ಬುಧವಾರ, ಡಿಸೆಂಬರ್ 1, 2021
20 °C
ಟೆನಿಸ್‌: ಕ್ಷಿತಿಜ್‌ ಆರಾಧ್ಯ, ಗುರ್ಲೀನ್‌ ಕೌರ್‌ಗೆ 14 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ

ರಿಷಿ ರೆಡ್ಡಿ, ವಂಶಿತಾಗೆ ಚಾಂಪಿಯನ್ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ರಿಷಿ ರೆಡ್ಡಿ ಮತ್ತು ವಂಶಿತಾ ಪಠಾಣಿಯ ಅವರು ಕೆಎಸ್‌ಎಲ್‌ಟಿಎ–ಎಐಟಿಎ ಪ್ರೊ ಸರ್ಕೀಟ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. 

ರಾಜ್ಯ ಟೆನಿಸ್ ಸಂಸ್ಥೆ ಆವರಣದಲ್ಲಿ ನಡೆದ ₹ 2 ಲಕ್ಷ ಬಹುಮಾನ ಮೊತ್ತದ ಟೂರ್ನಿಯ ‍ಪುರುಷರ ವಿಭಾಗದ ಫೈನಲ್‌ನಲ್ಲಿ ಶನಿವಾರ ರಿಷಿ 6-0, 6-2ರಲ್ಲಿ ಪಶ್ಚಿಮ ಬಂಗಾಳದ ಇಶಾಕ್ ಇಕ್ಬಾಲ್ ವಿರುದ್ಧ ಜಯ ಗಳಿಸಿದರು. ವಂಶಿತಾ 6-0, 6-1ರಲ್ಲಿ ತೆಲಂಗಾಣದ ಆವಿಷ್ಕಾ ಗುಪ್ತಾ ಎದುರು ಜಯ ಸಾಧಿಸಿದರು.

ಇವರಿಬ್ಬರೂ ಮುಂದಿನ ವಾರ ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದು ಈ ಗೆಲುವು ಭರವಸೆ ತುಂಬಿದೆ.

ಈ ಹಿಂದೆ ಎರಡು ಬಾರಿ ಮುಖಾಮುಖಿಯಾಗಿದ್ದಾಗ ಇಶಾಕ್ ವಿರುದ್ಧ ರಿಷಿ ಸೋತಿದ್ದರು. ಆದರೆ 23 ವರ್ಷದ ಆಟಗಾರ ಶನಿವಾರ ತಿರುಗೇಟು ನೀಡುವ ಛಲದೊಂದಿಗೆ ಕಣಕ್ಕೆ ಇಳಿದಿದ್ದರು. ಚುರುಕಿನ ಆಟವಾಡಿದ ಅವರು ಸರ್ವ್‌ಗಳಲ್ಲಿ ಮತ್ತು ರಿಟರ್ನ್‌ಗಳಲ್ಲಿ ನಿಖರತೆ ಕಾಯ್ದುಕೊಂಡರು. ಮೊದಲ ಸೆಟ್‌ನ ಆರಂಭದಲ್ಲಿ 5–1ರ ಮುನ್ನಡೆ ಸಾಧಿಸಿದ ಅವರು ಸುದೀರ್ಘ ಗೇಮ್‌ನಲ್ಲಿ ಗೆದ್ದು ಸೆಟ್ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಎದುರಾದರೂ ಎದೆಗುಂದದ ರಿಷಿ ವೃತ್ತಿಜೀವನದ ಐದನೇ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. 19 ವರ್ಷದ ವಂಶಿತಾ ಫೈನಲ್‌ನಲ್ಲಿ ಅತ್ಯುತ್ತಮ ರಣತಂತ್ರಗಳನ್ನು ಬಳಸಿ ಸುಲಭ ಗೆಲುವು ಸಾಧಿಸಿದರು.

ಕ್ಷಿತಿಜ್‌ ಆರಾಧ್ಯ, ಗುರ್ಲೀನ್‌ಗೆ ಪ್ರಶಸ್ತಿ ಸಂಭ್ರಮ

ಕ್ಷಿತಿಜ್ ಆರಾಧ್ಯ ಮತ್ತು ಗುರ್ಲೀನ್ ಕೌರ್ 14 ವರ್ಷದೊಳಗಿನವರಿಗಾಗಿ ನಡೆದ ಎಫ್‌ಎಸ್‌ಎ–ಎಐಟಿಎ ಸಿಎಸ್‌–7 ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಚಾಂಪಿಯನ್ ಆದರು.  

ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಕ್ಷಿತಿಜ್ 6-2, 7-5ರಲ್ಲಿ ಅಭ್ರದೀಪ್ ಭಟ್ಟಾಚಾರ್ಯ ವಿರುದ್ಧ ಜಯ ಗಳಿಸಿದರು. ಬಾಲಕಿಯರ ವಿಭಾಗದ ಪ್ರಶಸ್ತಿ ಹಂತದ ಹಣಾಹಣಿಯಲ್ಲಿ ಗುರ್ಲೀನ್ 7-5, 2-6, 7-5ರಲ್ಲಿ ಧರಣಿ ಧನ್ಯತಾ ಶ್ರೀನಿವಾಸ ಎದುರು ಗೆಲುವು ದಾಖಲಿಸಿದರು. 

ಬಾಲಕರ ಡಬಲ್ಸ್‌ ಫೈನಲ್‌ನಲ್ಲಿ ಪ್ರಕಾಶ್ ಶರಣ್ ಮತ್ತು ನಿತಿಲನ್ ಪೂಂಕುಂಡ್ರನ್‌ ಜೋಡಿ ರಘು ವಿಜಯ್‌ ಮತ್ತು ಲಿಖಿತ್ ಗೌಡ ಅವರನ್ನು 6-1, 6-4ರಲ್ಲಿ ಮಣಿಸಿದರು. ಬಾಲಕಿಯರ ಡಬಲ್ಸ್‌ನಲ್ಲಿ ದಿಶಾ ಕುಮಾರ್ ಮತ್ತು ಹೇಮಜ ರೆಡ್ಡಿ 6-4, 6-3ರಲ್ಲಿ ಜೀವಿಕಾ ಚನ್ನಬೈರೇಗೌಡ ಮತ್ತು ಆದ್ಯ ಚೌರಾಸಿಯಾ ವಿರುದ್ಧ ಮೇಲುಗೈ ಸಾಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು