ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್: ಕ್ವಾರ್ಟರ್‌ಗೆ ಡಯಾನ, ಲಿಂಡಾ

Published 22 ಜನವರಿ 2024, 18:33 IST
Last Updated 22 ಜನವರಿ 2024, 18:33 IST
ಅಕ್ಷರ ಗಾತ್ರ

ಮೆಲ್ಬರ್ನ್: ಶ್ರೇಯಾಂಕ ಆಟಗಾರ್ತಿಯರನ್ನು ಮಣಿಸುತ್ತ ಯಶಸ್ಸಿನ ಓಟ ಮುಂದುವರಿಸಿರುವ ಡಯಾನಾ ಎಸ್ಟ್ರೆಮಸ್ಕ್‌ ಮತ್ತು ಲಿಂಡಾ ನೊಸ್ಕಾವಾ ಅವರು ಆಸ್ಟ್ರೇಲಿಯನ್ ಓ‍ಪನ್ ಟೂರ್ನಿಯಲ್ಲಿ ಸೋಮವಾರ ಎಂಟರ ಘಟಕ್ಕೆ ಲಗ್ಗೆಯಿಟ್ಟರು. ಆದರೆ ಪುರುಷರ ವಿಭಾಗದಲ್ಲಿ ಕಾರ್ಲೊಸ್‌ ಅಲ್ಕರಾಝ್‌ ಸೇರಿದಂತೆ ಶ್ರೇಯಾಂಕ ಆಟಗಾರರು ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ದಾಪುಗಾಲಿಟ್ಟರು.

ಎರಡನೇ ಶ್ರೇಯಾಂಕದ ಅಲ್ಕರಾಝ್ ಅವರು ರಾಡ್‌ ಲೇವರ್ ಅರೇನಾದಲ್ಲಿ 6-4, 6-4, 6-0 ಯಿಂದ ಸರ್ಬಿಯಾದ ಮೊಟೊಮಿರ್ ಕೆಕ್ಮನೋವಿಕ್ ಅವರನ್ನು ಸೋಲಿಸಿ ಮೊದಲ ಬಾರಿ ಈ ಟೂರ್ನಿಯ ಎಂಟರ ಘಟ್ಟ ತಲುಪಿದರು. ಅವರು ಕ್ವಾರ್ಟರ್‌ಫೈನಲ್‌ನಲ್ಲಿ, ಒಲಿಂಪಿಕ್ ಸ್ವರ್ಣ ವಿಜೇತ ಅಲೆಕ್ಸಾಂಡರ್‌ ಜ್ವರೇವ್ ಅವರನ್ನು ಎದುರಿಸಲಿದ್ದಾರೆ.

‘ನಾನು ಬಹುತೇಕ ಪರಿಪೂರ್ಣವಾಗಿ ಆಡಿದ್ದೇನೆ. ಪಂದ್ಯದಿಂದ ಪಂದ್ಯಕ್ಕೆ ಉತ್ತಮವಾಗಿ ಆಟವಾಡುತ್ತಿದ್ದೇನೆ’ ಎಂದು ಅಲ್ಕರಾಝ್ ಹೇಳಿದರು

ಮೂರನೇ ಕ್ರಮಾಂಕದ ಡೇನಿಯಲ್‌ ಮೆಡ್ವೆಡೇವ್‌ 6-3, 7-6 (4), 5-7, 6-1 ರಿಂದ ನುನೊ ಬೊರ್ಗೆಸ್ ಅವರನ್ನು ಹಿಮ್ಮೆಟ್ಟಿಸಿದರೆ, ಆರನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವರೇವ್‌ (ಜರ್ಮನಿ) ಅವರು ಕ್ಯಾಮರೂನ್ ನೊರಿ (ಇಂಗ್ಲೆಂಡ್‌) ವಿರುದ್ಧ 7-5, 3-6, 6-3, 4-6, 7-6 (3) ರಿಂದ ಜಯಿಸಿದರು. 

ಮೆಡ್ವೆಡೇವ್ ಮುಂದಿನ ಪಂದ್ಯದಲ್ಲಿ, ಪೋಲೆಂಡ್‌ನ ಹರ್ಬರ್ಟ್‌ ಹುರ್ಕಾಜ್ ಅವರನ್ನು ಎದುರಿಸುವರು. ಮೊದಲ ಬಾರಿ ಈ ಟೂರ್ನಿಯಲ್ಲಿ  ಆಡುತ್ತಿರುವ ಒಂಬತ್ತನೇ ಶ್ರೇಯಾಂಕದ ಹುರ್ಕಾಜ್ 7–6 (8/6), 7–6 (7/3), 6–4 ರಿಂದ ಫ್ರಾನ್ಸ್‌ನ ಆರ್ಥರ್ ಕ್ಯಾಝಾಕ್ಸ್ ಅವರನ್ನು  ಸೆಟ್‌ಗಳಿಂದ ಸೋಲಿಸಿದರು. ಆರ್ಥರ್‌ ವಿಶ್ವ ಕ್ರಮಾಂಕದಲ್ಲಿ 122ನೇ ಸ್ಥಾನದಲ್ಲಿದ್ದಾರೆ.

ಅನಿರೀಕ್ಷಿತ ಫಲಿತಾಂಶ: ಮಹಿಳಾ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶಗಳು ಮುಂದುವರಿದಿವೆ. ಅಗ್ರ ಆಟಗಾರ್ತಿಯರು ಒಬ್ಬೊಬ್ಬರಾಗಿ ಟೂರ್ನಿಯಿಂದ ನಿರ್ಗಮಿಸುತ್ತಿದ್ದಾರೆ. ಕಳೆದ ವರ್ಷ ಅಮೆರಿಕ ಓಪನ್‌ನಲ್ಲಿ ಎಂಟರ ಘಟ್ಟ ತಲುಪಿದ್ದ 12ನೇ ಶ್ರೇಯಾಂಕದ ಝೆಂಗ್‌ ಕ್ವಿನ್‌ವೆನ್‌ ಕಣದಲ್ಲಿ ಉಳಿದಿರುವ ಅತಿ ಹೆಚ್ಚಿನ ಶ್ರೇಯಾಂಕದ ಆಟಗಾರ್ತಿ ಎನಿಸಿದ್ದಾರೆ.

ಮೊದಲ ಸುತ್ತಿನಲ್ಲಿ ವಿಂಬಲ್ಡನ್ ಚಾಂಪಿಯನ್ ಮರ್ಕೆತಾ ವೊಂಡ್ರುಸೊವಾ ಅವರನ್ನು ಸೋಲಿಸಿದ್ದ ಡಯಾನಾ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 18ನೇ ಶ್ರೇಯಾಂಕದ ವಿಕ್ಟೋರಿಯಾ ಅಜರೆಂಕಾ ವಿರುದ್ಧ 7-6 (6), 6-4 ರಿಂದ ಜಯಗಳಿಸಿದರು. ಅಜರೆಂಕಾ ಇಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದವರು.

ಕ್ವಾರ್ಟರ್‌ಫೈನಲ್ ತಲುಪಿದ ಆಟಗಾರ್ತಿಯರಿಗೆ ಖಂಡಿತ ಇಲ್ಲಿ ಖುಷಿಯ ಅನುಭವವಾಗಿರಬಹುದು ಎಂದು ಝೆಂಗ್ ಹೇಳಿದರು. ಅವರು 6–0, 6–3 ರಿಂದ 95ನೇ ಕ್ರಮಾಂಕದ ಒಷಿಯಾನ್ ಡೊಡಿನ್ ಅವರನ್ನು ಸದೆಬಡಿದರು.

ರಷ್ಯಾದ ಆ್ಯನಾ ಕಲಿನ್ಸ್‌ಕಾಯಾ 6–4, 6–2 ರಿಂದ 26ನೇ ಕ್ರಮಾಕದ ಜಾಸ್ಮಿನ್ ಪೌಲಿನಿ ಅವರನ್ನು ಹಿಮ್ಮೆಟ್ಟಿಸಿದರು. ಅವರು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಮೂರನೇ ಸುತ್ತು ತಲುಪಿದರು. 23ನೇ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ ಬೆನ್ನು ನೋವಿನಿಂದಾಗಿ ಲಿಂಡಾ ನೊಸ್ಕೊವಾ ಅವರಿಗೆ ಪಂದ್ಯ ಬಿಟ್ಟುಕೊಡಬೇಕಾಯಿತು. ಆಗ ನೊಸ್ಕೊವಾ ಮೊದಲ ಸೆಟ್‌ನಲ್ಲಿ 3–0ಯಿಂದ ಮುಂದೆಯಿದ್ದರು.

ಅಂಗಣಕ್ಕೆ ಕರಪತ್ರ ಎಸೆದ ಪ್ರತಿಭಟನಕಾರ 

ಮೆಲ್ಬರ್ನ್ (ಆಸ್ಟ್ರೇಲಿಯಾ): ಒಲಿಂಪಿಕ್ ಚಾಂಪಿಯನ್ ಅಲೆಕ್ಸಾಂಡರ್ ಝ್ವೆರೆವ್ ಮತ್ತು ಬ್ರಿಟನ್‌ನ ಕ್ಯಾಮರೂನ್ ನೊರಿ ನಡುವಿನ ನಾಲ್ಕನೇ ಸುತ್ತಿನ ಪಂದ್ಯದ ವೇಳೆ ಪ್ರತಿಭಟನಕಾರ ಆಸ್ಟ್ರೇಲಿಯನ್ ಓಪನ್ ಅಂಗಣಕ್ಕೆ ಕರಪತ್ರಗಳನ್ನು ಎಸೆದಿದ್ದಾನೆ.

ಇದರಿಂದ ಪಂದ್ಯ ಕೆಲಕಾಲ ವಿಳಂಬವಾಯಿತು.  ಮಾರ್ಗರೇಟ್ ಕೋರ್ಟ್ ಅರೆನಾದಲ್ಲಿ ಸೋಮವಾರ ನಡೆದ ಮೂರನೇ ಸೆಟ್‌ನ ಆರನೇ ಗೇಮ್‌ನಲ್ಲಿ ವೇಳೆ ನೀಲಿ ಶರ್ಟ್ ಟೋಪಿ ಮತ್ತು ಫೇಸ್ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಯುದ್ಧ ವಿರೋಧಿ ಕರಪತ್ರಗಳನ್ನು ಸ್ಟ್ಯಾಂಡ್‌ನಿಂದ ಬೇಸ್ ಲೈನ್ ಹಿಂಭಾಗದ ಅಂಗಣಕ್ಕೆ ಎಸೆದ. ಬಿಳಿ ಪುಟಗಳ ಮೇಲೆ ಕಪ್ಪು ಬಣ್ಣದಲ್ಲಿ ‘ಫ್ರೀ ಪ್ಯಾಲೆಸ್ಟೈನ್: ನೀವು ಟೆನಿಸ್ ನೋಡುತ್ತಿರುವಾಗ ಬಾಂಬ್‌ಗಳು ಗಾಜಾದಲ್ಲಿ ಬೀಳುತ್ತಿವೆ’ ಎಂಬ ಸಂದೇಶ ಮುದ್ರಿಸಲಾಗಿತ್ತು.  ಸ್ವಲ್ಪ ವಿಳಂಬದ ನಂತರ ಪಂದ್ಯ ಮುಂದುವರಿಯಿತು. ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರನನ್ನು ಹೊರಗೆ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT