ಮಂಗಳವಾರ, ಸೆಪ್ಟೆಂಬರ್ 28, 2021
22 °C
ಅಮೆರಿಕ ಓಪನ್ ಟೆನಿಸ್ ಟೂರ್ನಿ: ನಾಲ್ಕರ ಘಟ್ಟಕ್ಕೆ ಎಮಾ ರಡುಕಾನು, ಮರಿಯಾ ಸಕ್ರಿ

21ನೇ ಗ್ರ್ಯಾನ್ ಪ್ರಶಸ್ತಿಗೆ ಜೊಕೊವಿಚ್‌ಗೆ ಇನ್ನು ಎರಡೇ ಹೆಜ್ಜೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಇನ್ನು ಎರಡನೇ ಹೆಜ್ಜೆ...ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಇನ್ನು ಎರಡು ಪಂದ್ಯಗಳನ್ನು ಗೆದ್ದರೆ ಮಹತ್ವದ ಮೈಲುಗಲ್ಲು ದಾಟಲಿದ್ದಾರೆ. ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿರುವ ಅವರು ಒಂದು ಋತುವಿನ ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಚಾಂಪಿಯನ್ ಆದ ಸಾಧನೆ ಮಾಡಲಿದ್ದಾರೆ.

ಬುಧವಾರ ರಾತ್ರಿ ನಡೆದ ಜಿದ್ದಾಜಿದ್ದಿಯ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜೊಕೊವಿಚ್‌ ಇಟಲಿಯ ಮಟಿಯೊ ಬೆರೆಟಿನಿ ವಿರುದ್ಧ 5-7, 6-2, 6-2, 6-3ರಲ್ಲಿ ಜಯ ಗಳಿಸಿದರು. ಇದು ಜೊಕೊವಿಚ್ ಅವರ ಸತತ 26ನೇ ಜಯವಾಗಿದೆ.  ಗ್ರ್ಯಾನ್‌ಸ್ಲಾಂ ಇತಿಹಾಸದ ಪುರುಷರ ವಿಭಾಗದಲ್ಲಿ 52 ವರ್ಷಗಳ ಹಿಂದೆ, 1969ರಲ್ಲಿ ರೋಡ್‌ ಲೇವರ್ ಒಂದು ಋತುವಿನ ಎಲ್ಲ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.

ಶುಕ್ರವಾರದ ಸೆಮಿಫೈನಲ್‌ನಲ್ಲಿ ಜೊಕೊವಿಚ್ ಒಲಿಂಪಿಕ್ ಚಾಂಪಿಯನ್ ಅಲೆಕ್ಸಾಂಡರ ಜ್ವೆರೆವ್ ವಿರುದ್ಧ ಸೆಣಸುವರು. ಟೋಕಿಯೊದಲ್ಲಿ ಸೆಮಿಫೈನಲ್‌ನಲ್ಲಿ ಜ್ವೆರೆವ್ ಎದುರು ಜೊಕೊವಿಚ್ ಸೋತಿದ್ದರು. ಈ ಮೂಲಕ ’ಗೋಲ್ಡನ್‌ ಗ್ರ್ಯಾನ್‌ಸ್ಲಾಂ’ ಗೆಲ್ಲುವ ಅವಕಾಶ ಕೈಚೆಲ್ಲಿದ್ದರು.

34 ವರ್ಷದ ಜೊಕೊವಿಚ್ ಅಮೆರಿಕ ಓಪನ್‌ನಲ್ಲಿ ನಾಲ್ಕನೇ ಪ್ರಶಸ್ತಿಯ ಗೆಲ್ಲುವತ್ತ ಸಾಗಿದ್ದಾರೆ. ಇಲ್ಲಿ ಚಾಂಪಿಯನ್ ಆದರೆ ಅದು ಅವರ 21ನೇ ಗ್ರ್ಯಾನ್ ಪ್ರಶಸ್ತಿ ಆಗಲಿದ್ದು ಹೊಸ ದಾಖಲೆ ನಿರ್ಮಾಣವಾಗಲಿದೆ. ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸ್ಪೇನ್‌ನ ರಫೆಲ್ ನಡಾಲ್ ಜೊತೆ ಜೊಕೊವಿಚ್ ಈಗ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ಹ್ಯಾರಿಸ್‌ಗೆ ಸೋಲುಣಿಸಿದ ಜ್ವೆರೆವ್

ಜರ್ಮನಿಯ ನಾಲ್ಕನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ದಕ್ಷಿಣ ಆಫ್ರಿಕಾದ 46ನೇ ಶ್ರೇಯಾಂಕಿತ ಲಾಯ್ಡ್‌ ಹ್ಯಾರಿಸ್ ವಿರುದ್ಧ 7-6 (8/6), 6-3, 6-4ರಲ್ಲಿ ಗೆದ್ದು ನಾಲ್ಕರ ಘಟ್ಟ ಪ್ರವೇಶಿಸಿದರು. ಇದು ಅವರ ಸತತ 16ನೇ ಜಯವಾಗಿದೆ. ಇದರಲ್ಲಿ ಕಳೆದ ತಿಂಗಳು ನಡೆದ ಸಿನ್ಸಿನಾಟಿ ಟೂರ್ನಿಯ ಪ್ರಶಸ್ತಿಯೂ ಸೇರಿಕೊಂಡಿದೆ.

ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಬ್ರಿಟನ್‌ನ ಎಮಾ ರಡುಕಾನು 6-3, 6-4ರಲ್ಲಿ ಸ್ವಿಟ್ಜರ್ಲೆಂಡ್‌ನ ಬೆಲಿಂದಾ ಬೆನ್ಸಿಕ್‌ ವಿರುದ್ಧ ಜಯ ಗಳಿಸಿದರೆ ಗ್ರೀಸ್‌ನ ಮರಿಯಾ ಸಕ್ರಿ 6-4, 6-4ರಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವ ಎದುರು ಗೆದ್ದರು. ರಡುಕಾನು ಅವರು ಟೂರ್ನಿಯಲ್ಲಿ ಇದುವರೆಗೆ ಒಂದು ಸೆಟ್ ಕೂಡ ಸೋಲದೆ ಎಂಟರ ಘಟ್ಟ ಪ್ರವೇಶಿಸಿದ್ದಾರೆ.

ಈ ಪಂದ್ಯದಲ್ಲಿ ಒಟ್ಟಾರೆಯಾಗಿ ಅತ್ಯುತ್ತಮ ಆಟವಾಡಲು ಸಾಧ್ಯವಾಯಿತು. ಕೊನೆಯ ಮೂರು ಸೆಟ್‌ಗಳಂತೂ ಟೂರ್ನಿಯಲ್ಲಿ ನಾನು ಆಡಿದ ಅತ್ಯುತ್ತಮ ಸೆಟ್‌ಗಳು

- ನೊವಾಕ್ ಜೊಕೊವಿಚ್‌, ಸರ್ಬಿಯಾ ಆಟಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು