ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌: ಬಂಧಿತ ರಷ್ಯಾದ ಆಟಗಾರ್ತಿಯ ಬಿಡುಗಡೆ

Last Updated 5 ಜೂನ್ 2021, 11:22 IST
ಅಕ್ಷರ ಗಾತ್ರ

ಪ್ಯಾರಿಸ್‌: ಕಳೆದ ವರ್ಷದ ಫ್ರೆಂಚ್‌ ಓಪನ್‌ ಟೂರ್ನಿಯ ವೇಳೆ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ ಸಂಶಯದ ಮೇಲೆ ಬಂಧಿತರಾಗಿದ್ದ ರಷ್ಯಾದ ಟೆನಿಸ್‌ ಆಟಗಾರ್ತಿ ಯಾನಾ ಸಿಝಿಕೊವಾ ಅವರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಈ ಬಾರಿ ಫ್ರೆಂಚ್‌ ಓಪನ್‌ ಟೂರ್ನಿಯ ಡಬಲ್ಸ್‌ನಲ್ಲಿ ಭಾಗವಹಿಸಿದ್ದ ಅವರನ್ನು ಗುರುವಾರ ಪ್ಯಾರಿಸ್‌ನಲ್ಲಿ ಬಂಧಿಸಲಾಗಿತ್ತು. 26 ವರ್ಷದ ಸಿಝಿಕೊವಾ ಅವರನ್ನು ತನಿಖೆಗೆ ಒಳಪಡಿಸಲಾಗಿದೆ. ಆದರೆ, ಅವರ ವಿರುದ್ಧ ಅಧಿಕೃತವಾಗಿ ದೋಷಾರೋಪ ಮಾಡಿಲ್ಲ. ತನಿಖೆ ಮುಂದುವರಿಯಲಿದೆ ಎಂದು ಪ್ರಾಸಿಕ್ಯೂಟರ್‌ ಕಚೇರಿ ಮಾಹಿತಿ ನೀಡಿದೆ.

‘ಫಿಕ್ಸಿಂಗ್‌ ಆರೋಪಗಳನ್ನು ಯಾನಾ ಸಿಝಿಕೊವಾ ನಿರಾಕರಿಸಿದ್ದಾರೆ’ ಎಂದು ಅವರ ವಕೀಲ ಫ್ರೆಡೆರಿಕ್‌ ಬೆಲೊ ಹೇಳಿದ್ದಾರೆ. ಮಾನಹಾನಿಯಾಗಿದೆ ಎಂದು ದೂರು ದಾಖಲಿಸಲು ಆಟಗಾರ್ತಿ ಬಯಸಿದ್ದಾರೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘2020ರ ಸೆಪ್ಟೆಂಬರ್‌ನಲ್ಲಿ ನಡೆದ ಫ್ರೆಂಚ್‌ ಓಪನ್‌ ಟೂರ್ನಿಯ ವೇಳೆ ಯಾನಾ ಅವರು ಆಮಿಷ ಒಡ್ಡುವುದು ಸೇರಿದಂತೆ ಸಂಘಟಿತ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ’ ಎಂದು ಹೇಳಲಾಗಿದೆ.

ಮ್ಯಾಚ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ತನಿಖೆಯಲ್ಲಿ ಪರಿಣತಿ ಪಡೆಿದಿರುವ ಫ್ರೆಂಚ್‌ ಪೊಲೀಸ್‌ ಘಟಕವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅವರ ವಿರುದ್ಧ ತನಿಖೆಯ ಪ್ರಕ್ರಿಯೆ ಆರಂಭಿಸಿತ್ತು.

ಈ ಪ್ರಕ್ರಿಯೆ ಮುಂದುವರಿದಿರುವ ಕಾರಣ ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಆಗದು ಎಂದು ಫ್ರೆಂಚ್‌ ಟೆನಿಸ್‌ ಫೆಡರೇಷನ್‌ ಶುಕ್ರವಾರ ತಿಳಿಸಿದೆ.

‘ಸಿಝಿಕೊವಾ ಅವರಿಗೆ ತೀವ್ರ ಆಘಾತವಾಗಿದೆ’ ಎಂದು ಅವರ ವಕೀಲರು ತಿಳಿಸಿದ್ದಾರೆ. ‘ಕ್ರಿಮಿನಲ್‌ಗಳ ರೀತಿ ಅವರನ್ನು ಕಸ್ಟಡಿಯಲ್ಲಿರಿಸಲಾಯಿತು. ನಾನು ಅಮಾಯಕಿ. ಹೀಗಾಗಿ ವಿಚಾರಣೆಯ ವೇಳೆ ನಿಮ್ಮ ಅಗತ್ಯವಿಲ್ಲ ಎಂದು ಅವರು ನನಗೆ ತಿಳಿಸಿದ್ದಾರೆ’ ಎಂದು ಬೆಲೊ ಅವರು ದೂರವಾಣಿ ಸಂದರ್ಶನದಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಹೋದ ವರ್ಷದ ಸೆ. 30ರಂದು ನಡೆದ ಮಹಿಳೆಯರ ಡಬಲ್ಸ್‌ ಮೊದಲ ಸುತ್ತಿನ ಪಂದ್ಯ ಇಂಥ ಸಂಶಯಕ್ಕೆಡೆ ಮಾಡುವ ರೀತಿ ನಡೆದಿತ್ತು. ಆ ಪಂದ್ಯದಲ್ಲಿ ಸಿಝಿಕೊವಾ ಮತ್ತು ಮಡಿಸನ್‌ ಬ್ರೆಂಗ್ಲೆ (ಅಮೆರಿಕ) ಅವರು ಕೋರ್ಟ್ 10ರಲ್ಲಿ ರುಮೇನಿಯಾದ ಆಂಡ್ರಿಯಾ ಮಿಟು ಮತ್ತು ಪೆಟ್ರಿಷಿಯಾ ಮರಿಯಾ ಎದುರು ಆಡಿದ್ದರು. ಎರಡನೇ ಸೆಟ್‌ನ ಐದನೇ ಗೇಮ್‌ನಲ್ಲಿ ಯಾನಾ ಎರಡು ಬಾರಿ ಡಬಲ್‌ ಫಾಲ್ಟ್‌ ಮಾಡಿ ಗೇಮ್‌ ಕಳೆದುಕೊಂಡಿದ್ದರು. ರುಮೇನಿಯಾ ಆಟಗಾರ್ತಿಯರು ಗೆಲ್ಲುವರೆಂದು ಬೇರೆ ಬೇರೆ ರಾಷ್ಟ್ರಗಳಲ್ಲಿ ಸಾವಿರಗಟ್ಟಲೆ ಯುರೊ ಬೆಟ್ಟಿಂಗ್‌ ನಡೆದಿತ್ತು.

ಸಿಝಿಕೊವಾ ಡಬಲ್ಸ್‌ನಲ್ಲಿ 101ನೇ ಮತ್ತು ಸಿಂಗಲ್ಸ್‌ನಲ್ಲಿ 765ನೇ ಕ್ರಮಾಂಕ ಹೊಂದಿದ್ದಾರೆ.

ಕೊರೊನಾ ವೈರಸ್‌ ಹರಡಿದ್ದ ಕಾರಣ ಕಳೆದ ವರ್ಷ ಫ್ರೆಂಚ್‌ ಓಪನ್‌ ಟೂರ್ನಿ ಜೂನ್‌ ಬದಲು ಸೆಪ್ಟೆಂಬರ್‌ನಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT