ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಎರಡನೇ ಸುತ್ತಿಗೆ ಗಾಫ್‌, ರೂಡ್‌

ಆನ್ಸ್‌ ಜಬೇರ್‌ ಮುನ್ನಡೆ
Published 30 ಮೇ 2023, 22:03 IST
Last Updated 30 ಮೇ 2023, 22:03 IST
ಅಕ್ಷರ ಗಾತ್ರ

ಪ್ಯಾರಿಸ್: ಕಳೆದ ಬಾರಿಯ ರನ್ನರ್‌ ಅಪ್‌ ಕೊಕೊ ಗಾಫ್‌ ಮತ್ತು ಕ್ಯಾಸ್ಪರ್‌ ರೂಡ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್‌ ವಿಭಾಗಗಳಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.

ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಗಾಫ್‌ 3–6, 6–1, 6–2 ರಲ್ಲಿ ಸ್ಪೇನ್‌ನ ರೆಬೆಕಾ ಮಸರೋವಾ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಸೋತ ಗಾಫ್‌, ಆ ಬಳಿಕ ಪುಟಿದೆದ್ದು ನಿಂತರು. ಮುಂದಿನ ಎರಡು ಸೆಟ್‌ಗಳಲ್ಲಿ ಎದುರಾಳಿಗೆ ಕೇವಲ ಮೂರು ಗೇಮ್‌ಗಳನ್ನು ಬಿಟ್ಟುಕೊಟ್ಟು ಪಂದ್ಯ ಗೆದ್ದರು.

ಕಳೆದ ವರ್ಷ ಫೈನಲ್‌ನಲ್ಲಿ ಇಗಾ ಶ್ವಾಂಟೆಕ್‌ ಎದುರು ಸೋತಿದ್ದ 19 ವರ್ಷದ ಗಾಫ್‌ ಅವರು 1 ಗಂಟೆ 46 ನಿಮಿಷಗಳ ಹಣಾಹಣಿಯಲ್ಲಿ ಗೆಲುವು ಒಲಿಸಿಕೊಂಡರು.

ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ನಾರ್ವೆಯ ರೂಡ್‌, ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿ 6-4, 6-3, 6-2 ರಲ್ಲಿ ಸ್ವೀಡನ್‌ನ ಎಲಿಯಾಸ್ ಎಮೆರ್‌ ವಿರುದ್ಧ ಗೆದ್ದರು. 2 ಗಂಟೆ ಏಳು ನಿಮಿಷ ನಡೆದ ಪೈಪೋಟಿಯಲ್ಲಿ ರೂಡ್‌ ವೇಗದ ಸರ್ವ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಮಿಂಚಿದರು.

ಇನ್ನೊಂದು ಪಂದ್ಯದಲ್ಲಿ ಅಲೆಕ್ಸಾಂಡರ್‌ ಜ್ವೆರೆವ್ 7–6, 7–6, 6–1 ರಲ್ಲಿ ದಕ್ಷಿಣ ಆಫ್ರಿಕಾದ ಲಾಯ್ಡ್‌ ಹ್ಯಾರಿಸ್‌ ಅವರನ್ನು ಮಣಿಸಿದರು. ಮೊದಲ ಎರಡು ಸೆಟ್‌ಗಳನ್ನು ಟೈಬ್ರೇಕರ್‌ನಲ್ಲಿ ಗೆದ್ದ ಜ್ವೆರೆವ್‌ಗೆ ಮೂರನೇ ಸೆಟ್‌ನಲ್ಲಿ ಪೈಪೋಟಿ ಎದುರಾಗಲಿಲ್ಲ. ಅಮೆರಿಕದ ಟಾಮಿ ಪಾಲ್‌ 6-3, 6-2, 6-4 ರಲ್ಲಿ ಸ್ವಿಟ್ಜರ್ಲೆಂಡ್‌ನ ಡಾಮಿನಿಕ್ ಸ್ಟ್ರೈಕರ್‌ ಅವರನ್ನು ಸೋಲಿಸಿದರು.

ಅಲ್ಕರಾಜ್‌ ಶುಭಾರಂಭ: ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌ ಅವರು ಪ್ರಶಸ್ತಿಯೆಡೆಗಿನ ಹಾದಿಯಲ್ಲಿ ಭರ್ಜರಿ ಆರಂಭ ಪಡೆದರು. ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 6–0, 6–2, 7–5 ರಿಂದ ಇಟಲಿಯ ಫ್ಲಾವಿಯೊ ಕೊಬೊಲಿ ವಿರುದ್ಧ ಗೆದ್ದರು.

ಮುಂದಿನ ಸುತ್ತಿನಲ್ಲಿ ಅವರು ಜಪಾನ್‌ನ ತರೊ ಡೇನಿಯಲ್‌ ವಿರುದ್ಧ ಪೈಪೋಟಿ ನಡೆಸುವರು. ತರೊ 6–0, 6–2, 6–4 ರಲ್ಲಿ ಆಸ್ಟ್ರೇಲಿಯಾದ ಕ್ರಿಸ್ಟೋಫರ್‌ ಒ‘ಕಾನೆಲ್‌ ಅವರನ್ನು ಮಣಿಸಿದರು.

ಜಬೇರ್‌ಗೆ ಜಯ: ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ಟ್ಯುನೀಷಿಯಾದ ಆನ್ಸ್‌ ಜಬೇರ್‌ 6–4, 6–1 ರಲ್ಲಿ ಇಟಲಿಯ ಲೂಸಿಯಾ ಬ್ರೊಂಜೆಟ್ಟಿ ವಿರುದ್ಧ ಜಯಿಸಿದರು.

ಕಳೆದ ವರ್ಷ ವಿಂಬಲ್ಡನ್‌ ಟೂರ್ನಿಯ ರನ್ನರ್ ಅಪ್‌ ಆಗಿದ್ದ ಜಬೇರ್‌, ಈ ಋತುವಿನ ಆರಂಭದಲ್ಲಿ ಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡಿದ್ದರು.

ಇತರ ಪಂದ್ಯಗಳಲ್ಲಿ ಸ್ವೀಡನ್‌ನ ರೆಬೆಕಾ ಪೀಟರ್‌ಸನ್ 6–2, 6–0 ರಲ್ಲಿ ಫ್ರಾನ್ಸ್‌ನ ಫಿಯೋನಾ ಫೆರೊ ವಿರುದ್ಧ; ಚೀನಾದ ವಾಂಗ್‌ ಕ್ಸಿನ್‌ಯು 6–4, 7–6 ರಲ್ಲಿ ಜೆಕ್‌ ರಿಪಬ್ಲಿಕ್‌ನ ಮೇರಿ ಬೊಜ್ಕೊವಾ ವಿರುದ್ಧ; ಫ್ರಾನ್ಸ್‌ನ ಡಯಾನ್ ಪೆರಿ 6–2, 6–3 ರಲ್ಲಿ ಉಕ್ರೇನ್‌ನ ಅನೆಲಿನಾ ಕಲಿನಿನಾ ವಿರುದ್ಧ; ಮಿರಾ ಆ್ಯಂಡ್ರೀವಾ 6–2, 6–1 ರಲ್ಲಿ ಅಮೆರಿಕದ ಆ್ಯಲಿಸನ್‌ ರಿಸ್ಕೆ ವಿರುದ್ಧವೂ ಗೆದ್ದರು.

ಪಾಯಿಂಟ್‌ ಗೆದ್ದ ಸಂಭ್ರಮದಲ್ಲಿ ಕೊಕೊ ಗಾಫ್‌ –ಎಎಫ್‌ಪಿ ಚಿತ್ರ
ಪಾಯಿಂಟ್‌ ಗೆದ್ದ ಸಂಭ್ರಮದಲ್ಲಿ ಕೊಕೊ ಗಾಫ್‌ –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT