ಸೋಮವಾರ, ಮಾರ್ಚ್ 20, 2023
24 °C

ನಡಾಲ್ ದಾಖಲೆ ಸರಿಗಟ್ಟಿದ ಜೊಕೊವಿಚ್‌ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌: ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಚಾಂಪಿಯನ್ ಆಗಿದ್ದಾರೆ. 

ಈ ಮೂಲಕ ಸ್ಪೇನ್‌ನ ರಫೆಲ್ ನಡಾಲ್ ಅವರ ದಾಖಲೆಯ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಸಾಧನೆಯನ್ನು ಸರಿಗಟ್ಟಿದ್ದಾರೆ.

ಅಷ್ಟೇ ಅಲ್ಲದೆ ದಾಖಲೆಯ 10ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿ ಗೆದ್ದ ಕೀರ್ತಿಗೆ ಪಾತ್ರರಾಗಿದ್ದಾರೆ. 

ಇದನ್ನೂ ಓದಿ: 

ಭಾನುವಾರ ರಾಡ್‌ ಲೇವರ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಮುಖಾಮುಖಿಯಲ್ಲಿ ಜೊಕೊವಿಚ್ ಅವರು ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಸ್‌ ವಿರುದ್ಧ 6-3, 7-6 (7-4), 7-6 (7-5)ರ ಅಂತರದಲ್ಲಿ ಗೆಲುವು ದಾಖಲಿಸಿದರು. 

ಪಂದ್ಯದುದ್ಧಕ್ಕೂ ಎದುರಾಳಿ ವಿರುದ್ಧ ಸವಾರಿ ಮಾಡಿದ 35 ವರ್ಷದ ಜೊಕೊವಿಚ್ ನೂತನ ಇತಿಹಾಸ ಸೃಷ್ಟಿಸಿದರು. 

ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ಜೊಕೊವಿಚ್‌ ಅವರು ಕಳೆದ ಆವೃತ್ತಿಯ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಈ ಗೆಲುವಿನೊಂದಿಗೆ ಜೊಕೊವಿಚ್ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.  

24 ವರ್ಷದ ಸಿಟ್ಸಿಪಸ್‌, 2021ರ ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದರು. ಆಗ ಪ್ರಶಸ್ತಿ ಸುತ್ತಿನಲ್ಲಿ ಜೊಕೊವಿಚ್‌ ಎದುರೇ ಸೋತಿದ್ದರು.‌  

ಗೆಲುವಿನ ಬಳಿಕ ತನ್ನ ತಾಯಿಯನ್ನು ಆಲಂಗಿಸಲು ಪ್ಲೇಯರ್ಸ್ ಬಾಕ್ಸ್‌ ಹತ್ತಿದ ಜೊಕೊವಿಚ್‌ ಅವರಿಗೆ ಉಕ್ಕಿ ಬಂದ ಕಣ್ಣೀರು ನಿಯಂತ್ರಿಸಲಾಗಲಿಲ್ಲ. ಆನಂದದಿಂದ ನೆಲಕ್ಕುರುಳಿದರು.

ಕೊರೊನಾ ಲಸಿಕೆ ತೆಗೆದುಕೊಳ್ಳದ ಕಾರಣ 35 ವರ್ಷದ ಜೊಕೊವಿಚ್‌, ಕಳೆದ ಆವೃತ್ತಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಈ ಟೂರ್ನಿಯಲ್ಲಿ ಮಂಡಿರಜ್ಜು ನೋವು ಮೀರಿ ಗೆಲುವು ಒಲಿಸಿಕೊಂಡರು.

ಸರ್ಬಿಯಾ ಆಟಗಾರನಿಗೆ ಇದು ವೃತ್ತಿಜೀವನದ 93ನೇ ಪ್ರಶಸ್ತಿಯಾಗಿದೆ.

‘ಪರಿಸ್ಥಿತಿಗಳನ್ನು ಪರಿಗಣಿಸಿದರೆ ನನಗೆ ಅತಿ ಹೆಚ್ಚು ಸವಾಲು ಎನಿಸಿದ ಟೂರ್ನಿಗಳಲ್ಲಿ ಇದೂ ಒಂದು. ಕಳೆದ ವರ್ಷ ಆಡಿರಲಿಲ್ಲ. ಈ ವರ್ಷ ನನ್ನನ್ನು ಮೆಲ್ಬರ್ನ್‌ನಲ್ಲಿ ಸ್ವಾಗತಿಸಿದ ಎಲ್ಲರಿಗೂ ಕೃತಜ್ಞತೆಗಳು. ಬಹುಶಃ ನನ್ನ ಜೀವನದ ದೊಡ್ಡ ವಿಜಯ ಇದು‘ ಎಂದು ಜೊಕೊವಿಚ್‌ ನುಡಿದರು.

ಈ ಸೋಲಿನೊಂದಿಗೆ, 24 ವರ್ಷದ ಸಿಟ್ಸಿಪಸ್‌ ಅವರ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯದ ಆಸೆ ಈಡೇರಲಿಲ್ಲ. ರ‍್ಯಾಂಕಿಂಗ್‌ನಲ್ಲಿ ಅವರು ಮೂರನೇ ಸ್ಥಾನಕ್ಕೇರಲಿದ್ದಾರೆ.

ಉತ್ತಮ ಪೈಪೋಟಿ: ಇಲ್ಲಿ 33ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಆಡಿದ ಸರ್ಬಿಯಾ ಆಟಗಾರನಿಗೆ ಸಿಟ್ಸಿಪಾಸ್‌ ಉತ್ತಮ ಪೈಪೋಟಿಯನ್ನೇ ನೀಡಿದರು. ತಮ್ಮ ಎರಡನೇ ಗ್ರ್ಯಾನ್‌ಸ್ಲಾಮ್ ಫೈನಲ್‌ನಲ್ಲಿ ಕಣಕ್ಕಿಳಿದಿದ್ದ ಗ್ರೀಸ್‌ ಆಟಗಾರ ಅಲ್ಪ ಒತ್ತಡದಲ್ಲಿದ್ದಂತೆ ಕಂಡರು. ಮೊದಲ ಸೆಟ್‌ನಲ್ಲಿ, ಸಿಟ್ಸಿಪಸ್‌ ಅವರ ಮೊದಲ ಸರ್ವ್‌ನಲ್ಲಿ ಜೊಕೊವಿಚ್‌ ಎರಡು ಬ್ರೇಕ್ ಪಾಯಿಂಟ್ಸ್ ಗಳಿಸಿದರು. ಗ್ರೀಸ್‌ ಆಟಗಾರನ ಡಬಲ್‌ ಫಾಲ್ಟ್‌ಗಳ ಲಾಭ ಪಡೆದ ಜೊಕೊವಿಚ್‌ ಕೇವಲ 36 ನಿಮಿಷಗಳಲ್ಲಿ ಸೆಟ್‌ ವಶಪಡಿಸಿಕೊಂಡರು.

ಆದರೆ ಎರಡನೇ ಸೆಟ್‌ನಲ್ಲಿ ಸಿಟ್ಸಿಪಸ್‌, ಸರ್ವ್‌ಗಳಲ್ಲಿ ಸುಧಾರಣೆ ಕಂಡುಕೊಂಡರು. ಮೊದಲ ಬ್ರೇಕ್ ಪಾಯಿಂಟ್ ಹಾಗೂ ಸೆಟ್ ಪಾಯಿಂಟ್‌ ಕೂಡ ಗಳಿಸಿದರು. ಆದರೆ ಟೈಬ್ರೇಕ್‌ವರೆಗೆ ಸಾಗಿದ ಸೆಟ್‌ನಲ್ಲಿ ತಮ್ಮ ಅನುಭವವನ್ನು ಸಾಣೆ ಹಿಡಿದ ಜೊಕೊವಿಚ್‌ ಗೆಲುವಿನ ನಗೆ ಬೀರಿದರು. ಒತ್ತಡದ ನಡುವೆಯೂ, ಮೂರನೇ ಸೆಟ್‌ನಲ್ಲಿ ಜೊಕೊವಿಚ್‌ ಅವರ ಆರಂಭಿಕ ಸರ್ವ್‌ ಬ್ರೇಕ್ ಮಾಡಿದ ಸಿಟ್ಸಿಪಸ್‌, ಪುಟಿದೇಳುವ ಸೂಚನೆ ನೀಡಿದರು. ಆದರೆ ರ‍್ಯಾಲಿಗಳಲ್ಲಿ ಹಿಡಿತ ಬಿಟ್ಟುಕೊಟ್ಟ ಅವರು ಸೋಲೊಪ್ಪಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು