ಸ್ಟಾಕ್‌ಹೋಮ್: ಭಾರತ ತಂಡ, ಡೇವಿಸ್ ಕಪ್ ವಿಶ್ವ ಗುಂಪು ಒಂದರ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಮೊದಲ ದಿನವಾದ ಶನಿವಾರ 0–2 ಹಿನ್ನಡೆ ಅನುಭವಿಸಿತು. ಮೊದಲ ಸಿಂಗಲ್ಸ್ ಪಂದ್ಯ ಆಡಿದ ಶ್ರೀರಾಮ್ ಬಾಲಾಜಿ ಮತ್ತು ಎರಡನೇ ಸಿಂಗಲ್ಸ್ ಆಡಿದ ರಾಮಕುಮಾರ್ ರಾಮನಾಥನ್ ಇಬ್ಬರೂ ಎದುರಾಳಿಗಳಿಗೆ ನೇರ ಸೆಟ್‌ಗಳಲ್ಲಿ ಮಣಿದರು.
ರಾಯಲ್ ಟೆನಿಸ್ ಹಾಲ್‌ನಲ್ಲಿ ನಡೆದ ಪಂದ್ಯದ ಸಿಂಗಲ್ಸ್‌ನಲ್ಲಿ ಎಲಿಯಾಸ್ ಯೀಮರ್ 6–4 6–2 ರಿಂದ ಡಬಲ್ಸ್ ಪರಿಣತ ಶ್ರೀರಾಮ್ ಸೋಲಿಸಲು ಅಷ್ಟೇನೂ ಕಷ್ಟಪಡಲಿಲ್ಲ.
ಟೆನಿಸ್ ದಿಗ್ಗಜ ಬ್ಯೋನ್ ಬೋರ್ಗ್ ಅವರ ಮಗ, 21 ವರ್ಷ ವಯಸ್ಸಿನ ಲಿಯೊ ಬೋರ್ಗ್ ಎರಡನೇ ಪಂದ್ಯದಲ್ಲಿ ರಾಮಕುಮಾರ್ ಅವರನ್ನು 6–3, 6–4 ರಿಂದ ಹಿಮ್ಮೆಟ್ಟಿಸಲು ಕೇವಲ 58 ನಿಮಿಷ ತೆಗೆದುಕೊಂಡರು.