ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011 ಭಾರತ, 2015 ಆಸ್ಟ್ರೇಲಿಯಾ,2019 ಇಂಗ್ಲೆಂಡ್ -ಅತಿಥೇಯ ದೇಶಕ್ಕೆ ಕಪ್‌: 2023?

Published 17 ನವೆಂಬರ್ 2023, 11:31 IST
Last Updated 17 ನವೆಂಬರ್ 2023, 11:31 IST
ಅಕ್ಷರ ಗಾತ್ರ

ಬೆಂಗಳೂರು: 2011ರವರೆಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತಿಥೇಯ ದೇಶಗಳು ಎಂದೂ ಟ್ರೋಫಿ ಗೆದ್ದಿರಲಿಲ್ಲ. ಆದರೆ 2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿತ್ತು.

ಆ ಬಳಿಕ ನಡೆದ ಎರಡೂ ವಿಶ್ವಕಪ್‌ಗಳಲ್ಲಿ ತವರು ದೇಶಗಳೇ ವಿಶ್ವಕಪ್ ಗೆದ್ದಿವೆ. 2015ರಲ್ಲಿ ಆಸ್ಟ್ರೇಲಿಯಾ ಮತ್ತು 2019ರಲ್ಲಿ ಇಂಗ್ಲೆಂಡ್ ತಮ್ಮ ಆತಿಥ್ಯದಲ್ಲೇ ವಿಶ್ವಕಪ್ ಟ್ರೋಫಿ ಜಯಿಸಿವೆ.

ಇದರೊಂದಿಗೆ ಕಳೆದ ಮೂರು ಬಾರಿ (2011, 2015, 2019) ಅತಿಥೇಯ ದೇಶಗಳು ಟ್ರೋಫಿ ಗೆದ್ದ ಸಾಧನೆ ಮಾಡಿವೆ. ಈ ಪೈಕಿ 2011ರಲ್ಲಿ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಜಂಟಿಯಾಗಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದವು. ಆದರೆ ಫೈನಲ್‌ ಪಂದ್ಯವು ಮುಂಬೈನ ವಾಂಖೆಡೆ ಮೈದಾನದಲ್ಲಿ ಆಯೋಜನೆಗೊಂಡಿತ್ತಲ್ಲದೆ ಭಾರತ ಕಿರೀಟವನ್ನು ಎತ್ತಿ ಹಿಡಿದಿತ್ತು.

ಅದೇ ರೀತಿ 2015ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸಿದ್ದ ವಿಶ್ವಕಪ್‌ನ ಫೈನಲ್ ಪಂದ್ಯವು ಮೆಲ್ಬರ್ನ್‌ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದಿತ್ತು. ಇನ್ನು ಕಳೆದ ಬಾರಿ (2019) ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನ ಫೈನಲ್ ಪಂದ್ಯವು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದಿತ್ತು.

ಮೊದಲ ಮೂರು ವಿಶ್ವಕಪ್‌ಗಳಿಗೆ (1975, 1979, 1983) ಇಂಗ್ಲೆಂಡ್ ಆತಿಥ್ಯ ವಹಿಸಿತ್ತು. 1987ರಲ್ಲಿ ಭಾರತ ಹಾಗೂ ಪಾಕಿಸ್ತಾನದ ಆತಿಥ್ಯದಲ್ಲಿ ವಿಶ್ವಕಪ್ ನಡೆದಿತ್ತು. ಇನ್ನು 1992ರಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್, 1996ರಲ್ಲಿ ಭಾರತ-ಪಾಕಿಸ್ತಾನ-ಶ್ರೀಲಂಕಾದ ಆತಿಥ್ಯದಲ್ಲಿ ವಿಶ್ವಕಪ್ ನಡೆದಿತ್ತು. ಈ ಪೈಕಿ 1996ರಲ್ಲಿ ಶ್ರೀಲಂಕಾ ಟ್ರೋಫಿ ಗೆದ್ದರೂ ಫೈನಲ್ ಪಂದ್ಯ ಲಾಹೋರ್‌ನಲ್ಲಿ ನಡೆದಿತ್ತು ಎಂಬುದು ಗಮನಾರ್ಹವೆನಿಸುತ್ತದೆ.

ಇನ್ನು 1999ರಲ್ಲಿ ಇಂಗ್ಲೆಂಡ್, 2003ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ 2007ರಲ್ಲಿ ವೆಸ್ಟ್‌ಇಂಡೀಸ್ ಆತಿಥ್ಯದಲ್ಲಿ ವಿಶ್ವಕಪ್ ಆಯೋಜನೆಗೊಂಡಿತ್ತು.

ಈ ಬಾರಿಯ ವಿಶ್ವಕಪ್‌‌ಗೆ ಭಾರತ ಆತಿಥ್ಯ ವಹಿಸುತ್ತಿದೆ. ಎಲ್ಲ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಕನಸು ನನಸಾಗಲು ಇನ್ನೊಂದು ಗೆಲುವಿನ ಅವಶ್ಯಕತೆಯಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT