ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ನಲ್ಲಿ ಸೋಲು, ಜೊಕೊವಿಚ್‌ಗೆ ತಪ್ಪಿದ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್

Last Updated 13 ಸೆಪ್ಟೆಂಬರ್ 2021, 3:27 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಪ್ರತಿಷ್ಠಿತ ಅಮೆರಿಕ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶ ಕೈತಪ್ಪಿದೆ.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ವಿರುದ್ಧ 4-6, 4-6, 4-6ರ ಅಂತರದ ಗೆಲುವು ದಾಖಲಿಸಿದ ರಷ್ಯಾದ ಡ್ಯಾನಿಲ್ ಮಡ್ವೆಡೆವ್ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟಕ್ಕೆ ಮುತ್ತಿಟ್ಟರು.

ಇದರೊಂದಿಗೆ ಜೊಕೊವಿಚ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅವಕಾಶದಿಂದಲೂ ವಂಚಿತರಾಗಿದ್ದಾರೆ. ಈ ಮೂಲಕ ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಮಡ್ವೆಡೆವ್ ಸೇಡು ತೀರಿಸಿಕೊಂಡರು.

ವಿಶ್ವ ನಂ.2 ರ‍್ಯಾಂಕ್‌ನ ಮಡ್ವೆಡೆವ್ ಇದು ಮೂರನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದ್ದರು. ಈ ಹಿಂದೆ 2019ರಲ್ಲಿ ಅಮೆರಿಕ ಓಪನ್‌ ಫೈನಲ್‌ನಲ್ಲಿ ಸ್ಪೇನ್‌ನ ರಫೆಲ್ ನಡಾಲ್ ವಿರುದ್ಧ ಮುಗ್ಗರಿಸಿದ್ದರು.

ಅತ್ತ 34 ವರ್ಷದ ಜೊಕೊವಿಚ್ ಇತಿಹಾಸದಲ್ಲೇ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್ ಸಾಧನೆ ಮಾಡಿದ ಮೂರನೇ ಕ್ರೀಡಾಪಟು ಎನಿಸಿಕೊಳ್ಳುವ ಸುವರ್ಣಾವಕಾಶದಿಂದ ವಂಚಿತರಾದರು. ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಗೆದ್ದಿರುವ ಜೊಕೊವಿಚ್‌ಗೆ ಅಮೆರಿಕ ಓಪನ್ ಫೈನಲ್‌ನಲ್ಲಿ ಅಚ್ಚರಿಯ ಸೋಲು ಎದುರಾಗಿದೆ.

ಹಾಗೊಂದು ವೇಳೆ ಗೆಲುವು ದಾಖಲಿಸಿದ್ದರೆ ಡಾನ್ ಬಡ್ಜ್ (1938) ಹಾಗೂ ರಾಡ್ ಲೇವರ್ (1962 ಹಾಗೂ 1969) ಬಳಿಕ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿಕೊಳ್ಳುತ್ತಿದ್ದರು.

ಈ ಸೋಲಿನ ಮಹತ್ವವನ್ನು ಅರಿತುಕೊಂಡಿರುವ ಜೊಕೊವಿಚ್, ಇದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದಿದ್ದಾರೆ. ಆದರೂ ಕಠಿಣ ಟೂರ್ನಿಯಲ್ಲಿ ಮಾನಸಿಕವಾಗಿಯೂ ದೈಹಿಕವಾಗಿಯೂ ತಮ್ಮಿಂದಾಗುವ ಎಲ್ಲ ಪ್ರಯತ್ನವನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT