ಶುಕ್ರವಾರ, ಸೆಪ್ಟೆಂಬರ್ 25, 2020
21 °C

ಅಮೆರಿಕ ಓಪನ್‌ ಟೆನಿಸ್‌ ಟೂರ್ನಿ: ಹಿಂದೆ ಸರಿದ ಹಾಲಿ ಚಾಂಪಿಯನ್‌ ನಡಾಲ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಮ್ಯಾಡ್ರಿಡ್‌ : ಹಾಲಿ ಚಾಂಪಿಯನ್‌, ವಿಶ್ವದ ಎರಡನೇ ಕ್ರಮಾಂಕದ ಆಟಗಾರ ರಫೆಲ್‌ ನಡಾಲ್‌ ಅವರು ಈ ಬಾರಿಯ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆಡುವುದಿಲ್ಲ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಮಂಗಳವಾರ ಸರಣಿ ಟ್ವೀಟ್‌ ಮೂಲಕ ವಿಷಯ ಪ್ರಕಟಿಸಿದ್ದಾರೆ.

ಇದರೊಂದಿಗೆ ರೋಜರ್‌ ಫೆಡರರ್‌ ಅವರ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ದಾಖಲೆಯನ್ನು (20 ಪ್ರಶಸ್ತಿ) ಸರಿಗಟ್ಟುವ ಅವಕಾಶಕ್ಕೆ ತಾತ್ಕಾಲಿಕ ತಡೆ ನೀಡಿದ್ದಾರೆ.

‘ವಿಶ್ವದಾದ್ಯಂತ ಕೋವಿಡ್‌ ಸೃಷ್ಟಿಸಿರುವ ಬಿಕ್ಕಟ್ಟು ಗಂಭೀರ ಸ್ವರೂಪದ್ದು. ಸೋಂಕು ಪ್ರಕರಣಗಳು ಏರುತ್ತಲೇ ಇವೆ. ನಾವಿನ್ನೂ ಇದರ ಮೇಲೆ ನಿಯಂತ್ರಣ ಸಾಧಿಸಿಲ್ಲ ಎಂಬುದು ಗೊತ್ತಾಗುತ್ತಿದೆ‘ ಎಂದು ಸ್ಪೇನ್‌ನ ನಡಾಲ್‌ ಹೇಳಿದ್ದಾರೆ.

ಅಮೆರಿಕ ಓಪನ್‌ ಟೂರ್ನಿಯು ಆಗಸ್ಟ್‌ 31ರಿಂದ ನ್ಯೂಯಾರ್ಕ್‌ನಲ್ಲಿ ಆರಂಭವಾಗಬೇಕಿದೆ. 

‘ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರದಿಂದ ನನಗೇನೂ ಖುಷಿಯಿಲ್ಲ. ಆದರೂ ನ್ಯೂಯಾರ್ಕ್‌ಗೆ ತೆರಳುತ್ತಿಲ್ಲ‘ ಎಂದು 34 ವರ್ಷದ ಆಟಗಾರ ಟ್ವೀಟ್‌ ಮಾಡಿದ್ದಾರೆ.

‘ರಫಾ (ನಡಾಲ್‌) ಅವರು ಟೆನಿಸ್‌ನ ಅತ್ಯಂತ ಖ್ಯಾತ ಆಟಗಾರ. ಅವರ ನಿರ್ಧಾರಕ್ಕೆ ನಮ್ಮ ಸಹಮತವಿದೆ‘ ಎಂದು ಅಮೆರಿಕ ಓಪನ್‌ ಟೂರ್ನಿಯ ನಿರ್ದೇಶಕಿ ಸ್ಟ್ಯಾಸಿ ಅಲಾಸ್ಟರ್‌ ಹೇಳಿದ್ದಾರೆ.

ವಿಶ್ವ ಮಹಿಳಾ ಟೆನಿಸ್‌ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಷ್‌ ಬಾರ್ಟಿ, ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೋಸ್‌ ಅವರು ಅಮೆರಿಕ ಓಪನ್‌ ಟೂರ್ನಿಯಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಬಲ ಮೊಣಕಾಲಿನ ಸರ್ಜರಿಗೆ ಒಳಗಾಗಿರುವ ರೋಜರ್‌ ಫೆಡರರ್‌ ಕೂಡ ಆಡುತ್ತಿಲ್ಲ. ಟೂರ್ನಿಯ ಪ್ರವೇಶ ಪಟ್ಟಿಯ ಪ್ರಕಾರ 2019ರ ಮಹಿಳಾ ಚಾಂಪಿಯನ್‌ ಬಿಯಾಂಕಾ ಆ್ಯಂಡ್ರಿಸ್ಕ್ಯೂ ಅವರು ಕಣಕ್ಕಿಳಿಯುತ್ತಿದ್ದಾರೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ವೃತ್ತಿಪರ ಟೆನಿಸ್‌ ಟೂರ್ನಿಗಳು ಮಾರ್ಚ್‌ನಿಂದ ಸ್ಥಗಿತಗೊಂಡಿದ್ದವು. ಇಟಲಿಯಲ್ಲಿ ಪಾಲೆರ್ಮೊ ಟೂರ್ನಿಯ ಮೂಲಕ ಮಹಿಳಾ ಟೂರ್ನಿಗಳು ಪುನರಾರಂಭಗೊಂಡಿವೆ. ಈ ತಿಂಗಳ ಅಂತ್ಯದಲ್ಲಿ ಪುರುಷರ ಟೂರ್ನಿಗಳು ಆರಂಭವಾಗುವ ಸಾಧ್ಯತೆಯಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು