ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಎಲ್‌.ರಾಹುಲ್... ಅಬ್ಬರವಿಲ್ಲದ ಸಾಧನೆ: ಬದಲಾದ ಕ್ರಮಾಂಕದಲ್ಲೂ ಉಪಯುಕ್ತ ಕಾಣಿಕೆ

Published 17 ನವೆಂಬರ್ 2023, 16:00 IST
Last Updated 17 ನವೆಂಬರ್ 2023, 16:00 IST
ಅಕ್ಷರ ಗಾತ್ರ

ಮುಂಬೈ: ಹಾಲಿ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್‌ ಅಯ್ಯರ್ ಅವರ ಅಬ್ಬರದ ಆಟದ ನಡುವೆಯೂ, ತಮಗೆ ಅವಕಾಶ ದೊರೆತಾಗ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಆಟಗಾರ ಎಂದರೆ ಅದು ವಿಕೆಟ್ ಕೀಪರ್‌ ಕೆ.ಎಲ್.ರಾಹುಲ್.

ಬೆಂಗಳೂರಿನ ಈ ಕೀಪರ್‌–ಬ್ಯಾಟರ್‌ 71 ಏಕದಿನ ಪಂದ್ಯಗಳಲ್ಲಿ 50.50 ಸರಾಸರಿಯಲ್ಲಿ ರನ್‌ಗಳನ್ನು ಗಳಿಸಿದ್ದರೂ ಅವರನ್ನು ವಿಕೆಟ್‌ ಕೀಪರ್ ಪಾತ್ರದಲ್ಲಿ ಕಾಣುವವರೇ ಹೆಚ್ಚು. ತಂಡಕ್ಕೆ ಪದಾರ್ಪಣೆ ಮಾಡಿದ ದಿನದಿಂದ ಅವರು ನಿಭಾಯಿಸಿದ ಪಾತ್ರಗಳು ಹಲವು. ಸುಮಾರು ಒಂದು ದಶಕದ ಅವಧಿಯಲ್ಲಿ ಅವರ ಬ್ಯಾಟಿಂಗ್ ಕ್ರಮಾಂಕ ಹಲವು ಬಾರಿ ಬದಲಾಗಿದೆ. ಅದಕ್ಕೆ ತಕ್ಕಂತೆ ಮನಃಸ್ಥಿತಿ ಹೊಂದಿಸಿಕೊಂಡು ಆಟವಾಡುವ ಸವಾಲೂ ಅವರೆದುರಿಗಿದ್ದು, ಅದರಲ್ಲಿ ಅವರು ಯಶಸ್ವಿ ಆಗಿದ್ದಾರೆ.

ರೋಹಿತ್‌ ಶರ್ಮಾ ಅವರು ನೀಡುವ ಬಿರುಸಿನ ಆರಂಭ, ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಅವರ ಆಕರ್ಷಕ ಇನಿಂಗ್ಸ್, ಮೊಹಮ್ಮದ್ ಶಮಿ ಅವರ ಅಮೋಘ ಬೌಲಿಂಗ್‌ ಮಧ್ಯೆ ರಾಹುಲ್ ಅವರ ಕೊಡುಗೆ ಅಷ್ಟಾಗಿ ಎದ್ದು ಕಂಡಿಲ್ಲ. ಆದರೆ ಅವರು 77ರ ಸರಾಸರಿಯಲ್ಲಿ 386 ರನ್‌ಗಳನ್ನು (ಹೆಚ್ಚುಕಮ್ಮಿ 99ರ ಸ್ಟ್ರೈಕ್‌ರೇಟ್‌) ಗಳಿಸಿದ್ದು ತಂಡಕ್ಕೆ ಹೆಚ್ಚು ಅಗತ್ಯ ಬಿದ್ದಾಗಲೇ.

ಹಾಲಿ ವಿಶ್ವಕಪ್ ಅಭಿಯಾನದಲ್ಲಿ ಭಾರತದ ಇದುವರೆಗಿನ ದಂಡಯಾತ್ರೆಯಲ್ಲಿ ಅವರ ಕೊಡುಗೆ ಗಮನಾರ್ಹವಾದುದೇ. ಐದನೇ ಕ್ರಮಾಂಕದಲ್ಲೂ ಅವರು ಗಮನ ಸೆಳೆದಿದ್ದಾರೆ. ಚೆನ್ನೈನಲ್ಲಿ ಭಾರತದ ಮೊದಲ ಮೂವರು ಆಟಗಾರರು ಅಲ್ಪಮೊತ್ತಕ್ಕೆ ನಿರ್ಗಮಿಸಿದಾಗ ಹೊಣೆಯರಿತು ಆಡಿದ ಅಜೇಯ 97 ರನ್‌ಗಳ ಇನಿಂಗ್ಸ್‌ ಬೆಲೆಕಟ್ಟಲಾಗದ್ದು. ನ್ಯೂಜಿಲೆಂಡ್ ಎದುರು ಕೊನೆಯ ಹಂತದಲ್ಲಿ ಬಿರುಸಿನ ಆಟವಾಡಿ 20 ಎಸೆತಗಳಲ್ಲಿ 39 ರನ್ ಹೊಡೆದರು. ಇದು ಇನಿಂಗ್ಸ್‌ಗೆ ವೇಗ ನೀಡಿತು. ಸಾಮಾನ್ಯವಾಗಿ ಆರಂಭದಲ್ಲಿ ಅವರ ಆಟ ನಿಧಾನ ಎನಿಸಿದರೂ ಬೇರೂರಿದ ಮೇಲೆ ಅವರ ಆಕರ್ಷಕ ಇನಿಂಗ್ಸ್‌ ಕಟ್ಟಬಲ್ಲ ಪ್ರತಿಭಾನ್ವಿತ.

ಕೀಪಿಂಗ್‌ನಲ್ಲೂ ಅವರು ಉತ್ತಮ ಕ್ಯಾಚ್‌ಗಳನ್ನು ಪಡೆದಿದ್ದಾರೆ. ಸೆಮಿಫೈನಲ್‌ನಲ್ಲಿ ಡೆವಾನ್‌ ಕಾನ್ವೆ ಅವರ ಕ್ಯಾಚ್ ಪಡೆದ ರೀತಿ ಇದಕ್ಕೊಂದು ನಿದರ್ಶನ. ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಸಿರಾಜ್ ಬೌಲಿಂಗ್‌ನಲ್ಲಿ ಮೆಹಿದಿ ಹಸನ್ ಮಿರಾಜ್ ಅವರ ಕ್ಯಾಚ್‌ಅನ್ನು ಎಡಕ್ಕೆ ಡೈವ್ ಮಾಡಿದ ಪಡೆದ ರೀತಿ ಅದ್ಭುತವಾಗಿತ್ತು. 10 ಪಂದ್ಯಗಳಲ್ಲಿ 15 ಕ್ಯಾಚ್‌ ಮತ್ತು ಒಂದು ಸ್ಟಂಪಿಂಗ್ ವಿಕೆಟ್‌ ಹಿಂದುಗಡೆ ಅವರ ಸಾಧನೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಬಿಟ್ಟರೆ ಹೆಚ್ಚಿನ ಕ್ಯಾಚ್‌ ಪಡೆದ ವಿಕೆಟ್‌ ಕೀಪರ್‌ ಅವರು.

ಈ ವಿಶ್ವಕಪ್ ಅಭಿಯಾನದಲ್ಲಿ ಅವರು ಬೌಲರ್‌ಗಳು ಕನಿಷ್ಠ ಐದು ಬಾರಿ ಡಿಆರ್‌ಎಸ್‌ ತೆಗೆದುಕೊಳ್ಳುವುದನ್ನು ತಡೆದಿದ್ದಾರೆ. ಬೌಲರ್‌ಗಳ ಮತ್ತು ನಾಯಕನ ಒತ್ತಡವವನ್ನು ಕಡಿಮೆ ಮಾಡಿದ್ದಾರೆ. ಅವರ ನಿರ್ಧಾರಗಳು ಸರಿ ಎನಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT