

ರಾಡ್‌ ಲೇವರ್‌ ಅರೇನಾದಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ‘ಮ್ಯಾರಥಾನ್‌’ ಫೈನಲ್‌ನಲ್ಲಿ ನೊವಾಕ್‌ 6–4, 4–6, 2–6, 6–3, 6–4ರಲ್ಲಿ ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ಅವರನ್ನು ಪರಾಭವಗೊಳಿಸಿದರು. 

3 ಗಂಟೆ 59 ನಿಮಿಷಗಳ ಕಾಲ ನಡೆದ ಫೈನಲ್‌ ಪೈಪೋಟಿ ಹಲವು ನಾಟಕೀಯ ತಿರುವುಗಳೊಂದಿಗೆ ಸಾಗಿತು.

ಮೊದಲ ಸೆಟ್‌ನಲ್ಲಿ ಸೋತಿದ್ದ ಐದನೇ ಶ್ರೇಯಾಂಕದ ಆಟಗಾರ ಥೀಮ್‌, ನಂತರದ ಎರಡು ಸೆಟ್‌ಗಳಲ್ಲಿ ಗೆದ್ದು 2–1 ಮುನ್ನಡೆ ಗಳಿಸಿದ್ದರು. ಹೀಗಾಗಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಜೊಕೊವಿಚ್‌ಗೆ ಆಘಾತ ಎದುರಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಂತರ ಜೊಕೊವಿಚ್‌ ಮೋಡಿ ಮಾಡಿದರು. ಫೀನಿಕ್ಸ್‌ನಂತೆ ಎದ್ದು ಬಂದ ಅವರು ಪಂದ್ಯ ಗೆದ್ದು ಮಿರುಗುವ ಟ್ರೋಫಿಗೆ ಮುತ್ತಿಕ್ಕಿದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ ನೊವಾಕ್‌ ಗೆದ್ದ 17ನೇ ಪ್ರಶಸ್ತಿ ಇದಾಗಿದೆ. ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಎಂಟು ಮತ್ತು ಅದಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಜಯಿಸಿದ ವಿಶ್ವದ ಮೂರನೇ ಆಟಗಾರ ಎಂಬ ಹಿರಿಮೆಗೂ ಜೊಕೊವಿಚ್‌ ಪಾತ್ರರಾದರು. ಸ್ಪೇನ್‌ನ ರಫೆಲ್‌ ನಡಾಲ್‌ (ಫ್ರೆಂಚ್‌ ಓಪನ್‌ನಲ್ಲಿ 12) ಮತ್ತು ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ (ವಿಂಬಲ್ಡನ್‌ನಲ್ಲಿ 8) ಮೊದಲು ಈ ಸಾಧನೆ ಮಾಡಿದ್ದರು.

26ರ ಹರೆಯದ ಥೀಮ್‌, ಮೊದಲ ಮೂರು ಸೆಟ್‌ಗಳಲ್ಲಿ ಬಲಿಷ್ಠ ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳ ಮೂಲಕ 32 ವರ್ಷ ವಯಸ್ಸಿನ ಜೊಕೊವಿಚ್‌ ಅವರನ್ನು ಕಂಗೆಡಿಸಿದರು.

ಆರಂಭದ ಎರಡು ಗಂಟೆಯ ಆಟದಲ್ಲಿ ಎರಡು ಬಾರಿ ‘ಮೆಡಿಕಲ್‌ ಟೈಮ್‌ ಔಟ್‌’ ತೆಗೆದುಕೊಂಡ ಜೊಕೊವಿಚ್‌ ನಂತರ ಲಯಕ್ಕೆ ಮರಳಿದಂತೆ ಕಂಡರು. ನಾಲ್ಕನೇ ಸೆಟ್‌ನಲ್ಲಿ ಅವರ ರ‍್ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ಶರವೇಗದ ಸರ್ವ್‌ಗಳು ಇದನ್ನು ಸಾರಿಹೇಳುವಂತಿದ್ದವು.‌ ವಾಲಿ ಪಾಯಿಂಟ್ಸ್‌ಗಳನ್ನೂ ಕಲೆಹಾಕಿದ ಸರ್ಬಿಯಾದ ಆಟಗಾರ, ದೀರ್ಘ ರ‍್ಯಾಲಿಗಳನ್ನು ಆಡಿ ಎದುರಾಳಿಯ ಮೇಲೆ ಒತ್ತಡ ಹೇರಿದರು.

ಐದನೇ ಸೆಟ್‌ನಲ್ಲೂ ಇದೇ ತಂತ್ರವನ್ನು ಅನುಸರಿಸಿದ ಜೊಕೊವಿಚ್‌, ಥೀಮ್‌ ಅವರ ಪ್ರಶಸ್ತಿಯ ಕನಸಿಗೆ ತಣ್ಣೀರು ಸುರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು