ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup | ನ್ಯೂಜಿಲೆಂಡ್‌ಗೆ ಹೀನಾಯ ಸೋಲು; ಅಗ್ರಸ್ಥಾನಕ್ಕೇರಿದ ದ.ಆಫ್ರಿಕಾ

Published 1 ನವೆಂಬರ್ 2023, 8:16 IST
Last Updated 1 ನವೆಂಬರ್ 2023, 8:16 IST
ಅಕ್ಷರ ಗಾತ್ರ

ಪುಣೆ: ಕ್ವಿಂಟನ್‌ ಡಿ ಕಾಕ್ ಮತ್ತು ರಸೀ ವ್ಯಾನ್‌ ಡರ್‌ ಡಸೆ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡವನ್ನು 190 ರನ್‌ಗಳಿಂದ ಬಗ್ಗುಬಡಿಯಿತು.

ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳಿಗೆ 357 ರನ್‌ ಪೇರಿಸಿತು. ಟೂರ್ನಿಯಲ್ಲಿ ನಾಲ್ಕನೇ ಶತಕ ಗಳಿಸಿದ ಡಿ ಕಾಕ್‌ (114; 116 ಎ., 4X10, 6X3) ಮತ್ತು ಡಸೆ (133; 118 ಎ., 4X9, 6X5) ಅವರು ಎದುರಾಳಿ ಬೌಲರ್‌ಗಳನ್ನು ದಂಡಿಸಿದರು.

ಸವಾಲಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌, 35.3 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟಾಯಿತು. ಕೇಶವ್ ಮಹಾರಾಜ್‌ (46ಕ್ಕೆ 4) ಮತ್ತು ಮಾರ್ಕೊ ಜಾನ್ಸೆನ್‌ (31ಕ್ಕೆ 3) ಅವರು ಕಿವೀಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಆರನೇ ಗೆಲುವು ಸಾಧಿಸಿದ ತೆಂಬಾ ಬವುಮಾ ಬಳಗ 12 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನಕ್ಕೇರಿದರೆ ಮೂರನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್‌, ಒಂದು ಸ್ಥಾನ ಕೆಳಕ್ಕೆ ಜಾರಿತು.

ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಉತ್ತಮ ಫಾರ್ಮ್‌ನಲ್ಲಿರುವ ಡೆವೊನ್‌ ಕಾನ್ವೆ (2) ಮತ್ತು ರಚಿನ್‌ ರವೀಂದ್ರ (9) ಅವರು ಸ್ಕೋರ್‌ 45 ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿದರು. ಇಬ್ಬರನ್ನೂ ಮಾರ್ಕೊ ಜಾನ್ಸೆನ್‌ ಔಟ್‌ ಮಾಡಿದರು. ವಿಲ್‌ ಯಂಗ್‌ ಮತ್ತು ಡೆರಿಲ್‌ ಮಿಚೆಲ್‌ ಕೂಡಾ ಹೆಚ್ಚುಹೊತ್ತು ನಿಲ್ಲಲಿಲ್ಲ. ಇದರಿಂದ ತಂಡ ಗೆಲುವಿನ ಆಸೆ ಕೈಬಿಟ್ಟಿತು. ಗ್ಲೆನ್‌ ಫಿಲಿಪ್ಸ್ (60; 50 ಎ., 4X4, 6X4) ಮಾತ್ರ ಅಲ್ಪ ಪ್ರತಿರೋಧ ಒಡ್ಡಿದರು.

200 ರನ್‌ ಜತೆಯಾಟ: ಇದಕ್ಕೂ ಮುನ್ನ ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ, ಟೂರ್ನಿಯಲ್ಲಿ ನಾಲ್ಕನೇ ಬಾರಿ 350ಕ್ಕೂ ಅಧಿಕ ರನ್‌ ಪೇರಿಸಿತು. ಡಿ ಕಾಕ್‌ ಮತ್ತು ಡಸೆ ಅವರು ಎರಡನೇ ವಿಕೆಟ್‌ಗೆ 200 ರನ್‌ಗಳ ಜತೆಯಾಟ ನೀಡಿದರು. ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ (53; 30 ಎ., 4X2, 6X4) ಬೀಸಾಟ ಆಡಿದರು.

ಡಿ ಕಾಕ್‌ ಅವರು ಒಂದೇ ವಿಶ್ವಕಪ್‌ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಶತಕ ಗಳಿಸಿದ ಮೂರನೇ ಬ್ಯಾಟರ್‌ ಎನಿಸಿಕೊಂಡರು. ಶ್ರೀಲಂಕಾದ ಕುಮಾರ ಸಂಗಕ್ಕಾರ (2015 ರಲ್ಲಿ 4 ಶತಕ) ಮತ್ತು ರೋಹಿತ್ ಶರ್ಮಾ (2019 ರಲ್ಲಿ 5 ಶತಕ) ಈ ಸಾಧನೆ ಮಾಡಿದ ಇತರ ಬ್ಯಾಟರ್‌ಗಳು.

ಸಂಕ್ಷಿಪ್ತ ಸ್ಕೋರ್‌

ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 357: (ಕ್ವಿಂಟನ್‌ ಡಿ ಕಾಕ್‌ 114, ತೆಂಬಾ ಬವುಮಾ 24, ರಸೀ ವ್ಯಾನ್‌ ಡರ್‌ ಡಸೆ 133, ಡೇವಿಡ್‌ ಮಿಲ್ಲರ್‌ ಔಟಾಗದೆ 53, ಟಿಮ್‌ ಸೌಥಿ 77ಕ್ಕೆ 2, ಟ್ರೆಂಟ್‌ ಬೌಲ್ಟ್‌ 49ಕ್ಕೆ 1)

ನ್ಯೂಜಿಲೆಂಡ್‌: 35.3 ಓವರ್‌ಗಳಲ್ಲಿ 167: (ವಿಲ್‌ ಯಂಗ್‌ 33, ಡೆರಿಲ್‌ ಮಿಚೆಲ್‌ 24, ಗ್ಲೆನ್‌ ಫಿಲಿಪ್ಸ್ 60, ಕೇಶವ್ ಮಹಾರಾಜ್‌ 46ಕ್ಕೆ 4, ಮಾರ್ಕೊ ಜಾನ್ಸೆನ್‌ 31ಕ್ಕೆ 3, ಜೆರಾಲ್ಡ್‌ ಕೊಯೆಟ್ಜಿ 41ಕ್ಕೆ 2)

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 190 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT