ಶುಕ್ರವಾರ, ಆಗಸ್ಟ್ 12, 2022
27 °C
ಎರಡನೇ ಸುತ್ತಿನಲ್ಲಿ ಡಾಮಿನಿಕ್ ಥೀಮ್‌ಗೆ ಮಣಿದ ಭಾರತದ ಆಟಗಾರ

ಅಮೆರಿಕ ಓಪನ್‌ ಟೆನಿಸ್‌: ನಗಾಲ್‌ ಸವಾಲು ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಮೊದಲ ಸುತ್ತಿನಲ್ಲಿ ಗೆದ್ದು ಭರವಸೆ ಮೂಡಿಸಿದ್ದ ಭಾರತದ ಸುಮಿತ್‌ ನಗಾಲ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಿಂದ ಗುರುವಾರ ರಾತ್ರಿ ಹೊರಬಿದ್ದರು. ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರು 3–6, 3–6, 2–6ರಿಂದ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಡಾಮಿನಿಕ್‌ ಥೀಮ್‌ ಎದುರು ಸೋತರು.

ಎರಡನೇ ಶ್ರೇಯಾಂಕ ಪಡೆದಿದ್ದ ಅಸ್ಟ್ರಿಯಾ ಆಟಗಾರ ಥೀಮ್‌ ಅವರು ನಗಾಲ್‌ ಎದುರು ಗೆಲ್ಲುವ ಮೂಲಕ ತಮ್ಮ 27ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

‘2020ರ ಅಮೆರಿಕ ಓಪನ್‌ಗೆ ಧನ್ಯವಾದ. ಟೂರ್ನಿಯಿಂದ ಸಾಕಷ್ಟು ಕಲಿತುಕೊಂಡೆ. ಪರಿಶ್ರಮದ ಆಟ ಮುಂದುವರಿಸುತ್ತೇನೆ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು‘ ಎಂದು ಪಂದ್ಯದ ಬಳಿಕ ನಗಾಲ್‌ ಟ್ವೀಟ್‌ ಮಾಡಿದ್ದಾರೆ.

‘ನಗಾಲ್‌ ಅವರು ಈ ಹಿಂದೆ ಆಡಿದ ಪಂದ್ಯಗಳನ್ನು ವೀಕ್ಷಿಸಿ ಅದರ ಪ್ರಕಾರ ಸಿದ್ಧತೆ ನಡೆಸಿದ್ದೆ. ಫೋರ್‌ಹ್ಯಾಂಡ್‌ ಹೊಡೆತಗಳು ಅವರ ಶಕ್ತಿ. ಆದ್ದರಿಂದ ಅಂತಹ ಆಟವಾಡಲು ಅವರಿಗೆ ಹೆಚ್ಚು ಅವಕಾಶ ಕೊಡಲಿಲ್ಲ‘ ಎಂದು ಈ ಬಾರಿಯ ಆಸ್ಟ್ರೇಲಿಯಾ ಓಪನ್‌ ಫೈನಲಿಸ್ಟ್‌ ಆಗಿದ್ದ ಥೀಮ್‌ ನುಡಿದರು.

ನಗಾಲ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲ್ಲುವ ಮೂಲಕ ಏಳು ವರ್ಷಗಳ ಬಳಿಕ ಗ್ರ್ಯಾನ್‌ಸ್ಲಾಮ್‌ ಪಂದ್ಯವೊಂದರಲ್ಲಿ ಗೆದ್ದ ಭಾರತದ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ ಇದು ಅವರಿಗೆ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಮೊದಲ ಜಯವಾಗಿತ್ತು. 

ಬ್ಲಾಕ್‌ ಮಾಡುವಲ್ಲಿ ತೋರಿದ ನಿಧಾನಗತಿಯಿಂದ ನಗಾಲ್‌ ಅವರ ಆಟಕ್ಕೆ ಹಿನ್ನಡೆಯಾಯಿತು. ಕೆಲವು ಹಂತದಲ್ಲಿ ಥೀಮ್‌ ಮೇಲೆ ಒತ್ತಡ ಹೇರುವಲ್ಲಿ ಅವರು ಯಶಸ್ವಿಯಾದರೂ ಪಂದ್ಯದ ಗೆಲುವಿಗೆ ಇದು ಸಾಕಾಗಲಿಲ್ಲ.

ಮೊದಲ ಸುತ್ತಿನಲ್ಲಿ ನಗಾಲ್‌ ಅವರು ಅಮೆರಿಕದ ಬ್ರಾಡ್ಲಿ ಅವರನ್ನು ಮಣಿಸಿದ್ದರು.

ನಾಲ್ಕನೇ ಸುತ್ತಿಗೆ ಜೊಕೊವಿಚ್‌; ಸೆರೆನಾಗೆ ಜಯ: ಅಗ್ರ ಶ್ರೇಯಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ಗೆಲುವಿನ ಅಭಿಯಾನ ಮುಂದುವರಿಸಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಅವರು 6–3, 6–1ರಿಂದ ಅಮೆರಿಕದ ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ ಎದುರು ಗೆದ್ದರು.

ಮಹಿಳಾ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ 6–2, 6–4ರಿಂದ ಮಾರ್ಗರಿಟಾ ಗ್ಯಾಸ್ಪರಿನ್‌ ಅವರನ್ನು ಮಣಿಸಿದರು. 

ಪುರುಷರ ವಿಭಾಗದ ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಡೇನಿಯಲ್‌ ಮೆಡ್ವೆಡೆವ್‌ 6–3, 6–2, 6–4ರಿಂದ ಕ್ರಿಸ್ಟೋಫರ್‌ ಒ‘ ಕೊನೆಲ್‌ ಎದುರು, ಮ್ಯಾಟಿಯೊ ಬೆರೆಟ್ಟಿನಿ 6–4, 6–4, 7–6ರಿಂದ ಯುಗೊ ಹಂಬರ್ಟ್‌ ಮೇಲೆ, ವಾಸೆಕ್‌ ಪಾಸ್ಪಿಸಿಲ್ ಅವರು 6–7, 6–3, 7–6, 6–3ರಿಂದ ಮಿಲೊಸ್‌ ರಾನಿಕ್‌ ವಿರುದ್ಧ, ಮರಿನ್‌ ಸಿಲಿಕ್‌ 6–3, 1–6, 7–6, 7–5ರಿಂದ ನೊರ್ಬೊರ್ಟ್‌ ಗೊಂಬೊಸ್‌ ಎದುರು ಜಯ ಸಾಧಿಸಿದರು.

ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನ ಹಣಾಹಣಿಗಳಲ್ಲಿ ಸೋಫಿಯಾ ಕೆನಿನ್‌ 6–4, 6–4ರಿಂದ ಲೇಲಾ ಫರ್ನಾಂಡೆಜ್‌ ಎದುರು, ಸೊರಾನಾ ಕ್ರಿಸ್ಟಿಯಾ 2–6, 7–6, 6–4ರಿಂದ ಜೊಹಾನ್ನಾ ಕೊಂಟಾ ಎದುರು ಗೆದ್ದು ಮುನ್ನಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು