ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿ: ಜ್ವೆರೆವ್‌ಗೆ ಸೋಲುಣಿಸಿದ ಟಾಮಿ ಪಾಲ್

ಆ್ಯಂಡಿ ರುಬ್ಲೆವ್‌ಗೆ ಎಟಿಪಿಯಲ್ಲಿ ಸತತ 10ನೇ ಗೆಲುವು
Last Updated 14 ಮಾರ್ಚ್ 2022, 21:49 IST
ಅಕ್ಷರ ಗಾತ್ರ

ಇಂಡಿಯನ್ ವೆಲ್ಸ್, ಅಮೆರಿಕ: ವಿಶ್ವ ಕ್ರಮಾಂಕದಲ್ಲಿ ಮೂರನೆ ಸ್ಥಾನದಲ್ಲಿರುವ ಅಲೆಕ್ಸಾಂಡರ್ ಜ್ವೆರೆವ್ ಅವರು ಎಟಿಪಿ ಇಂಡಿಯನ್ ವೆಲ್ಸ್ ಮಾಸ್ಟರ್ಸ್‌ ಟೆನಿಸ್ ಟೂರ್ನಿಯಲ್ಲಿ ಸೋಲಿಗೆ ಶರಣಾದರು. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಅವರನ್ನು ಅಮೆರಿಕದ ಟಾಮಿ ಪಾಲ್ 6-2, 4-6, 7-6 (7/2)ರಲ್ಲಿ ಮಣಿಸಿದರು.

ತಾಳ್ಮೆ ಕಳೆದುಕೊಂಡು ಅಂಪೈರ್‌ ಕುರ್ಚಿಯ ಮೇಲೆ ಪದೇ ಪದೇ ರ‍್ಯಾಕೆಟ್‌ನಿಂದ ಬಡಿದ ಕಾರಣ ಮೆಕ್ಸಿಕೊ ಓಪನ್‌ನಿಂದ ಜ್ವೆರೆವ್‌ ಅವರನ್ನು ಅನರ್ಹಗೊಳಿಸಲಾಗಿತ್ತು. ಅದರ ನಂತರ ಇದೇ ಮೊದಲ ಬಾರಿ ಸ್ಪರ್ಧಾ ಕಣಕ್ಕೆ ಇಳಿದ ಅವರು ಇಲ್ಲಿ ಎರಡನೇ ಸುತ್ತಿನಲ್ಲೇ ಹೊರಬಿದ್ದರು.

ಡೊಮಿನಿಕ್ ಕೊಫರ್ ವಿರುದ್ಧ 7-5, 6-4ರಲ್ಲಿ ಗೆದ್ದ ಆ್ಯಂಡಿ ರುಬ್ಲೆವ್ ಎಟಿಪಿಯಲ್ಲಿ ಸತತ 10ನೇ ಗೆಲುವು ದಾಖಲಿಸಿದರು. ಆರನೇ ಶ್ರೇಯಾಂಕದ ಇಟಲಿ ಆಟಗಾರ ಮಟಿಯೊ ಬೆರೆಟಿನಿ 6-3, 4-6, 6-4ರಲ್ಲಿ ಡೆನ್ಮಾರ್ಕ್‌ನ ಹಾಲ್ಜರ್ ರೂನ್ ಎದುರು ಜಯ ಗಳಿಸಿದರು. ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸಿಮ್ ಟೂರ್ನಿಯಿಂದ ಹೊರಬಿದ್ದರು. ಅವರನ್ನು ಬಾಟಿಕ್ ವ್ಯಾನ್ ಜೆಂಡ್‌ಶುಲ್ಪ್‌ 7-6 (7/4), 6-7 (4/7), 6-3ರಲ್ಲಿ ಸೋಲಿಸಿದರು.

ರಡುಕಾನುಗೆ ನಿರಾಸೆ; ಹಲೆಪ್‌ಗೆ ಜಯ
ಮಹಿಳಾ ವಿಭಾಗದಲ್ಲಿ ಬ್ರಿಟನ್‌ನ ಎಮಾ ರಡುಕಾನು ಅವರನ್ನು ಕ್ರೊವೇಷ್ಯಾದ ಪೆಟ್ರಾ ಮಾರ್ಟಿಕ್ 6-7 (3/7), 6-4, 7-5ರಲ್ಲಿ ಸೋಲಿಸಿದರು. ಅಮೆರಿಕದ ಯುವ ಆಟಗಾರ್ತಿ ಕೊಕೊ ಗಫ್‌ ಅವರನ್ನು 6-3, 6-4ರಲ್ಲಿ ಸಿಮೋನಾ ಹಲೆಪ್ ಮಣಿಸಿದರು. ಮೂರನೇ ಶ್ರೇಯಾಂಕದ ಪೋಲೆಂಡ್ ಆಟಗಾರ್ತಿ ಇಗಾ ಸ್ವಾಟೆಕ್ ಡೆನ್ಮಾರ್ಕ್‌ನ ಕ್ಲಾರಾ ಟಾಸನ್ ವಿರುದ್ಧ 6-7 (3/7), 6-2, 6-1ರಲ್ಲಿ ಗೆದ್ದರು.

ಬಿಲಿ ಜೀನ್ ಕಿಂಗ್‌ ಕಪ್‌: ರಷ್ಯಾ ಬದಲಿಗೆ ಆಸ್ಟ್ರೇಲಿಯಾ
ಉಕ್ರೇನ್ ಮೇಲೆ ಆಕ್ರಮಣ ನಡೆಸಿರುವ ರಷ್ಯಾವನ್ನು ಬಿಲಿ ಜೀನ್ ಕಿಂಗ್ ಕಪ್‌ ಫೈನಲ್ಸ್‌ನಿಂದ ಹೊರಹಾಕಲಾಗಿದ್ದು ಆ ತಂಡದ ಬದಲಿಗೆ ಆಸ್ಟ್ರೇಲಿಯಾಗೆ ಅವಕಾಶ ನೀಡಲು ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ (ಐಟಿಎಫ್‌) ನಿರ್ಧರಿಸಿದೆ.

ರಷ್ಯಾವನ್ನು ಡೇವಿಸ್ ಕಪ್ ಟೂರ್ನಿಯಿಂದಲೂ ಹೊರಗಿರಿಸಲಾಗಿದೆ. ರಷ್ಯಾ ಆಕ್ರಮಣಕ್ಕೆ ನೆರವು ಒದಗಿಸಿರುವ ಬೆಲಾರೂಸ್ ತಂಡಕ್ಕೆ ಕೂಡ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಗಳಿಂದ ನಿಷೇಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT