ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Cup: 250ಕ್ಕಿಂತ ಕಡಿಮೆ ರನ್ ಗಳಿಸಿದ ತಂಡಗಳು ಗೆದ್ದಿರುವುದು 3 ಬಾರಿಯಷ್ಟೇ!

Published 19 ನವೆಂಬರ್ 2023, 13:17 IST
Last Updated 19 ನವೆಂಬರ್ 2023, 13:17 IST
ಅಕ್ಷರ ಗಾತ್ರ

ಅಹಮದಾಬಾದ್‌: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾಗೆ 241 ರನ್‌ಗಳ ಗುರಿ ನೀಡಿದೆ. ಆಸ್ಟ್ರೇಲಿಯಾ ಬೌಲರ್‌ಗಳ ಶಿಸ್ತಿನ ಬೌಲಿಂಗ್ ಎದುರು ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದು, ಟೀಂ ಇಂಡಿಯಾಗೆ ಹಿನ್ನಡೆಯಾಯಿತು.

ಮೂರನೇ ಪ್ರಶಸ್ತಿ ಕನಸು ನನಸಾಗಬೇಕಾದರೆ, ಆಸ್ಟ್ರೇಲಿಯಾ ಪಡೆಯ ಬ್ಯಾಟರ್‌ಗಳನ್ನು ನಿಯಂತ್ರಿಸಬೇಕಾದ ಒತ್ತಡ ಭಾರತದ ಬೌಲರ್‌ಗಳ ಮೇಲಿದೆ. ಅತ್ತ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾಗೂ ಭಾರತದ ಬಲಿಷ್ಠ ಬೌಲಿಂಗ್‌ ಎದುರು ಸಮರ್ಥ ಆಟವಾಡುವ ಸವಾಲು ಇದೆ.

ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಎರಡು ತಂಡಗಳಷ್ಟೇ ಮೊದಲು ಬ್ಯಾಟಿಂಗ್‌ ಮಾಡಿ 250ಕ್ಕಿಂತ ಕಡಿಮೆ ರನ್‌ ಗಳಿಸಿಯೂ ಗೆಲುವು ದಕ್ಕಿಸಿಕೊಂಡಿವೆ. ನೆದರ್ಲೆಂಡ್ಸ್‌ ಎರಡು ಸಲ ಹಾಗೂ ಭಾರತ ಒಮ್ಮೆ ಈ ಸಾಧನೆ ಮಾಡಿದೆ.

ನೆದರ್ಲೆಂಡ್ಸ್‌ vs ಬಾಂಗ್ಲಾದೇಶ

ದುರ್ಬಲ ತಂಡವಾಗಿ ಕಣಕ್ಕಿಳಿದಿದ್ದ ನೆದರ್ಲೆಂಡ್ಸ್‌, ಅಕ್ಟೋಬರ್‌ 28ರಂದು ಕೋಲ್ಕತ್ತದಲ್ಲಿ ನಡೆದ ಲೀಗ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 87 ರನ್‌ ಅಂತರದ ಜಯ ಸಾಧಿಸಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ಈ ತಂಡ 229 ರನ್ ಗಳಿಸಿ ಸರ್ವಪತನ ಕಂಡಿತ್ತು. ಗುರಿ ಬೆನ್ನತ್ತಿದ ಬಾಂಗ್ಲಾ ಪಡೆಯನ್ನು 142 ರನ್‌ಗಳಿಗೆ ಆಲೌಟ್‌ ಮಾಡಿತ್ತು.

ಭಾರತ vs ಇಂಗ್ಲೆಂಡ್‌

ಇಂಗ್ಲೆಂಡ್‌ ತಂಡದ ವಿರುದ್ಧ ಅಕ್ಟೋಬರ್‌ 29ರಂದು ಲಖನೌನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 229 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

ಈ ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಮೊಹಮ್ಮದ್‌ ಶಮಿ (4 ವಿಕೆಟ್‌), ಜಸ್‌ಪ್ರಿತ್‌ ಬೂಮ್ರಾ (3 ವಿಕೆಟ್‌) ಮತ್ತು ಕುಲದೀಪ್‌ ಯಾದವ್‌ (2 ವಿಕೆಟ್‌) ಪೆಟ್ಟು ನೀಡಿದ್ದರು. ಹೀಗಾಗಿ ಆಂಗ್ಲರು 129 ರನ್‌ ಗಳಿಸಿ ಸೋಲೊಪ್ಪಿಕೊಂಡಿದ್ದರು. ಹೀಗಾಗಿ ಭಾರತಕ್ಕೆ 100 ರನ್‌ಗಳ ಜಯ ದಕ್ಕಿತ್ತು.

ಇಂಥದೇ ಪ್ರದರ್ಶನವನ್ನು ಭಾರತದ ಬೌಲರ್‌ಗಳು ಫೈನಲ್‌ ಪಂದ್ಯದಲ್ಲಿಯೂ ತೋರಬೇಕಿದೆ.

ನೆದರ್ಲೆಂಡ್ಸ್‌ vs ದಕ್ಷಿಣ ಆಫ್ರಿಕಾ

ಬಲಿಷ್ಠ ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್ಸ್‌ ತಂಡಗಳು ಅಕ್ಟೋಬರ್‌ 17ರಂದು ಧರ್ಮಶಾಲಾದಲ್ಲಿ ಮುಖಾಮುಖಿಯಾಗಿದ್ದವು. ಮಳಿಯಿಂದಾಗಿ ಓವರ್‌ ಕಡಿತಗೊಳಿಸಲಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಬೀಸಿದ್ದ ನೆದರ್ಲೆಂಡ್ಸ್‌ 43 ಓವರ್‌ಗಳಲ್ಲಿ 8 ವಿಕೆಟ್‌ಗೆ 245 ರನ್ ಗಳಿಸಿತ್ತು.

ಈ ತಂಡದ ಬೌಲರ್‌ಗಳು ಹರಿಣಗಳ ತಂಡದ ಬ್ಯಾಟರ್‌ಗಳನ್ನು 207 ರನ್‌ ಗಳಿಗೆ ನಿಯಂತ್ರಿಸಿ 38 ರನ್ ಅಂತರದ ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT