ಹಾಂಗ್‌ಝೌ: ಮೂರನೇ ಶ್ರೇಯಾಂಕದ ವಿದಿತ್ ಗುಜರಾತಿ ಅವರು ಮಂಗಳವಾರ ದಿನದ ಕೊನೆಯ (ಏಳನೇ ಸುತ್ತಿನ) ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಚೀನಾ ಆಟಗಾರ ವೀ ಯಿ ಅವರಿಗೆ ಸೋತರೂ, ಏಷ್ಯನ್ ಗೇಮ್ಸ್ ಚೆಸ್ ವೈಯಕ್ತಿಕ ವಿಭಾಗದಲ್ಲಿ ಜಂಟಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬುಧವಾರ ಕೊನೆಯ ಎರಡು ಸುತ್ತುಗಳನ್ನು ಆಡಲಾಗುವುದು.
ಭಾರತದ ಜಿಎಂ ವಿದಿತ್ ಮತ್ತು ಉಜ್ಬೇಕಿಸ್ತಾನದ ಜಿಎಂ ನಾಡಿರ್ಬೆಕ್ ಅಬ್ದುಸತ್ತಾರೊವ್ ತಲಾ ಐದು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಅಗ್ರಸ್ಥಾನ ಕಾಪಾಡಿಕೊಂಡಿರುವ ವಿ ಯಿ ಐದೂವರೆ ಪಾಯಿಂಟ್ಸ್ ಕಲೆಹಾಕಿದ್ದಾರೆ.
ಕಣದಲ್ಲಿರುವ ಭಾರತದ ಇನ್ನೊಬ್ಬ ಆಟಗಾರ ಅರ್ಜುನ್ ಇರಿಗೇಶಿ, ಇಂಡೊನೇಷ್ಯಾದ ನೊವೇಂದ್ರ ಪ್ರಿಸ್ಮೊರೊ ಅವರನ್ನು ಮಣಿಸಿದರು. ಅವರು 4.5 ಪಾಯಿಂಟ್ಸ್ ಹೊಂದಿದ್ದು, ಮೂವರು ಆಟಗಾರರ ಜೊತೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
ಇದಕ್ಕೆ ಮೊದಲು ವಿದಿತ್, ಇರಾನ್‌ನ ಪರ್ಹಾಮ್ ಮೊಘಸುಡ್ಲೂ ಅವರನ್ನು ಐದನೇ ಸುತ್ತಿನಲ್ಲಿ ಸೋಲಿಸಿದರೆ, ಆರನೇ ಸುತ್ತಿನಲ್ಲಿ ಉಜ್ಬೇಕ್ ತಾರೆ ನಾಡಿರ್ಬೆಕ್ ಅಬ್ದುಸತ್ತಾರೋವ್ ಮೇಲೆ ಜಯಗಳಿಸಿದರು. ಈ ಗೆಲುವುಗಳ ನಂತರ ಅಗ್ರಸ್ಥಾನಕ್ಕೇರಿದರೂ, ಅಂತಿಮ ಸುತ್ತಿನಲ್ಲಿ ಚೀನಾ ಆಟಗಾರನಿಗೆ ಸೋತಿದ್ದರಿಂದ ಎರಡನೇ ಸ್ಥಾನಕ್ಕೆ ಸರಿದರು.
ಹಂಪಿಗೆ ಜಯ: ಭಾರತದ ಆಟಗಾರ್ತಿಯರಾದ ಕೋನೇರು ಹಂಪಿ ಮತ್ತು ದ್ರೋನವಲ್ಲಿ ಹಾರಿಕಾ ಅವರು ಐದನೇ ಸುತ್ತಿನ ಪಂದ್ಯಗಳಲ್ಲಿ ಜಯಗಳಿಸಿದರೂ, ಆರು ಮತ್ತು ಏಳನೇ ಸುತ್ತಿನಲ್ಲಿ ಎದುರಾಳಿಗಳ ಜೊತೆ ಡ್ರಾ ಮಾಡಿಕೊಳ್ಳಬೇಕಾಯಿತು. ಇಬ್ಬರೂ ಈಗ 4.5 ಪಾಯಿಂಟ್ಸ್ ಸಂಗ್ರಹಿಸಿ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.
ಚೀನಾದ ಝು ಜಿನೆರ್ ಆರು ಪಾಯಿಂಟ್ಸ್ ಹೊಂದಿದ್ದು ಅಗ್ರಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.