ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍ICC Cricket World Cup: ಪಾಕಿಸ್ತಾನ–ನ್ಯೂಜಿಲೆಂಡ್ ‘ಮಾಡು–ಮಡಿ’ ಪಂದ್ಯ ಇಂದು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಬಾಬರ್ ಬಳಗಕ್ಕೆ ನ್ಯೂಜಿಲೆಂಡ್‌ ಸವಾಲು
Published 3 ನವೆಂಬರ್ 2023, 19:30 IST
Last Updated 3 ನವೆಂಬರ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸತತ ನಾಲ್ಕು ಗೆಲುವುಗಳ ಬಳಿಕ ಎದುರಾದ ‘ಹ್ಯಾಟ್ರಿಕ್’ ಸೋಲಿನಿಂದ ಕಂಗೆಟ್ಟಿರುವ ನ್ಯೂಜಿಲೆಂಡ್‌ ತಂಡ ಒಂದೆಡೆಯಾದರೆ, ಏಳು ಪಂದ್ಯಗಳಿಂದ ಕೇವಲ ಆರು ಪಾಯಿಂಟ್ಸ್ ಸಂಗ್ರಹಿಸಿರುವ ಪಾಕಿಸ್ತಾನ ತಂಡ ಮತ್ತೊಂದೆಡೆ.

–ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ‘ಮಾಡು–ಮಡಿ’ ಪಂದ್ಯದಲ್ಲಿ ಇವೆರಡು ತಂಡಗಳು ಎದುರಾಗಲಿದ್ದು, ಜಿದ್ದಾಜಿದ್ದಿನ ಸೆಣಸಾಟ ನಿರೀಕ್ಷಿಸಲಾಗಿದೆ. ಸೆಮಿಫೈನಲ್‌ ಪ್ರವೇಶದ ಸಾಧ್ಯತೆ ಜೀವಂತವಾಗಿರಿಸಿಕೊಳ್ಳಲು ಉಭಯ ತಂಡಗಳಿಗೂ ಜಯ ಅನಿವಾರ್ಯ.

ಕಿವೀಸ್‌ ತಂಡ ತಾನಾಡಿದ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದಾಗ ಸುಲಭವಾಗಿ ನಾಲ್ಕರ ಘಟ್ಟ ತಲುಪಲಿದೆ ಎಂದೇ ಭಾವಿ ಸಲಾಗಿತ್ತು. ಆದರೆ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಕೈಯಲ್ಲಿ ಎದುರಾದ ಸೋಲುಗಳು ಈ ತಂಡದ ಸೆಮಿ ಪ್ರವೇಶದ ಹಾದಿಯನ್ನು ದುರ್ಗಮಗೊಳಿಸಿದೆ. ಇನ್ನುಳಿದ ಎರಡೂ ಲೀಗ್‌ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ತಂಡ ಸಿಲುಕಿದೆ.

ಗಾಯದ ಸಮಸ್ಯೆ: ಪ್ರಮುಖ ಆಟಗಾರರು ಗಾಯಗೊಂಡಿರುವುದು ನ್ಯೂಜಿಲೆಂಡ್‌ಗೆ ಹಿನ್ನಡೆ ಉಂಟಮಾಡಿದೆ. ಕೇನ್‌ ವಿಲಿಯಮ್ಸನ್‌ ಮತ್ತು ಮಾರ್ಕ್‌ ಚಾಪ್ಮನ್‌ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮ್ಯಾಟ್‌ ಹೆನ್ರಿ ಇನ್ನುಳಿದ ಪಂದ್ಯಗಳಿಗೆ ಲಭ್ಯರಿಲ್ಲ. ಕಳೆದ ಪಂದ್ಯದಲ್ಲಿ ಜೇಮ್ಸ್‌ ನೀಶಮ್‌ ಅವರ ಕೈಗೆ ಚೆಂಡು ಬಡಿದಿತ್ತು. ಇದೀಗ ತಂಡದಲ್ಲಿ ಫಿಟ್‌ ಆಗಿರುವ 11 ಆಟಗಾರರು ಮಾತ್ರ ಇದ್ದಾರೆ. ನೀಶಮ್‌ ಮತ್ತು ವಿಲಿಯಮ್ಸನ್ ಸಹ ಆಟಗಾರರ ಜತೆ ಶುಕ್ರವಾರ ಅಭ್ಯಾಸದಲ್ಲಿ ಪಾಲ್ಗೊಂಡರೂ, ಶನಿವಾರ ಕಣಕ್ಕಿಳಿಯುವುದು ಖಚಿತವಾಗಿಲ್ಲ.

ಬ್ಯಾಟರ್‌ಗಳಿಗೆ ನೆರವು ನೀಡುವ ಇಲ್ಲಿನ ಪಿಚ್‌ನಲ್ಲಿ ರಚಿನ್‌ ರವೀಂದ್ರ, ಡೆರಿಲ್ ಮಿಚೆಲ್‌, ಡೆವೊನ್‌ ಕಾನ್ವೆ ಮತ್ತು ಗ್ಲೆನ್‌ ಫಿಲಿಪ್ಸ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಟಾಮ್‌ ಲೇಥಮ್‌ ಮತ್ತು ವಿಲ್‌ ಯಂಗ್‌ ಲಯ ಕಂಡುಕೊಂಡರೆ ದೊಡ್ಡ ಮೊತ್ತ ಪೇರಿಸುವುದು ಅಥವಾ ಗುರಿ ಬೆನ್ನಟ್ಟುವುದು ಕಿವೀಸ್‌ಗೆ ಕಷ್ಟವಾಗದು.

ಶಹೀನ್‌ ಶಾ ಆಫ್ರಿದಿ ಅವರನ್ನೊಳ ಗೊಂಡ ಪಾಕ್‌ ಬೌಲರ್‌ಗಳು ನ್ಯೂಜಿ ಲೆಂಡ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಾದರೆ ಹೆಚ್ಚಿನ ಶ್ರಮ ವಹಿಸಬೇಕಿದೆ. ಗಾಯಗೊಂಡಿರುವ ಪ್ರಮುಖ ಸ್ಪಿನ್ನರ್‌ ಶಾದಾಬ್‌ ಖಾನ್ ಈ ಪಂದ್ಯದಲ್ಲೂ ಕಣಕ್ಕಿಳಿಯವುದು ಅನುಮಾನ. ಇದು ಕಿವೀಸ್‌ಗೆ ನೆರವಾಗಬಹುದು.

ರಚಿನ್‌ ಮೇಲೆ ಚಿತ್ತ
ನ್ಯೂಜಿಲೆಂಡ್‌ ತಂಡದ ರಚಿನ್‌ ರವೀಂದ್ರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 23 ವರ್ಷದ ರಚಿನ್‌ ಅವರು ಹುಟ್ಟಿ ಬೆಳೆದದ್ದು ನ್ಯೂಜಿಲೆಂಡ್‌ನಲ್ಲಾದರೂ, ಬೆಂಗಳೂರು ಜತೆ ನಂಟು ಹೊಂದಿದ್ದಾರೆ. ಅವರ ತಂದೆ, ರವೀಂದ್ರ ಬೆಂಗಳೂರಿನವರು. ಹೆತ್ತವರ ಜತೆ ರಚಿನ್‌ ಹಲವು ಸಲ ಬೆಂಗಳೂರಿಗೆ ಬಂದಿದ್ದಾರೆ. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಪಂದ್ಯ ಆಡುವ ಅವಕಾಶ ಲಭಿಸಿದೆ. ಈ ಎಡಗೈ ಬ್ಯಾಟರ್‌ ಏಳು ಪಂದ್ಯಗಳಿಂದ 69.16 ಸರಾಸರಿಯಲ್ಲಿ 415 ರನ್‌ ಕಲೆಹಾಕಿದ್ದಾರೆ. 105.59 ಸ್ಟ್ರೈಕ್‌ರೇಟ್‌ ಹೊಂದಿರುವ ಅವರು ಪಾಕಿಸ್ತಾನ ವಿರುದ್ಧ ದೊಡ್ಡ ಇನಿಂಗ್ಸ್‌ ಕಟ್ಟುವ ವಿಶ್ವಾಸದಲ್ಲಿದ್ದಾರೆ.

ಒತ್ತಡದಲ್ಲಿ ಪಾಕ್‌: ನ್ಯೂಜಿಲೆಂಡ್ ತಂಡಕ್ಕೆ ಹೋಲಿಸಿದರೆ, ಬಾಬರ್‌ ಅಜಂ ಬಳಗ ಇನ್ನಷ್ಟು ಒತ್ತಡದಲ್ಲಿ ಈ ಪಂದ್ಯ ಆಡಲಿದೆ. ಸತತ ನಾಲ್ಕು ಸೋಲುಗಳ ಬಳಿಕ ತಂಡವು ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಜಯಿಸಿತ್ತು. ಆದರೂ ಆಟಗಾರರಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದುಕಾಣುತ್ತಿದೆ.

ಬ್ಯಾಟರ್‌ಗಳ ಅಸ್ಥಿರ ಪ್ರದರ್ಶನ ತಂಡವನ್ನು ಕಾಡುತ್ತಿದೆ. ಬಾಬರ್‌ ಒಳಗೊಂಡಂತೆ, ಯಾರಿಂದಲೂ ಸ್ಥಿರವಾದ ಪ್ರದರ್ಶನ ಮೂಡಿಬಂದಿಲ್ಲ. 300ಕ್ಕೂ ಅಧಿಕ ರನ್‌ ಪೇರಿಸಿರುವ ಮೊಹಮ್ಮದ್‌ ರಿಜ್ವಾನ್‌ ಮತ್ತು ಅಬ್ದುಲ್ಲಾ ಶಫೀಕ್‌ ಅವರನ್ನೇ ನೆಚ್ಚಿಕೊಳ್ಳಬೇಕಾಗಿದೆ.

ಗಾಯದಿಂದ ಚೇತರಿಸಿಕೊಂಡು ಕಳೆದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಫಕಾರ್‌ ಜಮಾನ್ 81 ರನ್‌ ಗಳಿಸಿದ್ದರು. ಅವರು ಅದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇಫ್ತಿಕಾರ್‌ ಅಹ್ಮದ್‌ ಮತ್ತು ಸೌದ್‌ ಶಕೀಲ್‌ ಜವಾಬ್ದಾರಿಯಿಂದ ಆಡಬೇಕಿದೆ.

ಟ್ರೆಂಟ್‌ ಬೌಲ್ಟ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ ಅವರನ್ನೊಳಗೊಂಡ ಕಿವೀಸ್‌ ಬೌಲಿಂಗ್‌ ವಿಭಾಗವು ಒಡ್ಡುವ ಸವಾಲನ್ನು ಪಾಕ್‌ ಬ್ಯಾಟರ್‌ಗಳು ಬದಿಗೊತ್ತುವರೇ ಎಂಬುದನ್ನು ನೋಡಬೇಕು.

ಪಂದ್ಯ ಆರಂಭ: ಬೆಳಿಗ್ಗೆ 10.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್

ಹೆನ್ರಿ ಬದಲು ಜೇಮಿಸನ್
ನ್ಯೂಜಿಲೆಂಡ್‌ ತಂಡದ ವೇಗದ ಬೌಲರ್‌ ಮ್ಯಾಟ್‌ ಹೆನ್ರಿ ಅವರು ಮಂಡಿರಜ್ಜು (ಹ್ಯಾಮ್‌ಸ್ಟ್ರಿಂಗ್‌) ಗಾಯದ ಕಾರಣ ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರಿಗೆ ಬದಲಿ ಆಟಗಾರನಾಗಿ ಕೈಲ್‌ ಜೇಮಿಸನ್‌ ತಂಡವನ್ನು ಸೇರಿಕೊಂಡಿದ್ದಾರೆ. 31 ವರ್ಷದ ಹೆನ್ರಿ, ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದ ವೇಳೆ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT