ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲ್ಡನ್ ಗ್ರ್ಯಾನ್‌ಸ್ಲಾಂ ಮೇಲೆ ಜೊಕೊವಿಚ್ ಕಣ್ಣು

ಬದುಕಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದ ಸರ್ಬಿಯಾದ ‘ಚಾಂಪಿಯನ್’ ಆಟಗಾರ
Last Updated 14 ಜೂನ್ 2021, 13:00 IST
ಅಕ್ಷರ ಗಾತ್ರ

ಪ್ಯಾರಿಸ್: ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ‘ಗೋಲ್ಡನ್ ಗ್ರ್ಯಾನ್‌ಸ್ಲಾಂ’ ಮೇಲೆ ಕಣ್ಣಿಟ್ಟಿರುವುದಾಗಿ ಹೇಳಿದ್ದಾರೆ.

ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಜೊಕೊವಿಚ್‌ ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಸ್ ವಿರುದ್ಧ 6-7 (6/8), 2-6, 6-3, 6-2, 6-4ರಲ್ಲಿ ಜಯ ಗಳಿಸಿ 19ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಎತ್ತಿಹಿಡಿದಿದ್ದರು. ಈ ಮೂಲಕ ಈಗ ಆಡುತ್ತಿರುವ ಆಟಗಾರರ ಪೈಕಿ ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂದೆನಿಸಿಕೊಂಡಿದ್ದರು. ಒಟ್ಟಾರೆ ಈ ಸಾಧನೆ ಮಾಡಿದ ಮೂರನೇ ಆಟಗಾರ ಆಗಿದ್ದಾರೆ ಅವರು.

ಈಗ ಅವರು ಒಂದೇ ಋತುವಿನ ಎಲ್ಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ಅಮೆರಿಕದ ಡಾನ್‌ ಬಜ್‌ 1937ರಲ್ಲೂ ಆಸ್ಟ್ರೇಲಿಯಾದ ರಾಡ್‌ ಲಾವೆರ್ 1962 ಮತ್ತು 1969ರಲ್ಲೂ ಈ ಸಾಧನೆ ಮಾಡಿದ್ದರು. ಒಲಿಂಪಿಕ್ಸ್‌ನಲ್ಲೂ ಚಿನ್ನ ಗೆದ್ದು ‘ಗೋಲ್ಡನ್ ಗ್ರ್ಯಾನ್‌ಸ್ಲಾಂ’ ಸಾಧನೆ ಮಾಡುವುದು ಅವರ ಮಹತ್ವದ ಮತ್ತೊಂದು ಕನಸು.

‘ಎಲ್ಲವೂ ಸಾಧ್ಯ. ನನ್ನ ಬದುಕು ಮತ್ತು ವೃತ್ತಿಜೀವನದಲ್ಲಂತೂ ಈ ಮಾತು ಸಾಬೀತಾಗಿದೆ. ಹೆಚ್ಚಿನವರು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದನ್ನು ನಾನು ಮಾಡಿತೋರಿಸಿದ್ದೇನೆ. ಹೀಗಾಗಿ ಗೋಲ್ಡನ್ ಸ್ಲ್ಯಾಂ ಸಾಧ್ಯ ಎಂಬುದು ನನ್ನ ನಂಬಿಕೆ’ ಎಂದು ಅವರು ಫೈನಲ್ ಪಂದ್ಯದ ನಂತರ ಹೇಳಿದರು.

ಪುರುಷರ ವಿಭಾಗದಲ್ಲಿ ಈ ವರೆಗೆ ಯಾರಿಗೂ ಗೋಲ್ಡನ್ ಸ್ಲ್ಯಾಂ ಗಳಿಸಲು ಸಾಧ್ಯವಾಗಲಿಲ್ಲ. ಮಹಿಳಾ ವಿಭಾಗದಲ್ಲಿ ಜರ್ಮನಿಯ ಸ್ಟೆಫಿ ಗ್ರಾಫ್1988ರಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಂ ಮತ್ತು ಒಲಿಂಪಿಕ್ ಚಿನ್ನದ ಪದಕ ಗಳಿಸಿದ್ದರು.

‘ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ಮತ್ತು ನಂತರ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗಳಿಸುವುದು ಜೊಕೊವಿಚ್‌ ಮತ್ತು ನಮ್ಮೆಲ್ಲರ ಗುರಿ. ಇದು ತುಂಬ ಕಠಿಣ ಸವಾಲು. ಆದರೂ ಆ ಸಾಧನೆ ಮಾಡುವ ಪ್ರಯತ್ನ ನಡೆದಿದೆ. ವಿಂಬಲ್ಡನ್‌, ಒಲಿಂಪಿಕ್ಸ್ ಮತ್ತು ಅಮೆರಿಕ ಓಪನ್ ನಮ್ಮೆಲ್ಲರ ಮುಂದಿರುವ ಗುರಿ’ ಎಂದು ಜೊಕೊವಿಚ್ ಅವರ ದೀರ್ಘಕಾಲದ ಕೋಚ್ ಮರಿಯನ್ ವಾಜ್ದಾ ಹೇಳಿದರು.

ಫೆಬ್ರುವರಿಯಲ್ಲಿ ದಾಖಲೆಯ ಒಂಬತ್ತನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿರುವ ಜೊಕೊವಿಚ್ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಂಬಲ್ಡನ್‌ಗೆ ಸಿದ್ಧರಾಗುತ್ತಿದ್ದಾರೆ. ಕಳೆದ ಬಾರಿ ಅವರು ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿದ್ದರು.ವಿಂಬಲ್ಡನ್‌ ನಂತರ ಒಲಿಂಪಿಕ್ಸ್‌ ನಡೆಯಲಿದ್ದು ಆ ನಂತರ ಅಮೆರಿಕ ಓಪನ್‌ ಟೂರ್ನಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT