ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇಸನ್‌ ಡೇವಿಡ್‌ಗೆ ವಿಂಬಲ್ಡನ್‌ ಗೆಲ್ಲುವಾಸೆ

Last Updated 1 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಸ್ಪೇನ್ ತಾರೆ ರಫೆಲ್‌ ನಡಾಲ್ ಅವರನ್ನು ಆದರ್ಶವಾಗಿಟ್ಟುಕೊಂಡು ಟೆನಿಸ್‌ ಕ್ರೀಡೆಯಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಹುಡುಗ ಬೆಂಗಳೂರಿನ ಜೇಸನ್‌ ಮೈಕೆಲ್‌ ಡೇವಿಡ್‌.

ಬೆಂಗಳೂರಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಕೆಎಸ್ಎಲ್‌ಟಿಎ–ಎಐಟಿಎ ಜೂನಿಯರ್ ಸರ್ಕೀಟ್ ಟ್ಯಾಲೆಂಟ್ ಸೀರಿಸ್ 14 ವರ್ಷದೊಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದವರು.

ಬಾಲ್ಯದಲ್ಲಿ ಅಪ್ಪನೊಂದಿಗೆ ಟಿವಿಯಲ್ಲಿ ನಡಾಲ್ ಆಟ ಕಣ್ತುಂಬಿಕೊಳ್ಳುತ್ತ ಬೆಳೆದ ಡೇವಿಡ್‌, ನಾಲ್ಕನೇ ವಯಸ್ಸಿನಿಂದಲೇ ರ‍್ಯಾಕೆಟ್‌ ಕೈಗೆತ್ತಿಕೊಂಡವರು. ಇದೇ ಸಂದರ್ಭದಲ್ಲಿ ತಾಯಿ ಮರ್ಸಿ ಸಂಗೀತಾ ಡೇವಿಡ್‌ ಅವರು ಅನಾರೋಗ್ಯದಿಂದ ಸಾವನ್ನಪ್ಪಿದರು. ಎಳೆ ವಯಸ್ಸಿನ ಮೇಲೆ ಈ ಘಟನೆ ಪರಿಣಾಮ ಬೀರಿದರೂ ಬಾಲಕ ಎದೆಗುಂದಲಿಲ್ಲ. ಟೆನಿಸ್‌ನಲ್ಲೇ ಸಾಧನೆ ಮಾಡಬೇಕೆಂಬ ಮಗನ ಆಸೆಗೆ ಅಪ್ಪ ಲಾರೆನ್ಸ್ ಪ್ರಸನ್ನ ಡೇವಿಡ್‌ ನೀರೆರೆದರು.

14 ವರ್ಷದೊಳಗಿನವರ ವಿಭಾಗದ ರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ಜೇಸನ್‌ ಡೇವಿಡ್‌, ಸದ್ಯ ಹಲವು ಟ್ರೋಫಿಗಳ ಒಡೆಯ. ಕೋಚ್‌ ಸೂರಜ್‌ ಬಿಕ್ಕನವರ ಮಾರ್ಗದರ್ಶನದಲ್ಲಿ ಪಳಗುತ್ತಿದ್ದಾರೆ. 2013–2016ರ ಅವಧಿಯಲ್ಲಿ ಅಖಿಲ ಭಾರತ 10 ವರ್ಷ
ದೊಳಗಿನವರ ಟೂರ್ನಿಗಳಲ್ಲಿ ಸ್ಪರ್ಧಿಸಿ ಆರು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಏಳು ಬಾರಿ ರನ್ನರ್‌ಅಪ್‌ ಸ್ಥಾನ ಒಲಿದಿದೆ.

ಅಖಿಲ ಭಾರತ ಮಟ್ಟದ 12 ವರ್ಷದೊಳಗಿನವರ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ತಲಾ ನಾಲ್ಕು ಬಾರಿ ಚಾಂಪಿಯನ್‌ ಆಗಿದ್ದಾರೆ. 2015ರಿಂದ 14 ವರ್ಷದೊಳಗಿನವರ ವಿಭಾಗದಲ್ಲಿ ಕಣಕ್ಕಿಳಿಯುತ್ತಿರುವ ಜೇಸನ್‌, ಸಿಂಗಲ್ಸ್‌ನಲ್ಲಿ ನಾಲ್ಕು ಹಾಗೂ ಡಬಲ್ಸ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 16 ವರ್ಷದೊಳಗಿನವರ ವಿಭಾಗದಲ್ಲೂ ಒಂದು ಬಾರಿ ಚಾಂಪಿಯನ್ ಆಗಿದ್ದಾರೆ.

ರಾಷ್ಟ್ರಮಟ್ಟದಲ್ಲಿ 40ಕ್ಕಿಂತ ಹೆಚ್ಚು ಟ್ರೋಫಿಗಳು 13 ವರ್ಷದ ಜೇಸನ್‌ ಮುಡಿಗೇರಿವೆ.

ಏಐಟಿಎ ಟ್ಯಾಲೆಂಟ್‌ ಸಿರೀಸ್‌ನಲ್ಲಿ ಗೆದ್ದ ಪ್ರಶಸ್ತಿಯೊಂದಿಗೆ ಜೇಸನ್‌ ಮೈಕೆಲ್‌ ಡೇವಿಡ್‌

‘ರೋಡ್‌ ಟು ವಿಂಬಲ್ಡನ್‌’ ಕೂಟಕ್ಕೆ ಜೇಸನ್‌ ಆಯ್ಕೆಯಾಗಿದ್ದರು. ಭಾರತದ 16 ಆಟಗಾರರು ಸ್ಪರ್ಧಿಸುವ ಈ ಟೂರ್ನಿಯಲ್ಲಿ ಅಗ್ರ ಎರಡು ಸ್ಥಾನ ಗಳಿಸಿದವರು ಲಂಡನ್‌ನಲ್ಲಿ ನಡೆಯುವ ವಿಂಬಲ್ಡನ್‌ಜೂನಿಯರ್‌ ಮಾಸ್ಟರ್ಸ್‌ ಟೂರ್ನಿಗೆ ಅರ್ಹತೆ ಗಳಿಸುತ್ತಾರೆ. ಕೋಲ್ಕತ್ತದಲ್ಲಿ ಮಾರ್ಚ್‌ನಲ್ಲಿ ನಿಗದಿಯಾಗಿದ್ದ ಈ ಟೂರ್ನಿಯು ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ರದ್ದಾಗಿದ್ದು, ಜೇಸನ್‌ ಕನಸಿಗೆ ಅಲ್ಪ ಹಿನ್ನಡೆಯಾಗಿದೆ.

‘ರಫೆಲ್‌ ನಡಾಲ್‌ ನನ್ನ ಮೆಚ್ಚಿನ ಆಟಗಾರ. ಓದಿಗಿಂತ ಟೆನಿಸ್‌ಗೇ ನಾನು ಹೆಚ್ಚು ಗಮನ ಕೊಡುತ್ತೇನೆ. ವಿಂಬಲ್ಡನ್‌ನಲ್ಲಿ ಪದಕ ಗೆಲ್ಲುವುದು ನನ್ನ ಗುರಿ. ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಮಹದಾಸೆಯೂ ಇದೆ’ ಎಂಬುದು ಜೇಸನ್‌ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT