ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Cup | ವಿಶ್ವಕಪ್‌ ಫೈನಲ್‌ನಲ್ಲಿ ಶತಕ: ದಿಗ್ಗಜರ ಸಾಲಿಗೆ ಟ್ರಾವಿಸ್ ಹೆಡ್

Published 19 ನವೆಂಬರ್ 2023, 16:29 IST
Last Updated 19 ನವೆಂಬರ್ 2023, 16:29 IST
ಅಕ್ಷರ ಗಾತ್ರ

ಅಹಮದಾಬಾದ್‌: ಏಕದಿನ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಟ್ರಾವಿಸ್‌ ಹೆಡ್‌ ಗಳಿಸಿದ ಅಮೋಘ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತದ ಎದುರು 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು.

ಈ ಪಂದ್ಯದಲ್ಲಿ ಮೂರಂಕಿ ಮೊತ್ತ ಗಳಿಸುವ ಮೂಲಕ ಟ್ರಾವಿಸ್‌ ಹೆಡ್‌ ಅವರು ದಿಗ್ಗಜ ಬ್ಯಾಟರ್‌ಗಳ ಸಾಲಿಗೆ ಸೇರಿದರು. 120 ಎಸೆತಗಳನ್ನು ಎದುರಿಸಿದ ಹೆಡ್‌, 15 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ 137 ರನ್‌ ಚಚ್ಚಿ, ತಮ್ಮ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.

ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಇದುವರೆಗೆ ಒಟ್ಟು 7 ಬ್ಯಾಟರ್‌ಗಳು ಶತಕ ಸಿಡಿಸಿದ್ದಾರೆ. 1975ರಲ್ಲಿ ನಡೆದ ಚೊಚ್ಚಲ ವಿಶ್ವಕಪ್‌ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಕ್ಲೈವ್‌ ಲಾಯ್ಡ್‌ (102 ರನ್‌) ಶತಕ ಸಿಡಿಸಿದ್ದರು. ಎರಡನೇ ವಿಶ್ವಕಪ್‌ ಫೈನಲ್‌ನಲ್ಲೂ ಅದೇ ದೇಶದ ವಿವಿಯನ್‌ ರಿಚರ್ಡ್ಸನ್‌ (138 ರನ್‌) ಮೂರಂಕಿ ದಾಟಿದ್ದರು.

ಬಳಿಕ ಶ್ರೀಲಂಕಾದ ಅರವಿಂದ ಡಿ ಸಿಲ್ವಾ (107 ರನ್‌) 1996ರಲ್ಲಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ (140 ರನ್‌) ಹಾಗೂ ಆ್ಯಡಂ ಗಿಲ್‌ಕ್ರಿಸ್ಟ್‌ (149 ರನ್‌) ಕ್ರಮವಾಗಿ 2003, 2007ರಲ್ಲಿ, ಶ್ರೀಲಂಕಾದ ಮಹೇಲ ಜಯವರ್ಧನೆ (103 ರನ್‌) 2011ರಲ್ಲಿ ಶತಕ ಸಿಡಿಸಿದ್ದರು.

ಈ ಪೈಕಿ ಒಮ್ಮೆ ಮಾತ್ರ ಶತಕ ಗಳಿಸಿದ ಆಟಗಾರನ ತಂಡ ಸೋಲು ಕಂಡಿದೆ. 2011ರಲ್ಲಿ ಜಯವರ್ಧನೆ ಶತಕದ ಹೊರತಾಗಿಯೂ ಶ್ರೀಲಂಕಾ ತಂಡ ಭಾರತದ ಎದುರು ಸೋಲು ಕಂಡಿತ್ತು.

ಆರನೇ ಪ್ರಶಸ್ತಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 240 ರನ್‌ ಗಳಿಸಿ ಆಲೌಟ್‌ ಆಯಿತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಟ್ರಾವಿಸ್‌ ಹೆಡ್ ಶತಕ ಮತ್ತು ಮಾರ್ನಸ್‌ ಲಾಬುಷೇನ್‌ ಅರ್ಧಶತಕದ ಬಲದಿಂದ ಇನ್ನೂ 7 ಓವರ್‌ಗಳು ಬಾಕಿ ಇರುವಂತೆಯೇ 4 ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತು.

ಇದು ಆಸ್ಟ್ರೇಲಿಯಾ ತಂಡಕ್ಕೆ ಆರನೇ ವಿಶ್ವಕಪ್‌ ಟ್ರೋಫಿ. ಏಕದಿನ ಕ್ರಿಕೆಟ್‌ ಅತ್ಯಂತ ಯಶಸ್ವಿ ತಂಡ ಎನಿಸಿರುವ ಆಸಿಸ್‌ ಈ ಹಿಂದೆ 1987, 1999, 2003, 2007, 2015ರಲ್ಲಿ ಪ್ರಶಸ್ತಿ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT