ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್: ಜೊಕೊವಿಚ್ ಫೈನಲ್‌ಗೆ ಲಗ್ಗೆ

ಮಹಿಳೆಯರ ವಿಭಾಗದ ಪ್ರಶಸ್ತಿಗೆ ಜಬೇರ್‌– ರಿಬಾಕಿನ ಸೆಣಸು ಇಂದು
Last Updated 9 ಜುಲೈ 2022, 5:57 IST
ಅಕ್ಷರ ಗಾತ್ರ

ಲಂಡನ್‌ (ರಾಯಿಟರ್ಸ್‌/ ಎಎಫ್‌ಪಿ): ಅಗ್ರಶ್ರೇಯಾಂಕದ ಆಟಗಾರ ಸರ್ಬಿಯದ ನೊವಾಕ್‌ ಜೊಕೊವಿಚ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್ ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು.

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅವರು 2-6, 6-3, 6-2, 6-4 ರಲ್ಲಿ ಆತಿಥೇಯ ದೇಶದ ಭರವಸೆಯಾಗಿದ್ದ ಕೆಮರಾನ್ ನೋರಿ ವಿರುದ್ಧ ಗೆದ್ದರು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ ಅವರನ್ನು ಎದುರಿಸುವರು. ಸೆಮಿಫೈನಲ್‌ನಲ್ಲಿ ಕಿರ್ಗಿಯೊಸ್‌ ವಾಕ್‌ಓವರ್‌ ಪಡೆದರು. ಸ್ಪೇನ್‌ನ ರಫೆಲ್‌ ನಡಾಲ್‌ ಗಾಯದ ಕಾರಣ ಆಡದಿರಲು ನಿರ್ಧರಿಸಿದ್ದರು.

ನೋರಿ ಎದುರು ಮೊದಲ ಸೆಟ್‌ ಸೋತರೂ, ಬಳಿಕ ಲಯ ಕಂಡುಕೊಂಡ ಜೊಕೊವಿಚ್ ಶಿಸ್ತಿನ ಆಟವಾಡಿ ಇಲ್ಲಿ ಎಂಟನೇ ಬಾರಿ ಫೈನಲ್‌ ಪ್ರವೇಶಿಸಿದರು. ಆರು ಬಾರಿ ವಿಂಬಲ್ಡನ್‌ ಟೂರ್ನಿ ಗೆದ್ದಿರುವ ಅವರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಒಟ್ಟಾರೆಯಾಗಿ 32 ಸಲ ಫೈನಲ್‌ ಪ್ರವೇಶಿಸಿದ್ದಾರೆ.

ಜಬೇರ್‌– ರಿಬಾಕಿನ ಸೆಣಸು ಇಂದು: ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿರುವ ಆನ್ಸ್‌ ಜಬೇರ್‌ ಮತ್ತು ಎಲೆನಾ ರಿಬಾಕಿನ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟಕ್ಕಾಗಿ ಶನಿವಾರ ಪೈಪೋಟಿ ನಡೆಸುವರು.

ಟ್ಯುನಿಷಿಯದ ಜಬೇರ್‌, ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ ಆಫ್ರಿಕಾದ ಮತ್ತು ಅರಬ್‌ ದೇಶದ ಮೊದಲ ಮಹಿಳೆ ಎಂಬ ಗೌರವ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಗ್ರ್ಯಾನ್‌ಸ್ಲಾಮ್‌ ಟ್ರೋಫಿ ಜಯಿಸಿದ ಆಫ್ರಿಕಾದ ಮೊದಲ ಮಹಿಳೆ ಎನಿಸಿಕೊಳ್ಳುವ ಕನಸು ಅವರದ್ದು.

ರಿಬಾಕಿನ ಅವರು ಗ್ರ್ಯಾನ್‌ಸ್ಲಾಮ್‌ ಫೈನಲ್‌ ಪ್ರವೇಶಿಸಿದ ಕಜಕಸ್ತಾನದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ರಷ್ಯಾದಲ್ಲಿ ಹುಟ್ಟಿ ಬೆಳೆದ ರಿಬಾಕಿನ 2018ರ ವರೆಗೂ ಆ ದೇಶವನ್ನು ಪ್ರತಿನಿಧಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಕಜಕಸ್ತಾನ ಪರ ಆಡುತ್ತಿದ್ದಾರೆ.

ಉಕ್ರೇನ್‌ ಮೇಲಿನ ಯುದ್ಧದ ಕಾರಣ ಈ ಬಾರಿ ರಷ್ಯಾದ ಸ್ಪರ್ಧಿಗಳಿಗೆ ವಿಂಬಲ್ಡನ್‌ನಲ್ಲಿ ಪಾಳ್ಗೊಳ್ಳಲು ಅವಕಾಶ ನೀಡಿಲ್ಲ. ಆದರೆ ರಷ್ಯಾ ಮೂಲದ ರಿಬಾಕಿನ ಫೈನಲ್‌ ಪ್ರವೇಶಿಸಿರುವುದು ಟೂರ್ನಿಯ ಸಂಘಟಕರನ್ನು ‘ಇಕ್ಕಟ್ಟಿ’ಗೆ ಸಿಲುಕಿಸಿದೆ.

‘ಎಲೆನಾ ಅವರು ವಿಂಬಲ್ಡನ್‌ ಫೈನಲ್‌ ಪ್ರವೇಶಿಸಿರುವುದು ಹೆಮ್ಮೆಯ ಸಂಗತಿ. ಆಕೆ ನಮ್ಮಲ್ಲಿ ಆಡಿ ಬೆಳೆದವಳು’ ಎಂದು ರಷ್ಯನ್‌ ಟೆನಿಸ್‌ ಫೆಡರೇಷನ್‌ನ ಅಧ್ಯಕ್ಷ ಶಾಮಿಲ್‌ ತಪಿಸ್ಚೇವ್‌ ಹೇಳಿದ್ದಾರೆ.

ಮಹಿಳೆಯರ ಫೈನಲ್‌: ಸಂಜೆ 6.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

**

ನೀಲ್‌– ಕ್ರಾಚಿಕ್‌ಗೆ ಮಿಶ್ರ ಡಬಲ್ಸ್‌ ಪ್ರಶಸ್ತಿ

ಬ್ರಿಟನ್‌ನ ನೀಲ್‌ ಸ್ಕಪ್‌ಸ್ಕಿ ಮತ್ತು ಅಮೆರಿಕದ ಡೆಸಿರೆ ಕ್ರಾಚಿಕ್ ಅವರು ಸತತ ಎರಡನೇ ಬಾರಿ ಮಿಶ್ರ ಡಬಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದರು.

ಗುರುವಾರ ನಡೆದ ಫೈನಲ್‌ನಲ್ಲಿ ಅವರು 6–4, 6–3 ರಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಮತ್ತು ಸಮಂತಾ ಸ್ಟಾಸರ್‌ ಜೋಡಿಯನ್ನು ಮಣಿಸಿದರು.

ಇಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ನೀಲ್‌–ಕ್ರಾಚಿಕ್‌ ಮೊದಲ ಸೆಟ್‌ಅನ್ನು ಪ್ರಯಾಸದಿಂದ ಗೆದ್ದರು. ಎರಡನೇ ಸೆಟ್‌ನಲ್ಲಿ ಶಿಸ್ತಿನ ಆಟವಾಡಿ ಸತತ ನಾಲ್ಕು ಗೇಮ್‌ಗಳನ್ನು ಗೆದ್ದು ಕಿರೀಟ ಮುಡಿಗೇರಿಸಿಕೊಂಡರು. ಕ್ರಾಚಿಕ್‌ ಅವರ ಬಿರುಸಿನ ಸರ್ವ್ ಮತ್ತು ಸ್ಕಪ್‌ಸ್ಕಿ ಅವರು ನೆಟ್‌ ಬಳಿ ತೋರಿದ ಚಾಣಾಕ್ಷ ಆಟಕ್ಕೆ ಎದುರಾಳಿಗಳ ಬಳಿ ಉತ್ತರ ಇರಲಿಲ್ಲ.

28 ವರ್ಷದ ಕ್ರಾಚಿಕ್‌ ಅವರಿಗೆ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ದೊರೆತ ನಾಲ್ಕನೇ ಪ್ರಶಸ್ತಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT