ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಸಾನಿಯಾ-ಅಂಕಿತಾ ಜೋಡಿಗೆ ಸೋಲಿನ ಆಘಾತ

ಅಕ್ಷರ ಗಾತ್ರ

ಟೋಕಿಯೊ: ಅನುಭವಿ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ ಅಂಕಿತಾ ರೈನಾ ಒಲಿಂಪಿಕ್ಸ್‌ ಟೆನಿಸ್‌ನ ಮೊದಲ ಸುತ್ತಿನಲ್ಲೇ ನಿರಾಸೆಗೊಂಡು ಮರಳಿದರು. ಭಾನುವಾರ ನಡೆದ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಭಾರತದ ಜೋಡಿ ಉಕ್ರೇನ್‌ನ ಅವಳಿ ಸಹೋದರಿಯರಾದ ನಾದಿಯಾ–ಲುಡ್ಮಿಲಾ ಕಿಚೆನೊಕ್‌ ಜೋಡಿಗೆ ಮಣಿದರು.

ಅರಿಯಾಕೆ ಟೆನಿಸ್ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಅಮೋಘ ಆರಂಭ ಕಂಡಿದ್ದರು. ಆದರೆ ಎರಡನೇ ಸೆಟ್‌ನಿಂದ ದಿಢೀರ್‌ ಚೇತರಿಸಿಕೊಂಡು ಪ್ರಬಲ ತಿರುಗೇಟು ನೀಡಿದ ನಾದಿಯಾ–ಲುಡ್ಮಿಲಾ 0-6 7-6(0) 10-8ರಲ್ಲಿ ಗೆಲುವು ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿಸುಲಭ ಜಯದ ನಿರೀಕ್ಷೆಯಲ್ಲಿದ್ದ ಭಾರತ 5–3ರ ಮುನ್ನಡೆಯಲ್ಲಿತ್ತು. ಈ ಸಂದರ್ಭದಲ್ಲಿ ಸಾನಿಯಾ ಕಳೆದುಕೊಂಡರು. ಇದರ ಲಾಭ ಪಡೆದುಕೊಂಡ ಉಕ್ರೇನ್ ಜೋಡಿ ನಂತರ ಹಿಂದಿರುಗಿ ನೋಡಲಿಲ್ಲ. ಸರ್ವ್ ಮತ್ತು ರಿಟರ್ನ್‌ಗಳಲ್ಲಿ ನಿಖರತೆಯನ್ನು ಉಳಿಸಿಕೊಂಡರು. ಆದರೂ ಪಟ್ಟು ಬಿಡದ ಸಾನಿಯಾ ಮತ್ತು ಅಂಕಿತಾ ಟೈಬ್ರೇಕರ್‌ನಲ್ಲಿ 1–8ರ ಹಿನ್ನಡೆಯಲ್ಲಿದ್ದಾಗ ಸತತ ಏಳು ಪಾಯಿಂಟ್‌ಗಳನ್ನು ಕಲೆ ಹಾಕಿದರು. ಆದರೆ ನಂತರ ಎರಡು ಪಾಯಿಂಟ್‌ಗಳನ್ನು ಕಳೆದುಕೊಂಡು ಸೋಲಿಗೆ ಶರಣಾದರು.

ಉತ್ತಮ ಆರಂಭ

ಪಂದ್ಯದ ಆರಂಭದಲ್ಲಿ ಎರಡನೇ ಗೇಮ್‌ನಲ್ಲಿ ಎದುರಾಳಿಗಳ ಸರ್ವ ಮುರಿದ ಭಾರತದ ಜೋಡಿ ಮುನ್ನಡೆಯತ್ತ ಸಾಗಿದರು. ಇದೇ ಲಯದಲ್ಲಿ ಆಡಿ ಕೇವಲ 21 ನಿಮಿಷಗಳಲ್ಲಿ ಸೆಟ್‌ ಗೆದ್ದುಕೊಂಡರು. ಎರಡನೇ ಸೆಟ್‌ನ ಎರಡನೇ ಗೇಮ್‌ನಲ್ಲಿ ಅಂಕಿತಾ ಅವರು ಬ್ಯಾಕ್‌ಹ್ಯಾಂಡ್‌ ಮೂಲಕ ಮಾಡಿದ ರಿಟರ್ನ್ ಬೇಸ್‌ಲೈನ್ ದಾಟಿ ಹೊರಗೆ ಹೋಯಿತು. ಮುಂದಿನ ಗೇಮ್‌ನಲ್ಲಿ ಅವರ ಫೋರ್‌ಹ್ಯಾಂಡ್ ರಿಟರ್ನ್ ಕೂಡ ಹಾದಿ ತಪ್ಪಿತು. ಸಾನಿಯಾ ಕೂಡ ತಪ್ಪು ಎಸಗಿದರು. ಇದು, ಎದುರಾಳಿ ಜೋಡಿಗೆ ಪಾಯಿಂಟ್‌ಗಳನ್ನು ತಂದುಕೊಟ್ಟಿತು. ಮೂರನೇ ಸೆಟ್‌ನಲ್ಲಿ ಪ್ರತಿರೋಧ ಒಡ್ಡಿದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಸಾನಿಯಾ–ಅಂಕಿತಾಗೆ ಸಾಧ್ಯವಾಗಲಿಲ್ಲ.

ಒಸಾಕ ಜಯಭೇರಿ; ಬಾರ್ಟಿಗೆ ನಿರಾಸೆ

ಒಲಿಂಪಿಕ್ಸ್‌ನಲ್ಲಿ ಮೊದಲ ಪಂದ್ಯ ಆಡಿದ ನವೊಮಿ ಒಸಾಕ ತವರಿನ ಅಂಗಣದಲ್ಲಿ ಜಯಭೇರಿ ಮೊಳಗಿಸಿದರು. ಆದರೆ ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಸೋತು ಹೊರಬಿದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಒಸಾಕ ಚೀನಾದ ಜೆಂಗ್ ಸೈಸೈ ವಿರುದ್ಧ 6-1, 6-4ರಲ್ಲಿ ಜಯ ಗಳಿಸಿದರು.

ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿ ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ ಎಂದು ಆರೋಪಿಸಿ ಫ್ರೆಂಚ್ ಓಪನ್ ಟೂರ್ನಿಯಿಂದ ದೂರ ಉಳಿದಿದ್ದ ಒಸಾಕ ವಿಂಬಲ್ಡ್‌ನ್ ಟೂರ್ನಿಯಲ್ಲೂ ಆಡಿರಲಿಲ್ಲ. ಅವರಿಗೆ ಇಲ್ಲಿ ಎರಡನೇ ಶ್ರೇಯಾಂಕ ನೀಡಲಾಗಿತ್ತು. ಜೆಂಗ್‌ 52ನೇ ಶ್ರೇಯಾಂಕ ಹೊಂದಿದ್ದರು.

ವಿಂಬಲ್ಡನ್ ಚಾಂಪಿಯನ್‌ ಬಾರ್ಟಿ ಸ್ಪೇನ್‌ನ 48ನೇ ಶ್ರೇಯಾಂಕಿತೆ ಸಾರಾ ಸೋರಿಬ್ಸ್‌ ತೊರ್ಮೊ ವಿರುದ್ಧ6-4, 6-3ರಲ್ಲಿ ಸೋತರು.

ಪ್ರಮುಖ ಫಲಿತಾಂಶಗಳು

ಪುರುಷರ ವಿಭಾಗ

* ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ಗೆ ಚೀನಾ ಥೈಪೆಯ ಲೂ ಯೆನ್ ಸೂನ್‌ ವಿರುದ್ಧ 6–1, 6–3ರಲ್ಲಿ ಜಯ

* ಗ್ರೀಸ್‌ನ ಸ್ಟೆಫನೊಸ್ ತಿತ್ಸಿಪಸ್‌ಗೆ ಜರ್ಮನಿಯ ಫಿಲಿಪ್ ಕೊಲ್ಸಿಬರ್‌ ವಿರುದ್ಧ 6-3, 3-6, 6-3ರಲ್ಲಿ ಜಯ

ಮಹಿಳೆಯರ ವಿಭಾಗ

* ಬೆಲಾರಸ್‌ನ ಅರಿನಾ ಸಬಲೆಂಕಾಗೆ ಪೋಲೆಂಡ್‌ನ ಲಿನೆಟ್ಟಿ ಮಗ್ದಾ ವಿರುದ್ಧ 6–2, 6–1ರಲ್ಲಿಜಯ

* ಜೆಕ್‌ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಗೆ ಫ್ರಾನ್ಸ್‌ನ ಕೊನೆಟ್ ಅಲಿಸ್ ಎದುರು 6–1, 6–3ರಲ್ಲಿ ಜಯ

* ಸ್ಪೇನ್‌ನ ಗಾರ್ಬೈನ್ ಮುಗುರುಜಾಗೆ ರಷ್ಯಾ ಒಲಿಂಪಿಕ್ ಸಮಿತಿಯ ಕುಡೆರ್ಮೆಟೊವ ವೆರೋನಿಕಾ ವಿರುದ್ಧ 7–5, 7–5ರಲ್ಲಿ ಜಯ

* ಲಾಟ್ವಿಯಾದ ಅನಸ್ತೇಸಿಜಾ ಸೆವಸ್ತೋವಗೆ ಫ್ರಾನ್ಸ್‌ನ ಪೆರೊ ಫಿಯೊನ ವಿರುದ್ಧ 6–2, 4–6, 2–6ರಲ್ಲಿ ಸೋಲು

* ಲಾಟ್ವಿಯಾದ ಜೆಲೆನಾ ಒಸ್ತಪೆಂಕೊಗೆ ರಷ್ಯಾ ಒಲಿಂಪಿಕ್ ಸಮಿತಿಯ ವೆಸ್ನಿನಾ ಎಲಿನಾ ವಿರುದ್ಧ 6–4, 6–7, 6–4ರಲ್ಲಿ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT