ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ವಿಭಾಗದ 100 ಮೀ. ಬ್ಯಾಕ್‌ಸ್ಟ್ರೋಕ್ ಈಜು ಸ್ಪರ್ಧೆಯ ಸೆಮಿಫೈನಲ್‌ನಲ್ಲಿ 54.55 ಸೆಕೆಂಡ್‌ಗಳಲ್ಲಿ ಗುರಿ ಕ್ರಮಿಸಿದ ಭಾರತದ ಶ್ರೀಹರಿ ನಟರಾಜ್ ಅವರು ಫೈನಲ್ ಪ್ರವೇಶಿಸಿದ್ದಾರೆ.
21 ವರ್ಷದ ಶ್ರೀಹರಿ ತಾವು ಪಾಲ್ಗೊಂಡ ಹೀಟ್ಸ್‌ನಲ್ಲಿ ನಾಲ್ಕನೇ ಹಾಗೂ ಒಟ್ಟಾರೆಏಳನೇ ಸ್ಥಾನ ಪಡೆದು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಪೀಟರ್ ಕೊಯೆಟ್ಜ್ ಅವರು ಕೇವಲ 53.67 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ಮೊದಲನೇ ಸ್ಥಾನಿಯಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
2010ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ಯಾರಾ ಈಜು ಸ್ಪರ್ಧೆಯಲ್ಲಿ ಭಾರತದ ಪ್ರಶಾಂತ ಕರ್ಮಾಕರ್ ಅವರು ಕಂಚಿನ ಪದಕ ಗೆದ್ದಿದ್ದರು. ಅದಾದ ಬಳಿಕ ಈ ಕೂಟದಲ್ಲಿ ಎರಡನೇ ಈಜುಪಟುವಾಗಿ ಪದಕ ಗೆಲ್ಲುವತ್ತ ಕರ್ನಾಟಕದ ಶ್ರೀಹರಿ ದೃಷ್ಟಿ ನೆಟ್ಟಿದ್ದಾರೆ.
ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಟರಾಜ್ ಅವರು 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 54:31 ಸೆಕೆಂಡುಗಳಲ್ಲಿ ಗುರಿ ತಲುಪಿ 27ನೇ ಸ್ಥಾನ ಪಡೆದಿದ್ದರು.