ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Cup | ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್‌ಗೆ 8 ವಿಕೆಟ್‌ಗಳ ಜಯ

Published 13 ಅಕ್ಟೋಬರ್ 2023, 16:20 IST
Last Updated 13 ಅಕ್ಟೋಬರ್ 2023, 16:20 IST
ಅಕ್ಷರ ಗಾತ್ರ

ಚೆನ್ನೈ : ನ್ಯೂಜಿಲೆಂಡ್ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್  ಟೂರ್ನಿಯಲ್ಲಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿತು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಲಾಕಿ ಫರ್ಗ್ಯುಸನ್ (49ಕ್ಕೆ3) ಅವರ ಅಮೋಘ ಬೌಲಿಂಗ್, ಕೇನ್ ವಿಲಿಯಮ್ಸನ್ ಮತ್ತು ಡೆರಿಲ್ ಮಿಚೆಲ್ ಅವರ ಅರ್ಧಶತಕಗಳ ಬಲದಿಂದ ಕಿವೀಸ್ ತಂಡವು 8 ವಿಕೆಟ್‌ಗಳಿಂದ ಬಾಂಗ್ಲಾದೇಶ ಎದುರು ಗೆದ್ದಿತು.

ಟಾಸ್ ಗೆದ್ದ ನ್ಯೂಜಿಲೆಂಡ್  ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನುಭವಿ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್ ಮತ್ತು ಲಾಕಿ ಫರ್ಗ್ಯುಸನ್ ಅವರು ಆರಂಭದಲ್ಲಿಯೇ ಯಶಸ್ಸು ಗಳಿಸಿದರು. ಇದರಿಂದಾಗಿ ಬಾಂಗ್ಲಾ ತಂಡವು 56 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ಮುಷ್ಫಿಕುರ್ ರಹೀಂ (66; 75ಎ, 4X6, 6X2) ಮತ್ತು ನಾಯಕ ಶಕೀಬ್ ಅಲ್ ಹಸನ್ (40; 51ಎ, 4X3, 6X2) ಐದನೇ ವಿಕೆಟ್ ಜೊತೆಯಾಟದಲ್ಲಿ 96 ರನ್ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 245 ರನ್‌ ಮೊತ್ತ ಗಳಿಸಿತು. ಬಾಂಗ್ಲಾ ತಂಡದ ಮೆಹಮುದುಲ್ಲಾ 49 ಎಸೆತಗಳಲ್ಲಿ 41 ರನ್‌ ಗಳಿಸಿದರು.

ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ಇನಿಂಗ್ಸ್‌ನಲ್ಲಿ ಇನ್ನೂ 43 ಎಸೆತಗಳು ಬಾಕಿ ಇದ್ದಾಗಲೇ 2 ವಿಕೆಟ್‌ಗಳಿಗೆ 248 ರನ್‌ ಗಳಿಸಿ ಗೆದ್ದಿತು.

ಕಿವೀಸ್ ಬಳಗದಲ್ಲಿರುವ ಬೆಂಗಳೂರು ಮೂಲದ ರಚಿನ್ ರವೀಂದ್ರ ಈ ಪಂದ್ಯದಲ್ಲಿ ಕೇವಲ 9 ರನ್‌ ಗಳಿಸಿ ಔಟಾದರು. ಆದರೆ ಅಮೋಘ ಲಯದಲ್ಲಿರುವ ಡೆವೊನ್ ಕಾನ್ವೆ (45; 59ಎ, 4X3) ಅವರೊಂದಿಗೆ ಸೇರಿದ ಕೇನ್ ವಿಲಿಯಮ್ಸನ್ (78; 107ಎ) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 80 ರನ್‌ ಸೇರಿಸಿದರು.

ಕಾನ್ವೆ ಔಟಾದ ನಂತರ ಕೇನ್ ಜೊತೆಗೆ ಸೇರಿದ ಡೆರಿಲ್ ಮಿಚೆಲ್ (ಔಟಾಗದೆ 89; 67ಎ, 4X6, 6X4) ಮೂರನೇ ವಿಕೆಟ್ ಜೊತೆಯಾಟದಲ್ಲಿ 108 ರನ್‌ ಸೇರಿಸಿದರು. ಆದರೆ ಕೇನ್ ವಿಲಿಯಮ್ಸನ್ ಗಾಯಗೊಂಡು ನಿವೃತ್ತಿ ಪಡೆದು ಮರಳಿದರು. ಮಿಚೆಲ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೇನ್ ಅವರು ಕಳೆದ ಐಪಿಎಲ್ ಸಂದರ್ಭದಲ್ಲಿ ಗಾಯಗೊಂಡಿದ್ದರು. ತದನಂತರ ಅವರು ದೀರ್ಘ ಕಾಲ ಕ್ರಿಕೆಟ್‌ನಿಂದ ದೂರವುಳಿದಿದ್ದರು. ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿಯ ಅವರು ಆಡಿರಲಿಲ್ಲ. ಆದ್ದರಿಂದ ಟಾಮ್ ಲಥಾಮ್ ತಂಡವನ್ನು ಮುನ್ನಡೆಸಿದ್ದರು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 245 (ಮೆಹದಿ ಹಸನ್ 30, ಶಕೀಬ್ ಅಲ್ ಹಸನ್ 40, ಮುಷ್ಫಿಕುರ್ ರಹೀಂ 66, ಮೆಹಮುದುಲ್ಲಾ ಔಟಾಗದೆ 41, ಟ್ರೆಂಟ್ ಬೌಲ್ಟ್ 45ಕ್ಕೆ2, ಮ್ಯಾಟ್ ಹೆನ್ರಿ 58ಕ್ಕೆ2, ಲಾಕಿ ಫರ್ಗ್ಯುಸನ್ 49ಕ್ಕೆ3) ನ್ಯೂಜಿಲೆಂಡ್: 42.5 ಓವರ್‌ಗಳಲ್ಲಿ 2  ವಿಕೆಟ್‌ಗಳಿಗೆ 248 (ಡೆವೊನ್ ಕಾನ್ವೆ 45, ಕೇನ್ ವಿಲಿಯಮ್ಸನ್ 78, ಡೆರಿಲ್ ಮಿಚೆಲ್ ಔಟಾಗದೆ 89, ಗ್ಲೆನ್ ಫಿಲಿಪ್ಸ್ ಔಟಾಗದೆ 16, ಮುಸ್ತಫಿಜುರ್ ರೆಹಮಾನ್ 36ಕ್ಕೆ1, ಶಕೀಬ್ ಅಲ್ ಹಸನ್ 54ಕ್ಕೆ1) ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 8 ವಿಕೆಟ್‌ಗಳ ಜಯ ಹಾಗೂ ಎರಡು ಅಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT