ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓ‍ಪನ್‌: ಒಸಾಕ ಮುಡಿಗೆ ಚಾಂಪಿಯನ್ ಪಟ್ಟ

Last Updated 20 ಫೆಬ್ರುವರಿ 2021, 15:44 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಎದುರಾಳಿಯ ಬಲಶಾಲಿ ಹೊಡೆತಗಳಿಗೆ ಎದೆಗುಂದದೆ ನಿರಾಯಾಸದಿಂದ, ನಿರಾತಂಕವಾಗಿ ಆಡಿದ ಜಪಾನ್‌ನ 23ರ ಹರಯದ ಆಟಗಾರ್ತಿ ನವೊಮಿ ಒಸಾಕ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು. ರಾಡ್ ಲಾವೆರ್ ಅರೆನಾದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು ಅಮೆರಿಕದ ಜೆನಿಫರ್ ಬ್ರಾಡಿ ವಿರುದ್ಧ 6-4, 6-3ರಲ್ಲಿ ಗೆಲುವು ಸಾಧಿಸಿದರು.

ಸಾವಿರಾರು ಪ್ರೇಕ್ಷಕರ ನಡುವೆ ನಡೆದ ಹಣಾಹಣಿಯನ್ನು ಗೆಲ್ಲಲು ಮೂರನೇ ಶ್ರೇಯಾಂಕದ ಒಸಾಕ ಅವರಿಗೆ 77 ನಿಮಿಷಗಳು ಸಾಕಾದವು. ಈ ಮೂಲಕ ನಾಲ್ಕನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ತಮ್ಮದಾಗಿಸಿಕೊಂಡ ಅವರು ಆಡಿದ ಮೊದಲ ನಾಲ್ಕು ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲೂ ಗೆದ್ದ ಎರಡನೇ ಆಟಗಾರ್ತಿ ಎಂದೆನಿಸಿಕೊಂಡರು. ಈ ಸಾಧನೆ ಮಾಡಿದ ಒಟ್ಟಾರೆ ಮೂರನೇ ಟೆನಿಸ್ ಪಟು ಆಗಿದ್ದಾರೆ ಅವರು.

2018ರಲ್ಲಿ ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಗೆಲ್ಲುವ ಮೂಲಕ ಮೊದಲ ಗ್ರ್ಯಾನ್‌ಸ್ಲಾಂ ಕಿರೀಟಕ್ಕೆ ಮುತ್ತಿಟ್ಟ ಒಸಾಕ 2020ರಲ್ಲಿ ಮತ್ತೆ ಅಮೆರಿಕ ಓಪನ್ ಸಾಮ್ರಾಜ್ಞಿಯಾದರು. 2019ರಲ್ಲಿ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಕಿರೀಟವೂ ಅವರ ಮುಡಿಗೇರಿತ್ತು. ಮಹಿಳಾ ವಿಭಾಗದಲ್ಲಿ ಮೋನಿಕಾ ಸೆಲೆಸ್ ಮತ್ತು ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್ ಆಡಿದ ಮೊದಲ ನಾಲ್ಕು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು.

ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ವಿರುದ್ಧ ಗೆದ್ದಿದ್ದ ಒಸಾಕ ಫೈನಲ್‌ನಲ್ಲಿ ಯಾವುದೇ ಉದ್ವೇಗವಿಲ್ಲದೆ ಆಡಿದರು. ಆದರೆ ಭರ್ಜರಿ ಹೊಡೆತಗಳ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಿದ 22ನೇ ಶ್ರೇಯಾಂಕದ ಬ್ರಾಡಿ ಕೆಲವೊಮ್ಮೆ ವಿಶಿಷ್ಟ ಹಾವ–ಭಾವದ ಮೂಲಕ ಸಂತಸ ವ್ಯಕ್ತಪಡಿಸಿದರು‌.

ಮೊದಲ ಗೇಮ್ ಒಸಾಕ ಗೆದ್ದರೂ ನಂತರ ಬ್ರಾಡಿ ತಿರುಗೇಟು ನೀಡಿದರು. ಆದರೆ ಎರಡು ಡಬಲ್ ಫಾಲ್ಟ್‌ಗಳನ್ನು ಎಸಗಿದ ಅವರು ನಾಲ್ಕನೇ ಗೇಮ್‌ನಲ್ಲಿ ಸರ್ವ್ ಕಳೆದುಕೊಂಡರು. ಆದರೆ ಛಲ ಬಿಡದೆ ಆಡಿದ ಅವರು ಬ್ರೇಕ್ ಪಾಯಿಂಟ್ ಮೂಲಕ ಮತ್ತೆ ಆಧಿಪತ್ಯ ಸ್ಥಾಪಸಿ ಎದುರಾಳಿಗೆ ಆತಂಕ ಒಡ್ಡಿದರು. ಎದೆಗುಂದದ ಒಸಾಕ ಮೇಲೆ ಇದ್ಯಾವುದೂ ಪ್ರಭಾವ ಬೀರಲಿಲ್ಲ. ಮೊದಲ ಸೆಟ್ ಗೆಲ್ಲುವ ಮೂಲಕ ಮೆಲ್ಬರ್ನ್ ಪಾರ್ಕ್‌ನಲ್ಲಿ ಸತತ 20 ಸೆಟ್‌ ಗೆದ್ದ ಸಾಧನೆ ಮಾಡಿದರು.

ಎರಡನೇ ಸೆಟ್‌ನಲ್ಲಿ ಇನ್ನಷ್ಟು ಭರವಸೆಯಿಂದ ಕಣಕ್ಕೆ ಇಳಿದ ಒಸಾಕ ಏಸ್ ಸಿಡಿಸುವ ಮೂಲಕ 3–0 ಮುನ್ನಡೆ ಗಳಿಸಿದರು. ನಂತರ ಬ್ರಾಡಿ ಸ್ವಲ್ಪ ಪ್ರತಿರೋಧ ಒಡ್ಡಿದರೂ ಕೊನೆಯಲ್ಲಿ ಒಸಾಕಗೆ ಸುಲಭ ಜಯ ಒಲಿಯಿತು. ಫೈನಲ್‌ನಲ್ಲಿ ಸೋತರೂ ಬ್ರಾಡಿ ಅವರು ಡಬ್ಲ್ಗುಟಿಎ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 13ನೇ ಸ್ಥಾನಕ್ಕೇರಿದರು.

ನಾಲ್ಕರಲ್ಲಿ ನಾಲ್ಕು: ಒಸಾಕ ತುಳಿದ ಯಶಸ್ಸಿನ ಹಾದಿ

2018ರ ಅಮೆರಿಕ ಓಪನ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು 6-2, 6-4ರಲ್ಲಿ ಮಣಿಸಿ ಒಸಾಕ ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿದ್ದರು. ಆ ಪಂದ್ಯ ಅಹಿತಕರ ಘಟನೆಗೂ ಸಾಕ್ಷಿಯಾಗಿತ್ತು. ದುರ್ವರ್ತನೆಗೆ ದಂಡ ವಿಧಿಸಿದ ಚೇರ್ ಅಂಪೈರ್‌ ಕಾರ್ಲೋಸ್ ರಾಮೋಸ್ ಅವರನ್ನು ಸೆರೆನಾ ‘ಮೋಸಗಾರ’ ಎಂದು ಜರಿದಿದ್ದರು. ಒಸಾಕ ಅಮೆರಿಕ ಓಪನ್ ಟೂರ್ನಿಯ ಚಾಂಪಿಯನ್ ಆದ ಅತಿ ಕಿರಿಯ ಆಟಗಾರ್ತಿ ಎಂದೆನಿಸಿಕೊಂಡಿದ್ದರು. 2006ರಲ್ಲಿ ಪ್ರಶಸ್ತಿ ಗೆದ್ದ ಮರಿಯಾ ಶರಪೋವಾ ಅವರ ಹೆಸರಿನಲ್ಲಿ ‌ಅಲ್ಲಿಯ ವರೆಗೆ ಈ ದಾಖಲೆ ಇತ್ತು.

2019ರಲ್ಲಿ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು 7-6 (7/2), 5-7, 6-4ರಲ್ಲಿ ಮಣಿಸಿ ಒಸಾಕ ಎರಡನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಮೂಲಕ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನಕ್ಕೇರಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ಟೆನಿಸ್ ಪಟು ಎನಿಸಿದ್ದರು. ಎರಡು ತಾಸುಗಳ ಹಣಾಹಣಿಯಲ್ಲಿ ಎದುರಾಳಿಯ ಪ್ರಬಲ ಪೈಪೋಟಿ ಮೀರಿ ನಿಂತ ಒಸಾಕ ಸತತ ಎರಡು ಗ್ರ್ಯಾನ್‌ಸ್ಲಾಂ ಗೆದ್ದ ಅತಿ ಕಿರಿಯ ಆಟಗಾರ್ತಿ ಎಂದೆನಿಸಿಕೊಂಡಿದ್ದರು. ಮಾರ್ಟಿನಾ ಹಿಂಗಿಸ್ (1998ರಲ್ಲಿ) ಮತ್ತು ಕರೊಲಿನಾ ವೋಜ್ನಿಯಾಕಿ (2010ರಲ್ಲಿ) ಅವರನ್ನು ಒಸಾಕ ಹಿಂದಿಕ್ಕಿದ್ದರು.

2020ರ ಅಮೆರಿಕ ಓಪನ್‌ ಟೂರ್ನಿಯಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸಿ ಮೂರನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಒಸಾಕ ತಮ್ಮದಾಗಿಸಿಕೊಂಡಿದ್ದರು. ಮೊದಲ ಸೆಟ್‌ನಲ್ಲಿ 1-6ರ ಸೋಲುಂಡಿದ್ದ ಅವರು ಎರಡನೇ ಸೆಟ್‌ನಲ್ಲಿ 0-2ರ ಹಿನ್ನಡೆ ಅನುಭವಿಸಿದ್ದರು. ಆದರೆ ನಂತರ ಪುಟಿದೆದ್ದು 1-6, 6-3, 6-3ರಲ್ಲಿ ಫೈನಲ್ ಪಂದ್ಯ ಗೆದ್ದ ಅವರು ವರ್ಣಭೇದ ನೀತಿಯ ವಿರುದ್ಧ ಮಾಸ್ಕ್ ಧರಿಸಿ ಗಮನ ಸೆಳೆದಿದ್ದರು. ಬ್ಲ್ಯಾಕ್ ಲಿವ್ಸ್ ಮ್ಯಾಟರ್ ಅಭಿಯಾನದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT