ಸೋಮವಾರ, ಆಗಸ್ಟ್ 2, 2021
25 °C

ಹಿಮ್ಮಡಿ ನೋವು: ಫ್ರೆಂಚ್‌ ಓಪನ್ ಟೂರ್ನಿಯಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್

ಎಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಸೆರೆನಾ ವಿಲಿಯಮ್ಸ್ ಅವರ 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯದ ಕನಸಿಗೆ ಹಿನ್ನಡೆಯಾಗಿದೆ. ಹಿಮ್ಮಡಿ ನೋವಿನ ಹಿನ್ನೆಲೆಯಲ್ಲಿ ಬುಧವಾರ ಅವರು ಫ್ರೆಂಚ್‌ ಓಪನ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಮೊದಲ ಸುತ್ತಿನಲ್ಲಿ ಜಯ ಗಳಿಸಿ ಶುಭಾರಂಭ ಮಾಡಿದ್ದ ಅಮೆರಿಕದ ಆಟಗಾರ್ತಿ ಬುಧವಾರ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ವೇತಾನಾ ಪಿರೊಂಕೊವಾ ಅವರನ್ನು ಎದುರಿಸಬೇಕಿತ್ತು.

ಮೂರು ವಾರಗಳ ಹಿಂದೆ ಅಮೆರಿಕ ಓಪನ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ವೇಳೆ ಸೆರೆನಾ ಗಾಯಗೊಂಡಿದ್ದರು.

‘ಗಾಯದಿಂದ ಚೇತರಿಸಿಕೊಳ್ಳಲು ಸಮಯ ಬೇಕು. ನಾಲ್ಕರಿಂದ ಆರು ವಾರಗಳ ಕಾಲ ವಿರಾಮ ಅಗತ್ಯ’ ಎಂದು ಅವರು ಹೇಳಿದ್ದಾರೆ.

‘2020ರಲ್ಲಿ ಮತ್ತೊಂದು ಟೂರ್ನಿಯಲ್ಲಿ ಆಡಲೂ ನನಗೆ ಬಹುತೇಕ ಸಾಧ್ಯವಾಗದು‘ ಎಂದು ಇಲ್ಲಿ ಟ್ರೋಫಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದ ಸೆರೆನಾ ನುಡಿದರು.

ಫ್ರೆಂಚ್‌ ಓಪನ್‌ ಟೂರ್ನಿಯ ಎರಡನೇ ಸುತ್ತಿನ ಹಣಾಹಣಿಗೆ ಸಿದ್ಧತೆ ನಡೆಸುತ್ತಿರುವುದಾಗಿ ಈ ಮೊದಲು ಹೇಳಿದ್ದ ಅವರು ಬಳಿಕ ನಿಲುವು ಬದಲಿಸಿದರು.

2014ರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಅವರು ಎರಡನೇ ಸುತ್ತಿನಲ್ಲಿ ಸೋತಿದ್ದರು. ಅದರ ಬಳಿಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಿಂದ ಸೆರೆನಾ ಇಷ್ಟು ಬೇಗ ನಿರ್ಗಮಿಸಿದ್ದು ಇದೇ ಮೊದಲು. 2018ರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲೇ ಎದೆನೋವಿನ ಹಿನ್ನೆಲೆಯಲ್ಲಿ ಅವರು ಹಿಂದೆ ಸರಿದಿದ್ದರು. ಆಗ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅವರು ರಷ್ಯಾದ ಮರಿಯಾ ಶರಪೋವಾ ಎದುರು ಕಣಕ್ಕಿಳಿದಿದ್ದರು.

ಸದ್ಯ 23 ಗ್ರ್ಯಾನ್‌ಸ್ಲಾಮ್‌ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿರುವ ಸೆರೆನಾ ಅವರು ಇನ್ನೊಂದು ಪ್ರಶಸ್ತಿ ಒಲಿಸಿಕೊಂಡರೆ ಮಾರ್ಗರೇಟ್‌ ಕೋರ್ಟ್‌ ಅವರ 24 ಗ್ರ್ಯಾನ್‌ಸ್ಲಾಮ್‌ ದಾಖಲೆ ಸಮಗಟ್ಟುವ ಅವಕಾಶವಿದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು