ಬುಧವಾರ, ಜನವರಿ 19, 2022
17 °C
ಮಹಿಳೆಯರ ವಿಶ್ವ ಟೆನಿಸ್ ಟೂರ್ ಚಾಂಪಿಯನ್‌ಷಿಪ್‌: ಸೋಹಾ ಸಾದಿಕ್‌ ಗಮನಾರ್ಹ ಆಟ

ಮಹಿಳೆಯರ ವಿಶ್ವ ಟೆನಿಸ್ ಟೂರ್ ಚಾಂಪಿಯನ್‌ಷಿಪ್‌: ಜಗಮೀತ್‌ ಗೆಲುವಿನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಬಲ ಪೈಪೋಟಿಯಲ್ಲಿ ಎದುರಾಳಿಯನ್ನು ಮಣಿಸಿದ ಜಗಮೀತ್ ಕೌರ್‌ ಗ್ರೆವಾಲ್ ಅವರು ಮಹಿಳೆಯರ ಐಟಿಎಫ್‌ ಅಂತರರಾಷ್ಟ್ರೀಯ ಟೆನಿಸ್ ಟೂರ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಗೆಲುವು ದಾಖಲಿಸಿದರು.

ರಾಜ್ಯ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ದೆಹಲಿಯ 19 ವರ್ಷದ ಜಗಮೀತ್‌ 6-2, 2-6, 6-3ರಲ್ಲಿ ಐದನೇ ಶ್ರೇಯಾಂಕದ ಮಿಹಿಕಾ ಯಾದವ್ ವಿರುದ್ಧ ಗೆದ್ದರು.     

ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಜಗಮೀತ್ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇದರಿಂದ ಕಂಗೆಟ್ಟ ಎದುರಾಳಿ ಚೆಂಡನ್ನು ರಿಟರ್ನ್ ಮಾಡಲು ಪರದಾಡಿದರು.4–0ಯಿಂದ ಜಗಮೀತ್ ಮುನ್ನಡೆದಾಗ ಮಿಹಿಕಾ ತಿರುಗೇಟು ನೀಡಿ ಎರಡು ಪಾಯಿಂಟ್ ಕಲೆ ಹಾಕಿದರು. ಆದರೆ ನಂತರ ಸಂಪೂರ್ಣ ಕಳೆಗುಂದಿದರು.

ಎರಡನೇ ಸೆಟ್‌ನಲ್ಲಿ ಮಿಹಿಕಾ ಭರ್ಜರಿ ಆಟವಾಡಿ ಬಲಶಾಲಿ ಹೊಡೆತಗಳೊಂದಿಗೆ ಮಿಂಚಿದರು. ಹೀಗಾಗಿ ಸುಲಭವಾಗಿ ಸೆಟ್‌ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಜಗಮೀತ್ ಮತ್ತೆ ಲಯ ಕಂಡುಕೊಂಡರು. ಎದುರಾಳಿಯ ಸ್ವಯಂ ತಪ್ಪುಗಳ ಲಾಭ ಪಡೆದುಕೊಂಡ ಅವರು ಆರಂಭದಲ್ಲಿ 5–0ಯಿಂದ ಮುನ್ನಡೆ ಸಾಧಿಸಿದರು. ಮಿಹಿಕಾ ಪಟ್ಟು ಬಿಡದೆ ಆಡಿ ಪಾಯಿಂಟ್‌ಗಳನ್ನು ಕಲೆ ಹಾಕಿದರೂ ಪಂದ್ಯ ಜಗಮೀತ್ ಅವರ ಪಾಲಾಯಿತು.

ಸ್ಥಳೀಯ ಆಟಗಾರ್ತಿ ಸೋಹಾ ಸಾದಿಕ್ ಸೊಗಸಾದ ಆಟವಾಡಿ ಅಮೆರಿಕದ ಶ್ರೀಯಾ ಅಟುರಾ ಅವರನ್ನು ಮಣಿಸಿ ಮೊದಲ ದಿನವೇ ಗಮನ ಸೆಳೆದರು. 32ರ ಘಟ್ಟದ ಪಂದ್ಯದಲ್ಲಿ ಅವರು 6-2, 6-2ರ ಜಯ ಸಾಧಿಸಿದರು. ಅಕ್ಟೋಬರ್‌ನಲ್ಲಿ ಮಹಿಳಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಸೋಹಾ ಚುರುಕಿನ ಆಟದ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.   

ಏಳನೇ ಶ್ರೇಯಾಂಕದ ಕೊರಿಯಾ ಆಟಗಾರ್ತಿ ಸೊ ರಾ ಲೀ ಭಾರತದ ರಮ್ಯಾ ನಟರಾಜನ್ ವಿರುದ್ಧ 6-4, 6-2ರಲ್ಲಿ ಗೆಲುವು ಸಾಧಿಸಿದರೆ, ವೈದೇಹಿ ಚೌಧರಿ 6-2, 6-2ರಲ್ಲಿ ನಿಧಿ ಚಿಲುಮುಲ ಅವರನ್ನು ಮಣಿಸಿದರು.

ಡಬಲ್ಸ್‌ ಕ್ವಾರ್ಟರ್‌ ಫೈನಲ್ ಪಂದ್ಯಗಳಲ್ಲಿ ಶರ್ಮದಾ ಬಾಲು–ಶ್ರವ್ಯಾ ಶಿವಾನಿ ಜೋಡಿ ಸೊನಾಶೆ ಭಟ್ನಾಗರ್– ಬೇಲಾ ತಮಂಕರ್ ಅವರನ್ನು 3-6, 2-6ರಲ್ಲಿ ಮಣಿಸಿದರು. ಹುಮೇರಾ–ಶ್ರೀವಲ್ಲಿ ಜೋಡಿ ಆರತಿ ಮುನಿಯನ್–ಆಕಾಂಕ್ಷಾ ದಿಲೀಪ್‌ ಜೋಡಿ ವಿರುದ್ಧ 1-6, 2-6ರಲ್ಲಿ, ಸಾಯಿ ಸಂಹಿತಾ–ಸೋಹಾ ಸಾದಿಕ್‌ ಜೋಡಿ 4-6, 1-6ರಲ್ಲಿ ನಿಧಿ ಚಿಲುಮುಲ–ಸ್ನೇಹಲ್ ಮಾನೆ ಜೋಡಿ ವಿರುದ್ಧ ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು