ಸೋಮವಾರ, ಆಗಸ್ಟ್ 8, 2022
21 °C

ವಿಂಬಲ್ಡನ್, ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹಿಂದೆ ಸರಿದ ನಡಾಲ್

ಪಿಟಿಐ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಂಬರುವ ಬಹುನಿರೀಕ್ಷಿತ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಹಾಗೂ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸದಿರಲು ಸ್ಪೇನ್‌ನ ರಫೆಲ್ ನಡಾಲ್ ನಿರ್ಧರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ 20 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ನಡಾಲ್, 'ದೈಹಿಕ ಆರೋಗ್ಯ ಕಾಪಾಡಿಕೊಂಡು ವೃತ್ತಿಜೀವನವನ್ನು ಮತ್ತಷ್ಟು ಸುದೀರ್ಘವಾಗಿಸುವ ನಿಟ್ಟಿನಲ್ಲಿ ವಿಂಬಲ್ಡನ್ ಹಾಗೂ ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುತ್ತಿದ್ದೇನೆ' ಎಂದು ಹೇಳಿದ್ದಾರೆ.

'ಇದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ ನನ್ನ ದೇಹದ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಸಾಕಷ್ಟು ಚಿಂತನೆಯ ಬಳಿಕ ಇದೇ ಸರಿಯಾದ ನಿರ್ಧಾರ ಎಂಬುದನ್ನು ನಾನು ಮನಗಂಡಿದ್ದೇನೆ' ಎಂದು 35ರ ಹರೆಯದ ನಡಾಲ್ ತಿಳಿಸಿದ್ದಾರೆ.

'ನನ್ನ ವೃತ್ತಿಜೀವನವನ್ನು ಸುದೀರ್ಘಗೊಳಿಸುವುದು ಮತ್ತು ನನಗೆ ಸಂತೋಷವನ್ನುಂಟು ಮಾಡುವುದನ್ನು ಮುಂದುವರಿಸುವುದು ನನ್ನ ಗುರಿಯಾಗಿದೆ. ಅಂದರೆ ಅತ್ಯುನ್ನತ್ತ ಮಟ್ಟದಲ್ಲಿ ವೈಯಕ್ತಿಕ ಗುರಿಗಳಿಗಾಗಿ ಗರಿಷ್ಠ ಹಂತದ ವೃತ್ತಿಪರರ ವಿರುದ್ಧ ಹೋರಾಡಬೇಕಿದೆ' ಎಂದು ವಿವರಿಸಿದ್ದಾರೆ.

ದಾಖಲೆಯ 13 ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ರಫೆಲ್ ನಡಾಲ್ ಅವರು ಪ್ರಸಕ್ತ ಸಾಲಿನ ಸೆಮಿಫೈನಲ್‌ ಹೋರಾಟದಲ್ಲಿ ವಿಶ್ವದ ನಂ.1 ರ‍್ಯಾಂಕ್‌ನ ನೊವಾಕ್ ಜೊಕೊವಿಚ್ ವಿರುದ್ಧ ಶರಣಾಗಿದ್ದರು. ಇದರೊಂದಿಗೆ 21ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತ್ತು. ಅತ್ತ ಜೊಕೊವಿಕ್ ಫೈನಲ್‌ ಗೆದ್ದು ಕಿರೀಟ ಮುಡಿಗೇರಿಸಿದ್ದರು.

ಇನ್ನೊಂದೆಡೆ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರೋಜರ್ ಫೆಡರರ್, ಇತ್ತೀಚೆಗಷ್ಟೇ ಫ್ರೆಂಚ್ ಓಪನ್‌ನಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದರೂ ಅರ್ಧದಿಂದಲೇ ಟೂರ್ನಿಯಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದರು.

ಅಂಕಿಅಂಶಗಳನ್ನು ಗಮನಿಸಿದಾಗ ವಿಂಬಲ್ಡನ್ ಹುಲ್ಲುಹಾಸಿನ ಕೋರ್ಟ್‌ನಲ್ಲಿ ನಡಾಲ್ ಕೆಟ್ಟ ದಾಖಲೆಯನ್ನು ಹೊಂದಿದ್ದು, ಎರಡು ಬಾರಿ ಮಾತ್ರ ಪ್ರಶಸ್ತಿ (2008 ಮತ್ತು 2010) ಗೆದ್ದಿದ್ದಾರೆ. ಅಲ್ಲದೆ 2009ರ ಬಳಿಕ ಇದೀಗ ಮೂರನೇ ಬಾರಿಗೆ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಅತ್ತ ಟೋಕಿಯೊ ಒಲಿಂಪಿಕ್ಸ್ ಹಾರ್ಡ್ ಕೋರ್ಟ್‌ನಲ್ಲಿ ನಡೆಯಲಿದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ನಡಾಲ್ ಸ್ವರ್ಣ ಪದಕ ಗೆದ್ದಿದ್ದರು. 2016ರಲ್ಲಿ ಬ್ರೆಜಿಲ್‌ನ ರಿಯೋ ಜಿ ಜನೈರೊದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಪೇನ್ ದೇಶದ ಧ್ವಜಧಾರಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು