ಮಂಗಳವಾರ, ಮಾರ್ಚ್ 21, 2023
20 °C
ಅರಿನಾ ಸಬಲೆಂಕಾ, ರುಬ್ಲೆವ್‌ ಪ್ರೀ ಕ್ವಾರ್ಟರ್ ಫೈನಲ್‌ಗೆ

ವಿಂಬಲ್ಡನ್ ಟೆನಿಸ್ ಟೂರ್ನಿ: ಪ್ಲಿಸ್ಕೋವ, ಸ್ವೆಟೆಕ್‌ 16ರ ಘಟ್ಟಕ್ಕೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಎಂಟನೇ ಶ್ರೇಯಾಂಕಿತೆ, ಜೆಕ್‌ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು ತಮ್ಮದೇ ದೇಶದ ತೆರೆಸಾ ಮಾರ್ಟಿಂಕೋವಾ ವಿರುದ್ಧ 6-3, 6-3ರಲ್ಲಿ ಜಯ ಗಳಿಸಿದರು.

ವಿಶ್ವದ ಮಾಜಿ ಒಂದನೇ ಕ್ರಮಾಂಕದ ಆಟಗಾರ್ತಿ ಪ್ಲಿಸ್ಕೋವಾ ಮೊದಲ ಎರಡು ಸುತ್ತುಗಳಲ್ಲಿ ನಿರಾಯಾಸವಾಗಿ ಗೆದ್ದಿದ್ದರು. ಈ ಪಂದ್ಯದಲ್ಲೂ ಏಕಪಕ್ಷೀಯ ಜಯ ಗಳಿಸಿ ಮುನ್ನಡೆದರು. 2019ರ ಅಮೆರಿಕ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸೆಣಸಿದ ನಂತರ ಇದೇ ಮೊದಲ ಬಾರಿ ಈ ಇಬ್ಬರು ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ ಪ್ಲಿಸ್ಕೋವಾ ಗೆಲುವು ಸಾಧಿಸಿದ್ದರು.

ಮತ್ತೊಂದು ಪಂದ್ಯದಲ್ಲಿ ಪೋಲೆಂಡ್‌ನ ಇಗಾ ಸ್ವೆಟೆಕ್‌ ರೊಮೇನಿಯಾದ ಐರಿನಾ ಕ್ಯಾಮಲಿನಾ ಬೇಗು ವಿರುದ್ಧ ಭರ್ಜರಿ ಜಯ ಗಳಿಸಿ 16ರ ಸುತ್ತು ಪ್ರವೇಶಿಸಿದರು. ಫ್ರೆಂಚ್ ಓಪನ್‌ ಟೂರ್ನಿಯ ಮಾಜಿ ಚಾಂಪಿಯನ್ ಸ್ವೆಟೆಕ್‌ 6-1, 6-0ರಲ್ಲಿ ಬೇಗು ಅವರನ್ನು ಮಣಿಸಿದರು.

ಎರಡನೇ ಶ್ರೇಯಾಂಕಿತೆ ಬೆಲಾರಸ್‌ನ ಅರಿನಾ ಸಬಲೆಂಕಾ 6-0, 6-3ರಲ್ಲಿ ಕೊಲಂಬಿಯಾದ ಮರಿಯಾ ಕಮಿಲಾ ಒಜೋರಿಯೊ ಸೆರಾನೊ ವಿರುದ್ಧ ಗೆದ್ದು ವಿಂಬಲ್ಡನ್ ಟೂರ್ನಿಯಲ್ಲಿ ಮೊದಲ ಬಾರಿ ನಾಲ್ಕನೇ ಸುತ್ತು ಪ್ರವೇಶಿಸಿದರು.

ಮೂರನೇ ಸುತ್ತಿನ ಫಲಿತಾಂಶಗಳು
ಪುರುಷರ ವಿಭಾಗ:
ಚೀನಾದ ಕ್ರಿಸ್ಟಿಯನ್ ಗರಿನ್‌ಗೆ ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್‌ ವಿರುದ್ಧ 6-4, 6-3, 4-6, 6-4ರಲ್ಲಿ ಜಯ; ರಷ್ಯಾದ ಆ್ಯಂಡ್ರೆ ರುಬ್ಲೆವ್‌ಗೆ ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ 6-3, 5-7, 6-4, 6-2ರಲ್ಲಿ ಜಯ; ರಷ್ಯಾದ ಕರೇನ್ ಖಚನೊವ್‌ಗೆ ಅಮೆರಿಕದ ಫ್ರಾನ್ಸಸ್ ಟಿಯಾಫೊ ವಿರುದ್ಧ  6-3, 6-4, 6-4ರಲ್ಲಿ ಗೆಲುವು.

ಮಹಿಳೆಯರ ವಿಭಾಗ: ಜೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾಗೆ ಜೆಕ್ ಗಣರಾಜ್ಯದ ತೆರೆಜಾ ಮಾರ್ಟಿಂಕೋವಾ ವಿರುದ್ಧ 6-3, 6-3ರಲ್ಲಿ ಜಯ; ರಷ್ಯಾದ ಲೂಡ್ಮಿಲಾ ಸಂಸೊನೊವಾಗೆ ಅಮೆರಿಕದ ಸ್ಲಾನೆ ಸ್ಟೀಫನ್ಸ್‌ ವಿರುದ್ಧ 6-2, 2-6, 6-4ರಲ್ಲಿ ಗೆಲುವು; ಪೋಲೆಂಡ್‌ನ ಇಗಾ ಸ್ವೆಟೆಕ್‌ಗೆ ರೊಮೇನಿಯಾದ ಐರಿನಾ ಕ್ಯಾಮೆಲಿನಾ ಬೇಗು ವಿರುದ್ಧ 6-1, 6-0ರಲ್ಲಿ ಜಯ; ಕಜಕಸ್ತಾನದ ಎಲೆನಾ ರೈಬಕಿನಾಗೆ ಅಮೆರಿಕಾದ ಶೆಲ್ಬಿ ರೋಜರ್ಸ್‌ ವಿರುದ್ಧ 6-1, 6-4ರಲ್ಲಿ ಜಯ; ಬೆಲಾರಸ್‌ನ ಅರಿನಾ ಸಬಲೆಂಕಾಗೆ ಕೊಲಂಬಿಯಾದ ಮರಿಯಾ ಕಮಿಲಾ ಒಸೊರೊ ವಿರುದ್ಧ 6-0, 6-3ರಲ್ಲಿ ಗೆಲುವು.

ಬೋಪಣ್ಣ–ಮಿರ್ಜಾ ಜೋಡಿಗೆ ಜಯ
ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿ ಭಾರತದ ಮತ್ತೊಂದು ಜೋಡಿ ರಾಮ್‌ಕುಮರ್ ರಾಮನಾಥನ್ ಮತ್ತು ಅಂಕಿತಾ ರೈನಾ ವಿರುದ್ಧ ಜಯ ಗಳಿಸಿದರು. ಭಾರತದ ಜೋಡಿಗಳ ಈ ಐತಿಹಾಸಿಕ ಹೋರಾಟದಲ್ಲಿ ಬೋಪಣ್ಣ–ಮಿರ್ಜಾ 6-2 7-6 (5)ರಲ್ಲಿ ಗೆಲುವು ಸಾಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು