ಅಹಮದಾಬಾದ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಫ್ಗಾನಿಸ್ತಾನ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಹಾದಿ ಇನ್ನೂ ಪೂರ್ಣವಾಗಿ ಮುಚ್ಚಿಲ್ಲ.
ಮೂರು ದಿನಗಳ ಹಿಂದೆ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ವಿರುದ್ಧದ ಪಂದ್ಯದಲ್ಲಿ ಗೆಲುವಿನಂಚಿನಲ್ಲಿದ್ದ ತಂಡವು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಐತಿಹಾಸಿಕ ಇನಿಂಗ್ಸ್ ಮುಂದೆ ಮಂಡಿಯೂರಿತ್ತು. ಮ್ಯಾಕ್ಸ್‌ವೆಲ್ ಕ್ಯಾಚ್ ಬಿಟ್ಟಿದ್ದ ಅಫ್ಗನ್ ಫೀಲ್ಡರ್‌ಗಳು ಬಲಾಢ್ಯ ತಂಡವನ್ನು ಸೋಲಿಸುವ ಅವಕಾಶವನ್ನೂ ಕೈಚೆಲ್ಲಿತ್ತು.
ಮ್ಯಾಕ್ಸ್‌ವೆಲ್ ಆಟಕ್ಕೆ ಬೆಚ್ಚಿದ್ದ ಅಫ್ಗನ್ ತಂಡವು ಚೇತರಿಸಿಕೊಂಡಿದೆ. ಇದೀಗ ರೌಂಡ್ ರಾಬಿನ್ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಆಡಲು ಸಿದ್ಧವಾಗಿದೆ. ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದರೆ ಅಫ್ಗನ್ ತಂಡಕ್ಕೆ ಒಂದು ಸಣ್ಣ ಅವಕಾಶ ಉಳಿಯಲಿದೆ. ಶನಿವಾರ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಸೋತರೆ ಸೆಮಿ ಅವಕಾಶ ದೊರೆಯಬಹುದು. ಆದರೆ, ಈಗಾಗಲೇ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡಕ್ಕಿಂತಲೂ ಹೆಚ್ಚು ರನ್‌ರೇಟ್ ಗಳಿಸಿರಬೇಕು.
ಹಷ್ಮತ್‌ವುಲ್ಲಾ ಶಹೀದಿ ಬಳಗವು ನಾಲ್ಕರ ಘಟ್ಟ ಪ್ರವೇಶಿಸುವುದೋ ಇಲ್ಲವೋ ಇನ್ನೆರಡು ದಿನಗಳಲ್ಲಿ ನಿರ್ಧಾರವಾಗಲಿದೆ. ಆದರೆ ಈ ಟೂರ್ನಿಯಲ್ಲಿ ತಂಡವು ತೋರಿದ ದಿಟ್ಟತನ ಮತ್ತು ಅಮೋಘ ಆಟವು ಗಮನ ಸೆಳೆದಿದೆ.
ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ತಂಡಗಳನ್ನೂ ಸೋಲಿಸಿರುವ ಅಫ್ಗನ್ ಭವಿಷ್ಯದಲ್ಲಿ ಬಹಳ ದೊಡ್ಡ ಸಾಧನೆ ಮಾಡುವ ಭರವಸೆ ಮೂಡಿಸಿದೆ. ಮ್ಯಾಕ್ಸ್‌ವೆಲ್ ಅವರು ‘ಅತಿಮಾನವ’ ಆಟವಾಡದೇ ಹೋಗಿದ್ದರೆ ಅಫ್ಗನ್ ತಂಡಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡುತ್ತಿತ್ತು. ಆಸ್ಟ್ರೇಲಿಯಾ ಎದುರು ಶತಕ ಬಾರಿಸಿದ್ದ ಇಬ್ರಾಹಿಂ ಜದ್ರಾನ್, ಉತ್ತಮ ಲಯದಲ್ಲಿರುವ ಶಹೀದಿ, ರೆಹಮತ್ ಶಾ ಅವರು ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ.
ಈ ತಂಡದ ಪ್ರಮುಖ ಶಕ್ತಿಯೆಂದರೆ ಸ್ಪಿನ್ನರ್‌ಗಳು. ಅನುಭವಿ ರಶೀದ್ ಖಾನ್, ನೂರ್ ಅಹಮದ್ ಮತ್ತು ಮೊಹಮ್ಮದ್ ನಬಿ ಅವರು ಮತ್ತೊಮ್ಮೆ ತಮ್ಮ ಕೈಚಳಕ ಮೆರೆಯಲು ಸಿದ್ಧರಾಗಿದ್ದಾರೆ.
ಆದರೆ ದಕ್ಷಿಣ ಆಫ್ರಿಕಾ ತಂಡದಲ್ಲಿ ನಾಲ್ಕು ಶತಕ ಸಿಡಿಸಿರುವ ಕ್ವಿಂಟನ್ ಡಿಕಾಕ್, ಅಬ್ಬರದ ಬ್ಯಾಟರ್‌ಗಳಾದ ಹೆನ್ರಿಚ್ ಕ್ಲಾಸ್, ಏಡನ್ ಮರ್ಕರಂ ಮತ್ತು ರೆಸಿ ವ್ಯಾನ್ ಡರ್ ಡಸೆ ಅವರನ್ನು ಕಟ್ಟಿಹಾಕುವುದೇ ಬೌಲರ್‌ಗಳಿ ಮುಂದಿರುವ ಪ್ರಮುಖ ಸವಾಲು.
ಕಳೆದ ಪಂದ್ಯದಲ್ಲಿ ಭಾರತದ ಮುಂದೆ ದಕ್ಷಿಣ ಆಫ್ರಿಕಾ ತಂಡವು 243 ರನ್‌ಗಳಿಂದ ಸೋಲಲು ಬ್ಯಾಟರ್‌ಗಳ ವೈಫಲ್ಯವೇ ಕಾರಣವಾಗಿತ್ತು. ಆದ್ದರಿಂದ ಅಫ್ಗನ್ ಬೌಲರ್‌ಗಳನ್ನು ಎಚ್ಚರದಿಂದ ಎದುರಿಸಿ ಕೊನೆಯ ಪಂದ್ಯದಲ್ಲಿ ಜಯಿಸುವ ಛಲದಲ್ಲಿ ತೆಂಬಾ ಬವುಮಾ ಬಳಗವಿದೆ.
2019ರಲ್ಲಿ ಕಾರ್ಡಿಫ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ದಕ್ಷಿಣ ಆಫ್ರಿಕಾ ತಂಡವು ಭರ್ಜರಿ ಜಯ ಸಾಧಿಸಿತ್ತು.
ಪಂದ್ಯ ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.