ಆಸ್ಟ್ರೇಲಿಯಾ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿ ಇಂದಿನಿಂದ

ಮೆಲ್ಬರ್ನ್ (ರಾಯಿಟರ್ಸ್): ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಟೂರ್ನಿ ಆಸ್ಟ್ರೇಲಿಯಾ ಓಪನ್‌ಗೆ ಸೋಮವಾರ ಚಾಲನೆ ಲಭಿಸಲಿದ್ದು, ಎಲ್ಲರ ಚಿತ್ತ ಅನುಭವಿ ಆಟಗಾರರಾದ ರಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಚ್ ಮೇಲೆ ನೆಟ್ಟಿದೆ.
ದಿಗ್ಗಜ ಆಟಗಾರ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ನಿವೃತ್ತಿಯ ಬಳಿಕ ನಡೆಯುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಇದಾಗಿದ್ದು, ಸ್ಪೇನ್‌ನ ನಡಾಲ್ 23ನೇ ಕಿರೀಟಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ನಡಾಲ್ ಕಳೆದ ವರ್ಷ ಇಲ್ಲಿ ಚಾಂಪಿಯನ್ ಅಗಿದ್ದರು. ಫೈನಲ್‌ನಲ್ಲಿ ಎರಡು ಸೆಟ್‌ಗಳಿಂದ ಹಿನ್ನಡೆಯಲ್ಲಿದ್ದರೂ, ಪುಟಿದೆದ್ದು ಬಂದು ಡೇನಿಯಲ್ ಮೆಡ್ವೆಡೆವ್ ಅವರನ್ನು ಮಣಿಸಿದ್ದರು. ಆದರೆ 36 ವರ್ಷದ ಅವರು ಪ್ರಶಸ್ತಿಯನ್ನು ತಮ್ಮಲ್ಲಿ ಉಳಿಸಿಕೊಳ್ಳುವರೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅಗ್ರಶ್ರೇಯಾಂಕ ಹೊಂದಿರುವ ಅವರು ಮೊದಲ ಸುತ್ತಿನಲ್ಲಿ ಬ್ರಿಟನ್‌ನ ಜಾಕ್ ಡ್ರೇಪರ್ ವಿರುದ್ಧ ಪೈಪೋಟಿ ನಡೆಸುವರು. ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಅಮೆರಿಕ ಓಪನ್ ಟೂರ್ನಿಯ ಬಳಿಕ ನಡಾಲ್ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದ್ದಾರೆ. ಆಸ್ಟ್ರೇಲಿಯಾ ಓಪನ್‌ಗೆ ಪೂರ್ವಭಾವಿಯಾಗಿ ನಡೆದಿದ್ದ ಎರಡೂ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದರು.
ಸರ್ಬಿಯಾದ ನೊವಾಕ್ ಜೊಕೊವಿಚ್ ಈ ಬಾರಿ ಗೆದ್ದರೆ ನಡಾಲ್ ಅವರ 22 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಸಾಧನೆ ಸರಿಗಟ್ಟಲಿದ್ದಾರೆ. ಜೊಕೊವಿಚ್ ಇಲ್ಲಿ ದಾಖಲೆಯ 10ನೇ ಕಿರೀಟದ ನಿರೀಕ್ಷೆಯಲ್ಲಿದ್ದಾರೆ. ಕೋವಿಡ್ ಲಸಿಕೆ ಹಾಕದ್ದಕ್ಕೆ ಅವರಿಗೆ ಕಳೆದ ವರ್ಷ ಆಡಲು ಅವಕಾಶ ನೀಡಿರಲಿಲ್ಲ.
ನಾರ್ವೆಯ ಕ್ಯಾಸ್ಪರ್ ರೂಡ್, ಗ್ರೀಸ್‌ನ ಸ್ಟೆಫಾನೊಸ್ ಸಿಟ್ಸಿಪಸ್, ರಷ್ಯಾದ ಆಂಡ್ರೆ ರುಬ್ಲೆವ್, ಡೇನಿಯಲ್ ಮೆಡ್ವೆಡೆವ್ ಅಲ್ಲದೆ ಕೆನಡಾದ ಫೆಲಿಕ್ಸ್ ಉಜೆರ್ ಅಲಿಯಾಸಿಮ್ ಅವರು ಕಣದಲ್ಲಿರುವ ಇತರ ಪ್ರಮುಖರು. ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ಸ್ಪೇನ್‌ನ ಕಾರ್ಲೊಸ್ ಅಲ್ಕರಾಜ್ ಅವರು ಗಾಯದ ಕಾರಣ ಆಡುತ್ತಿಲ್ಲ.
ಮಹಿಳೆಯರ ವಿಭಾಗದಲ್ಲಿ ಪೋಲೆಂಡ್‌ನ ಇಗಾ ಸ್ವಟೆಕ್ ಅಗ್ರಶ್ರೇಯಾಂಕ ಹೊಂದಿದ್ದು, ಇಲ್ಲಿ ಮೊದಲ ಕಿರೀಟದ ಕನಸಿನಲ್ಲಿದ್ದಾರೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಆಶ್ಲೆ ಬಾರ್ಟಿ ಅವರು ನಿವೃತ್ತಿ ಹೊಂದಿರುವ ಕಾರಣ ಈ ಸಲ ಮಹಿಳಾ ವಿಭಾಗದಲ್ಲಿ ಹೊಸ ಚಾಂಪಿಯನ್ ಉದಯಿಸಲಿದ್ದಾರೆ.
ಟ್ಯುನೀಷಿಯಾದ ಆನ್ಸ್ ಜಬೇರ್, ಅಮೆರಿಕದ ಜೆಸ್ಸಿಕಾ ಪೆಗುಲಾ, ಫ್ರಾನ್ಸ್‌ನ ಕೆರೊಲಿನಾ ಗಾರ್ಸಿಯಾ ಮತ್ತು ಬೆಲಾರಸ್‌ನ ಅರ್ಯಾನ ಸಬಲೆಂಕಾ ಅವರು ಕ್ರಮವಾಗಿ ಎರಡದಿಂದ ಐದರವರೆಗಿನ ಶ್ರೇಯಾಂಕ ಹೊಂದಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯರು ಎನಿಸಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.