ಮಂಗಳವಾರ, ಅಕ್ಟೋಬರ್ 20, 2020
21 °C

ದಾಖಲೆಯ ಸನಿಹ ನೊವಾಕ್ ಜೊಕೊವಿಚ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

‍ಪ್ಯಾರಿಸ್: ಇನ್ನು ಎರಡೇ ಗೆಲುವು ಸಾಧಿಸಿದರೆ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಹೊಸ ದಾಖಲೆಯೊಂದರ ಒಡೆಯ ಆಗಲಿದ್ದಾರೆ. ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಕರೆನೊ ಬೂಸ್ಟಾ ಅವರನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿರುವ ಅವರು ಪ್ರಶಸ್ತಿ ಗೆದ್ದರೆ 50 ವರ್ಷಗಳಲ್ಲಿ, ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಅಪರೂಪದ ಸಾಧನೆ ಮಾಡಿದಂತಾಗುತ್ತದೆ.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಜೊಕೊವಿಚ್ ಅವರು ಸ್ಪೇನ್‌ನ ಪ್ಯಾಬ್ಲೊ ಕರೆನೊ ಬೂಸ್ಟಾ ಎದುರು 4–6, 6–2, 6–3, 6–4ರಲ್ಲಿ ಗೆಲುವು ಸಾಧಿಸಿದ್ದರು. ವಿಶ್ವದ ಒಂದನೇ ಕ್ರಮಾಂಕದ ಆಟಗಾರನಾದ ಜೊಕೊವಿಚ್ ಈ ವರೆಗೆ 17 ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಎಂಟು ಬಾರಿ ಆಸ್ಟ್ರೇಲಿಯಾ ಓಪನ್, ಐದು ಬಾರಿ ವಿಂಬಲ್ಡನ್‌, ಮೂರು ಬಾರಿ ಅಮೆರಿಕ ಓಪನ್ ಪ್ರಶಸ್ತಿ ಗಳಿಸಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ಒಂದು ಬಾರಿ ಮಾತ್ರ ಅವರು ಚಾಂಪಿಯನ್ ಆಗಿದ್ದಾರೆ. 2016ರಲ್ಲಿ ಅವರು ಈ ಪ್ರಶಸ್ತಿಯನ್ನು ಗಳಿಸಿದ್ದರು.

‌ಪ್ಯಾರಿಸ್‌ನಲ್ಲಿ ಜೊಕೊವಿಚ್‌ಗೆ ಸ್ಪೇನ್‌ನ ರಫೆಲ್ ನಡಾಲ್ ಪ್ರಮುಖ ಎದುರಾಳಿಯಾಗಿದ್ದಾರೆ. ಅವರು ಈ ವರೆಗೆ ಇಲ್ಲಿ 12 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿಯ ತನಕ ಒಟ್ಟು 98 ಪಂದ್ಯಗಳನ್ನು ಗೆದ್ದಿರುವ ಅವರು ಎರಡು ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದ್ದಾರೆ. ನಡಾಲ್ ಮತ್ತು ಜೊಕೊವಿಚ್ ಇಬ್ಬರೂ 2005ರಿಂದ ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಈ ಬಾರಿಯೂ ನಡಾಲ್ ಕಣದಲ್ಲಿದ್ದರು ಸೆಮಿಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಅವರು ಇಟಲಿಯ ಜಾನಿಕ್ ಸಿನ್ನರ್ ಅವರನ್ನು 7–6(7/4), 6–4, 6–1ರಲ್ಲಿ ಮಣಿಸಿದ್ದರು. ಗಾಯದ ಸಮಸ್ಯೆಯಿಂದ ಮತ್ತು ಮಾನಸಿಕ ತೊಳಲಾಟದಿಂದ ಬಳಲುತ್ತಿರುವ ಜೊಕೊವಿಚ್ ಸೆಮಿಫೈನಲ್‌ನಲ್ಲಿ ಶುಕ್ರವಾರ ಗ್ರೀಸ್‌ನ ಸ್ಟೆಫನೊಸ್ ಸಿಸಿಪಸ್ ಅವರನ್ನು ಎದುರಿಸುವರು. ನಡಾಲ್, ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮನ್‌ ಎದುರು ಸೆಣಸುವರು.

ಫ್ರೆಂಚ್ ಓಪನ್‌ ಟೂರ್ನಿಯ ಅಂತಿಮ ಹಂತದಲ್ಲಿ ಎಡಹುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾದರೆ ಜೊಕೊವಿಚ್ ಅವರಿಗೆ ದಾಖಲೆ ಒಲಿಯಲಿದೆ.

’ಬುಧವಾರದ ಪಂದ್ಯದಲ್ಲಿ ಜೊಕೊವಿಚ್‌ಗೆ ಮಾನಸಿಕವಾಗಿ ಯಾವ ಒತ್ತಡವೂ ಇರಲಿಲ್ಲ. ಕತ್ತು ಮತ್ತು ಭುಜದ ನೋವು ಕಾಡಿದ್ದರಿಂದ ಅವರು ಗಾಬರಿಯಾಗಿದ್ದರು’ ಎಂದು ಅವರ ಮಾಜಿ ಕೋಚ್ ಬೋರಿಸ್ ಬೇಕರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು