ಶನಿವಾರ, ಸೆಪ್ಟೆಂಬರ್ 26, 2020
23 °C

ರೂಫ್‌ಟಾಪ್‌ನಲ್ಲಿ ಫೆಡರರ್ ಸಂಚಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೆನಿಸ್‌ ತಾರೆಗಳಾಗುವ ಕನಸು ಕಾಣುತ್ತಿರುವ ಆ ಬಾಲೆಯರು ಆಗಷ್ಟೇ ದಿಗ್ಗಜ ಫೆಡರರ್ ಮತ್ತು ರಫೆಲ್ ನಡಾಲ್ ಬಗ್ಗೆ ಮಾತನಾಡಿ ಕೆಲವೇ ನಿಮಿಷಗಳು ಕಳೆದಿದ್ದವು. ಅದಾಗಿ ಕೆಲ ಹೊತ್ತಿಗೆ 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ ಕಣ್ಮುಂದೆ ಬಂದು ನಿಂತಾಗ ಆ ಹುಡುಗಿಯರಿಗೆ ಆಕಾಶಕ್ಕೆ ಮೂರು ಗೇಣು ಉಳಿದಿತ್ತು ಅಷ್ಟೇ!

ವಿಟೊರಿಯಾ ಒಲಿವರಿ (13 ವರ್ಷ) ಮತ್ತು ಕರೊಲಾ ಪೆಸ್ಸಿನಾ (11 ವರ್ಷ) ಅವರಿಬ್ಬರೂ ಅವತ್ತು ತಮ್ಮ ವಸತಿ ಸಂಕೀರ್ಣದ ರೂಫ್‌ಟಾಪ್‌ನಲ್ಲಿ ಕೂತು ಮಾತನಾಡುವಾಗ ಮುಂದೆ ಬಂದು ನಿಂತಿದ್ದು ರೋಜರ್ ಫೆಡರರ್!

ಆಗಿದ್ದಿಷ್ಟು..
ಇಟಲಿಯ ಫಿನಾಲೆ ಲಿಗೇರ್‌ನಲ್ಲಿ  ಈ ಗೆಳತಿಯರಿಬ್ಬರೂ ಅಕ್ಕಪಕ್ಕದ ಮನೆಯಲ್ಲಿದ್ದಾರೆ. ಏಪ್ರಿಲ್‌ ತಿಂಗಳಲ್ಲಿ ಇಟಲಿಯಲ್ಲಿ ಕೊರೊನಾ ವೈರಸ್‌ ಹಾವಳಿ ತಾರಕಕ್ಕೇರಿತ್ತು. ಆಗ ಲಾಕ್‌ಡೌನ್ ಇದ್ದ ಕಾರಣ ಈ ಹುಡುಗಿಯರು ಬೇಜಾರು ಕಳೆಯಲು ತಮ್ಮ ಮನೆಯ ಟೆರೆಸ್‌ ಮೇಲೆ ಹತ್ತಿದ್ದರು. ಅಲ್ಲಿಯೇ ಟೆನಿಸ್ ಆಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಪಡೆದಿತ್ತು. ಸುಮಾರು ಒಂದು ಕೋಟಿಗೂ ಅಧಿಕ ಜನ ವೀಕ್ಷಿಸಿದ್ದಾರೆ.

ಇದನ್ನು ತಿಳಿದ ಫೆಡರರ್‌ ಹುಡುಗಿಯರ ಟೆನಿಸ್‌ ಪ್ರೀತಿಗೆ ಖುದ್ದಾಗಿ ತೆರಳಿ ಅಭಿನಂದಿಸಲು ನಿರ್ಧರಿಸಿದರು. ಅವರಿಗೆ ಪ್ರಾಯೋಜಕತ್ವ ನೀಡುವ  ಬೆರಿಲ್ಲಾ ಪಾಸ್ತಾ  ಕಂಪನಿ ಈ ಭೇಟಿಗೆ ವ್ಯವಸ್ಥೆ ಮಾಡಿತ್ತು.  ಬಾಲಕಿಯರಿಗೆ ಫೆಡರರ್ ಅಲ್ಲಿಗೆ ಬರುವ ವಿಷಯವೊಂದನ್ನು ಬಿಟ್ಟು ಉಳಿದೆಲ್ಲವನ್ನೂ ತಿಳಿಸಲಾಗಿತ್ತು. ಅವರ ವೈರಲ್ ವಿಡಿಯೊ ಕುರಿತು ಪತ್ರಿಕಾಗೋಷ್ಠಿ ಎಂದು ನಂಬಿಸಲಾಗಿತ್ತು.  ಗೋಷ್ಠಿಯಲ್ಲಿ ಏನೇನು ಮಾತನಾಡಬೇಕೆಂದು ಇಬ್ಬರೂ ಸಮಾಲೋಚನೆ ನಡೆಸಿದ್ದ ಸಂದರ್ಭದಲ್ಲಿ ಫೆಡರರ್ ಪ್ರತ್ಯಕ್ಷರಾದರು.

 ‘ಫೆಡರರ್‌ ಅವರು ಕಾಣಿಸಿಕೊಂಡಾಗ ನಾನು ಮೂಕವಿಸ್ಮಿತಳಾದೆ. ಅವರು ನಮ್ಮೊಂದಿಗೆ ಟೆನಿಸ್‌ ಆಡಿದರು.  ಅವರು ನಿಜವಾಗಿಯೂ ಫೆಡರರ್‌ ಹೌದಾ ಎಂದು ನಂಬಲು ಮೊದಲು ಕಷ್ಟವಾಯಿತು’ ಎಂದಿದ್ದಾರೆ ವಿಟೊರಿಯಾ.

ಇಬ್ಬರೂ ಬಾಲಕಿಯರೊಂದಿಗೆ ಭೋಜನಕೂಟದಲ್ಲಿ ಪಾಲ್ಗೊಂಡ ಫೆಡರರ್‌, ಬೇಸಿಗೆ ಶಿಬಿರಕ್ಕೆ ಭಾಗವಹಿಸಲು ವ್ಯವಸ್ಥೆ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ.

‘ನನ್ನ ಅಭಿಮಾನಿಗಳ ಅಚ್ಚರಿಗೆ ಕಾರಣವಾದ ಈ ದಿನ ನನಗೆ ವಿಶೇಷವಾದದ್ದು. ಕರೋಲಾ ಹಾಗೂ ವಿಟೊರಿಯಾ ಅವರ ಜೊತೆ ಸಮಯ ಕಳೆದದ್ದು ಸಂತಸ ತಂದಿದೆ’ ಎಂದು ಫೆಡರರ್‌  ಹೇಳಿದ್ದಾರೆ.


ಬಾಲಕಿಯರೊಂದಿಗೆ ರೋಜರ್‌ ಫೆಡರರ್‌– ಟ್ವಿಟರ್‌ ಚಿತ್ರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು