ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ಟೈಪೊ ಆಟಕ್ಕೆ ದಂಗಾದ ನಡಾಲ್‌

ಫ್ರಾನ್ಸಿಸ್‌ ಎದುರು ಎಡವಿದ ಸ್ಪೇನ್‌ ಆಟಗಾರ
Last Updated 6 ಸೆಪ್ಟೆಂಬರ್ 2022, 11:34 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಸ್ಪೇನ್‌ನ ರಫೆಲ್‌ ನಡಾಲ್‌ ಅವರ 23ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯದ ಕನಸು ಭಗ್ನಗೊಂಡಿದೆ. ಆತಿಥೇಯ ಆಟಗಾರ ಫ್ರಾನ್ಸಿಸ್‌ ಟೈಪೊ ಎದುರು ಮುಗ್ಗರಿಸಿದ ಅವರು, ಅಮೆರಿಕ ಓಪನ್ ಟೆನಿಸ್‌ ಟೂರ್ನಿಯಿಂದ ಹೊರಬಿದ್ದರು.

ಇಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿದ್ದ ನಡಾಲ್‌, ಅರ್ಥರ್‌ ಆ್ಯಷ್‌ ಅಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ 4–6, 6–4, 4–6, 3–6ರಿಂದಟೈಪೊ ಅವರಿಗೆ ಸೋತರು. 36 ವರ್ಷದ ಸ್ಪೇನ್ ಆಟಗಾರ, ಟೂರ್ನಿಯಲ್ಲಿ ಆರು ವರ್ಷಗಳಲ್ಲಿ ಇಷ್ಟು ಬೇಗ ನಿರ್ಗಮಿಸಿದ್ದು ಇದೇ ಮೊದಲು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ಟೈಪೊ 18 ಏಸ್‌ ಮತ್ತು 49 ವಿನ್ನರ್‌ಗಳ ಮೂಲಕ ನಡಾಲ್ ಅವರನ್ನು ಕಂಗೆಡಿಸಿದರು. ಮೂರು ತಾಸು 34 ನಿಮಿಷಗಳ ಕಾಲ ಪಂದ್ಯ ನಡೆಯಿತು.

ಜಿದ್ದಾಜಿದ್ದಿ ಮೊದಲ ಸೆಟ್‌ನ ಆರಂಭದಲ್ಲಿ ನಡಾಲ್ ಮುನ್ನಡೆದ ಸಾಧಿಸಿದ್ದರು. ಆದರೆ ಸೊಗಸಾದ ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ 4–3ರ ಮುನ್ನಡೆ ಗಳಿಸಿದ ಟೈಪೊ, ಅದೇ ಲಯದೊಂದಿಗೆ ಜಯ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ನಡಾಲ್ ತಿರುಗೇಟು ನೀಡಿದರು. ಆರಂಭದಲ್ಲಿ ಸಮಬಲದ ಪೈಪೋಟಿ ನಡೆದರೂ ಹಂತಹಂತವಾಗಿ ಮುನ್ನಡೆ ಹೆಚ್ಚಿಸಿಕೊಂಡು ಗೆಲುವು ಸಾಧಿಸಿದರು. ನಂತರದ ಎರಡು ಸೆಟ್‌ಗಳಲ್ಲಿ ಚುರುಕಿನ ಸರ್ವ್‌ಗಳ ಮೂಲಕ ಜಯ ಸಾಧಿಸುವಲ್ಲಿ ಟೈಪೊ ಯಶಸ್ವಿಯಾದರು. ತವರಿನ ಅಭಿಮಾನಿಗಳ ಬೆಂಬಲವೂ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು.

ಈ ವರ್ಷದಲ್ಲಿ ಸ್ಪೇನ್ ಆಟಗಾರನಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಸೋಲಾಗಿದೆ. ಆಸ್ಟ್ರೇಲಿಯಾ ಮತ್ತು ಫ್ರೆಂಚ್‌ ಓಪನ್ ಟೂರ್ನಿಗಳಲ್ಲಿ ಕಿರೀಟ ಧರಿಸಿದ್ದ ಅವರು, ವಿಂಬಲ್ಡನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಹೊಟ್ಟೆನೋವಿನಿಂದಾಗಿ ಹಿಂದೆ ಸರಿದಿದ್ದರು.

24 ವರ್ಷದ ಟೈಪೊ ಮುಂದಿನ ಪಂದ್ಯದಲ್ಲಿ ರಷ್ಯಾದ ಆ್ಯಂಡ್ರೆ ರುಬ್ಲೆವ್‌ ಅವರನ್ನು ಎದುರಿಸುವರು. 16ರ ಘಟ್ಟದ ಮತ್ತೊಂದು ಸೆಣಸಾಟದಲ್ಲಿ ರುಬ್ಲೆವ್‌6-4, 6-4, 6-4ರಿಂದ ಬ್ರಿಟನ್‌ನ ಕ್ಯಾಮರಾನ್ ನೊರಿ ಎದುರು ಗೆದ್ದರು.

ಭಾನುವಾರ ಹಾಲಿ ಚಾಂಪಿಯನ್‌, ರಷ್ಯಾದ ಡೇನಿಯಲ್ ಮೆಡ್ವೆಡೆವ್‌, ಆಸ್ಟ್ರೇಲಿಯಾದ ನಿಕ್ ಕಿರ್ಗಿಯೊಸ್‌ ಅವರಿಂದ ಪರಾಭವಗೊಂಡಿದ್ದರು.

‘ಮಾತನಾಡಲು ಪದಗಳೇ ಸಿಗುತ್ತಿಲ್ಲ. ತುಂಬಾ ಖುಷಿಯಾಗಿದೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಅವರೂ ಒಬ್ಬರು. ನಂಬಲಾರದ ಆಟ ನನ್ನಿಂದ ಮೂಡಿಬಂತು‘ ಎಂದು ಪಂದ್ಯದ ಬಳಿಕಟೈಪೊ ನುಡಿದರು.

ಅಲ್ಕರಾಜ್‌ಗೆ ಪ್ರಯಾಸದ ಜಯ: ಐದು ಸೆಟ್‌ಗಳ ರೋಚಕ ಹಣಾಹಣಿಯಲ್ಲಿ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌6-4, 3-6, 6-4, 4-6, 6-3ರಿಂದ 2014ರ ಚಾಂಪಿಯನ್‌, ಕ್ರೊವೇಷ್ಯಾದ ಮರಿನ್ ಸಿಲಿಚ್‌ ಅವರನ್ನು ಮಣಿಸಿದರು. ಮೂರು ತಾಸು 54 ನಿಮಿಷಗಳ ಕಾಲ ನಡೆದ ಈ ಸೆಣಸಾಟದಲ್ಲಿ ಸಿಲಿಚ್‌ 66 ಸ್ವಯಂಕೃತ ತಪ್ಪುಗಳನ್ನು ಎಸಗಿದರು.

ಎಂಟರಘಟ್ಟದಲ್ಲಿ ಅಲ್ಕರಾಜ್ ಅವರಿಗೆ ಇಟಲಿಯ ಜಾನಿಕ್ ಸಿನ್ನರ್ ಸವಾಲು ಎದುರಾಗಿದೆ. ಪ್ರೀಕ್ವಾರ್ಟರ್‌ನಲ್ಲಿ ಸಿನ್ನರ್‌6-1, 5-7, 6-2, 4-6, 6-3ರಿಂದ ಬೆಲಾರಸ್‌ನ ಇಲ್ಯಾ ಇವಾಸ್ಕಾ ವಿರುದ್ಧ ಗೆದ್ದರು.

ಸ್ವಟೆಕ್‌ ಜಯಭೇರಿ: ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಪೋಲೆಂಡ್‌ನ ಇಗಾ ಸ್ವಟೆಕ್‌ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಮಹಿಳಾ ಸಿಂಗಲ್ಸ್‌ನ 16ರ ಘಟ್ಟದ ಪಂದ್ಯದಲ್ಲಿ ಅವರು2-6, 6-4, 6-0ರಿಂದ ಜರ್ಮನಿಯ ಜೂಲ್ ನೀಮರ್ ಎದುರು ಗೆದ್ದರು. ಮುಂದಿನ ಪಂದ್ಯದಲ್ಲಿ ಸ್ವೆಟೆಕ್‌ ಅಮೆರಿಕದ ಜೆಸ್ಸಿಕಾ ಪೆಗುಲಾ ಎದುರು ಆಡುವರು.

ಇನ್ನೊಂದು ಪಂದ್ಯದಲ್ಲಿ ಪೆಗುಲಾ6-3, 6-2ರಿಂದ ಎರಡು ಬಾರಿಯ ಚಾಂಪಿಯನ್‌, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ವಿರುದ್ಧ ಜಯ ಸಾಧಿಸಿದರು. ಪ್ರೀಕ್ವಾರ್ಟರ್‌ಫೈನಲ್‌ನ ಇನ್ನುಳಿದ ಪಂದ್ಯಗಳಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ3-6, 6-3, 6-2ರಿಂದ ಅಮೆರಿಕದ ಡ್ಯಾನಿಲ್ ಕಾಲಿನ್ಸ್ ಎದುರು, ಜೆಕ್‌ ಗಣರಾಜ್ಯದ ಕರೋಲಿನಾ ಪ್ಕಿಸ್ಕೊವಾ7-5, 6-7 (5/7), 6-2ರಿಂದ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಎದುರು ಜಯ ಸಾಧಿಸಿ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT