ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಕ ಗಳಿಸುವುದನ್ನು ಹೇಳಿಸಿಕೊಳ್ಳುವ ಅಗತ್ಯ ರೋಹಿತ್ ಶರ್ಮಾಗೆ ಇಲ್ಲ: ಆರ್.ಅಶ್ವಿನ್

Published 23 ನವೆಂಬರ್ 2023, 13:36 IST
Last Updated 23 ನವೆಂಬರ್ 2023, 13:36 IST
ಅಕ್ಷರ ಗಾತ್ರ

ಮುಂಬೈ: ರೋಹಿತ್‌ ಶರ್ಮಾ ಅವರು ಶತಕ ಗಳಿಸುವುದನ್ನು ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾರತ ಕ್ರಿಕೆಟ್‌ ತಂಡದ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಎಡವಿದರು ಎಂಬ ಆರೋಪ ರೋಹಿತ್ ವಿರುದ್ಧ ಕೇಳಿ ಬಂದಿವೆ.

ವಿಶ್ವಕಪ್‌ ಟೂರ್ನಿಯುದ್ದಕ್ಕೂ ಬಿರುಸಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದ ರೋಹಿತ್‌, ಅತಿಹೆಚ್ಚು ರನ್‌ ಗಳಿಸಿದ ನಾಯಕ ಎನಿಸಿಕೊಂಡಿದ್ದಾರೆ. ಆಡಿದ 11 ಪಂದ್ಯಗಳಲ್ಲಿ ಅವರು 1 ಶತಕ ಮತ್ತು 3 ಅರ್ಧಶತಕ ಸಹಿತ 594 ರನ್‌ ಗಳಿಸಿದ್ದಾರೆ.

ಫೈನಲ್‌ ಪಂದ್ಯದಲ್ಲಿ 31 ಎಸೆತಗಳಲ್ಲಿ 47 ರನ್‌ ಗಳಿಸಿ ಅಮೋಘ ಆರಂಭ ನೀಡಿದ್ದ ರೋಹಿತ್‌ ಔಟಾಗುತ್ತಿದ್ದಂತೆ ಭಾರತದ ರನ್‌ ಗಳಿಕೆಯ ವೇಗ ಕುಸಿದಿತ್ತು.

ಟೀಂ ಇಂಡಿಯಾ ನಾಯಕನ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಶ್ವಿನ್‌, 'ಉತ್ತಮ ಆರಂಭ ಪಡೆದ ರೋಹಿತ್‌ 100 ರನ್‌ ಗಳಿಸಬೇಕಿತ್ತು ಎಂದು ಮುಗಿದ ಮೇಲೆ ಎಲ್ಲರೂ ಹೇಳುತ್ತಾರೆ. ಆದರೆ, ಅದು ಅವರ ಆಟದ ಶೈಲಿ. ತಂಡವೂ ಅದೇರೀತಿ ಆಡುವಂತೆ ಮಾಡಿದ್ದರು. ಶತಕ ಗಳಿಸುವ ಬಗ್ಗೆ ರೋಹಿತ್‌ಗೆ ಯಾರೂ ಪಾಠ ಮಾಡಬೇಕಾಗಿಲ್ಲ' ಎಂದಿದ್ದಾರೆ. ಆ ಮೂಲಕ ರೋಹಿತ್‌ ಆಟವನ್ನು ಸಮರ್ಥಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾಗೆ ಜಯ
ಅಹಮದಾಬಾದ್‌ನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 240 ರನ್‌ ಗಳಿಸಿ ಆಲೌಟ್‌ ಆಯಿತು.

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಟ್ರಾವಿಸ್‌ ಹೆಡ್ ಶತಕ (137 ರನ್‌) ಮತ್ತು ಮಾರ್ನಸ್‌ ಲಾಬುಷೇನ್‌ ಅರ್ಧಶತಕದ (ಅಜೇಯ 58 ರನ್‌) ಬಲದಿಂದ ಇನ್ನೂ 7 ಓವರ್‌ಗಳು ಬಾಕಿ ಇರುವಂತೆಯೇ 4 ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿ ಜಯದ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT